ರಾಮನಗರ: ಜಿಲ್ಲೆಯಲ್ಲಿನ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳ ಆಡಳಿತಾವಧಿ ಮುಗಿದು ಆರು ತಿಂಗಳು ಕಳೆದಿದ್ದರೂ ಚುನಾವಣೆಯ ಸದ್ದು ಇಲ್ಲದಾಗಿದೆ. ಇದರಿಂದಾಗಿ ಅಧಿಕಾರಿಗಳೇ ಆಡಳಿತದ ದರ್ಬಾರು ನಡೆಸುತ್ತಿದ್ದು, ಜನರು ಪರದಾಡುತ್ತಿದ್ದಾರೆ.
ಚನ್ನಪಟ್ಟಣ ನಗರಸಭೆ ಆಡಳಿತಾವಧಿಯು ಕಳೆದ ಮಾರ್ಚ್ 14ರಂದು, ಕನಕಪುರ ಹಾಗು ರಾಮನಗರ ನಗರಸಭೆಗಳ ಆಡಳಿತಾವಧಿಯು ಮಾರ್ಚ್ 16ಕ್ಕೆ ಕೊನೆಗೊಂಡಿದೆ. ಮಾಗಡಿ ಪುರಸಭೆಯ ಅವಧಿಯೂ ಮಾ.18ಕ್ಕೆ ಅಂತ್ಯವಾಗಿದೆ. ಸದ್ಯ ಈ ನಾಲ್ಕೂ ಕಡೆ ಅಧಿಕಾರಿಗಳ ಆಡಳಿತವಿದೆ.
ಈ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಲುವಾಗಿ ಚುನಾವಣಾ ಆಯೋಗವು ಕಳೆದ ವರ್ಷ ನವೆಂಬರ್‌ನಲ್ಲೇ ಸಿದ್ಧತೆ ಆರಂಭಿಸಿತ್ತು. ಆದರೆ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ ಕಾರಣ ವಿಳಂಬವಾಯಿತು. ಕಳೆದ ಮೇ–ಜೂನ್‌ನಲ್ಲಿ ನಲ್ಲಿ ರಾಜ್ಯದ 22 ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ರಾಮನಗರ ಸೇರಿದಂತೆ ಕೆಲವೇ ಜಿಲ್ಲೆಗಳನ್ನೂ ಇದರಿಂದ ಹೊರಗಿಡಲಾಗಿತ್ತು. ನಂತರದಲ್ಲಿ ನ್ಯಾಯಾಲಯದಲ್ಲಿನ ಎಲ್ಲ ವಿವಾದಗಳೂ ಬಗೆಹರಿದರೂ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಮನಸ್ಸು ಮಾಡುತ್ತಿಲ್ಲ.
ಹದಗೆಟ್ಟ ಆಡಳಿತ: ನಗರಸಭೆ ಹಾಗೂ ಪುರಸಭೆಗಳಲ್ಲಿ ಜನಪ್ರತಿನಿಧಿಗಳೇ ಇಲ್ಲದ ಕಾರಣ ಅಧಿಕಾರಿಗಳ ದರ್ಬಾರ್ ನಡೆದಿದೆ. ಜನರ ಅನುಕೂಲಕ್ಕೆ ಬೇಕಾದ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತಿಲ್ಲ ಎಂದು ಜನರು ದೂರುತ್ತಾರೆ.
ರಾಮನಗರದಲ್ಲಿ ಕಸದ ಸಮಸ್ಯೆ ತೀವ್ರವಾಗಿದೆ. ಎಲ್ಲಿಯೂ ಕಸ ವಿಲೇವಾರಿ ಸಮರ್ಪಕವಾಗಿ ನಡೆದಿಲ್ಲ. ಕೆಲವು ಕಡೆ ವಾರದಿಂದಲೂ ಕಸದ ರಾಶಿ ಬಿದ್ದಿದೆ. ಮನೆಮನೆಗಳಿಂದಲೂ ಕಸ ಸಂಗ್ರಹಣೆ ಕಾರ್ಯ ಆಗುತ್ತಿಲ್ಲ. ಬೀದಿಗಳು ಕಸ ಸಂಗ್ರಹಣೆಯ ಅಡ್ಡೆಯಾಗುತ್ತಿವೆ. ಕಸ ವಿಲೇವಾರಿಗೆ ಜಾಗ ಗುರುತಿಸಿ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತದಿಂದ ಸಾಧ್ಯವಾಗಿಲ್ಲ. ಕಣ್ವ ಬಳಿ ಘಟಕ ಆರಂಭಕ್ಕೆ ಪ್ರಯತ್ನ ನಡೆದಿದೆಯಾದರೂ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ.
ನಗರದ ಒಳಗಿನ ಚರಂಡಿಗಳಲ್ಲಿ ಹೂಳೆತ್ತುವ ಕೆಲಸ ನಡೆದಿಲ್ಲ. ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯ ಆಗಿಲ್ಲ. ಕೆಲವು ಕಡೆ ಮಳೆಗಾಲದಲ್ಲಿಯೇ ನೀರಿನ ಕೊರತೆ ಇದೆ. ಅಂತಹ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಜನರು ದೂರುತ್ತಾರೆ.
ಮತ್ತೊಂದೆಡೆ ಸ್ಥಳೀಯ ನಗರಸಭೆಗಳಿಂದ ಜನರಿಗೆ ಬೇಕಾದ ಪ್ರಮಾಣಪತ್ರಗಳು, ಕರ ಸಂಗ್ರಹವೂ ನಿಯಮಿತವಾಗಿ ನಡೆದಿಲ್ಲ. ಇ–ಆಸ್ತಿ ಖಾತೆ, ಉದ್ದಿಮೆ ಪರವಾನಗಿ, ಕಟ್ಟಡ ಪರವಾನಗಿ ಸೇರಿದಂತೆ ಹಲವು ಕಾರ್ಯಗಳಿಗೆ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.
‘ಜನಪ್ರತಿನಿಧಿಗಳು ಇದ್ದಿದ್ದರೆ ನಿಯಮಿತವಾಗಿ ಸಭೆಗಳು ನಡೆದು ಜನರ ಕುಂದುಕೊರತೆಗಳಿಗೆ ಪರಿಹಾರ ದೊರಕುತ್ತಿತ್ತು. ಈಗ ಆಡಳಿತ ಮಂಡಳಿಯೇ ಇಲ್ಲದಿರುವ ಕಾರಣ ಅಧಿಕಾರಿಗಳನ್ನು ಪ್ರಶ್ನಿಸುವವರು ಇಲ್ಲದಾಗಿದೆ. ಜಿಲ್ಲೆಯಲ್ಲಿ ಅವಧಿ ಮುಗಿದಿರುವ ನಾಲ್ಕು ಸಂಸ್ಥೆಗಳಿಗೆ ಚುನಾವಣಾ ಆಯೋಗವು ಇನ್ನಾದರೂ ಚುನಾವಣೆ ಘೋಷಿಸಬೇಕು’ ಎನ್ನುತ್ತಾರೆ ರಾಮನಗರ ನಗರಸಭೆಯ ಮಾಜಿ ಮೇಯರ್ ಚೇತನ್‌ಕುಮಾರ್.
ಜನಪ್ರತಿನಿಧಿಗಳ ಅಸಡ್ಡೆಗೆ ಆಕ್ರೋಶ
ನಗರಸಭೆಗಳಲ್ಲಿ ಆಡಳಿತ ಮಂಡಳಿ ಇಲ್ಲದ ಸಂದರ್ಭಗಳಲ್ಲಿ ಸ್ಥಳೀಯ ಶಾಸಕರು ಅಧಿಕಾರಿಗಳ ಜೊತೆ ಸಭೆ ನಡೆಸಿ ಆಡಳಿತ ಯಂತ್ರ ಸುಗಮವಾಗಿ ನಡೆಯುವ ಜವಾಬ್ದಾರಿ ಹೊರಬೇಕಾಗುತ್ತದೆ. ಆದರೆ ಜಿಲ್ಲೆಯಲ್ಲಿ ಯಾವ ಶಾಸಕರಿಂದಲೂ ಆ ಪ್ರಯತ್ನ ಆಗುತ್ತಿಲ್ಲ.
ರಾಮನಗರದಲ್ಲಿ ಕಸದ ಸಮಸ್ಯೆ ಮಿತಿಮೀರಿದ್ದರೂ ಶಾಸಕಿ ಅನಿತಾ ಕುಮಾರಸ್ವಾಮಿ ಒಂದೇ ಒಂದು ಸಭೆ ನಡೆಸಿಲ್ಲ. ಜನರ ಸಮಸ್ಯೆ ಆಲಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿಲ್ಲ. ಅವರ ಪಕ್ಕದ ಕ್ಷೇತ್ರವಾದ ಚನ್ನಪಟ್ಟಣದಲ್ಲಿ ಶಾಸಕರಾಗಿರುವ ಎಚ್.ಡಿ. ಕುಮಾರಸ್ವಾಮಿ ವರ್ಷಗಳ ನಂತರ ಬುಧವಾರ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಇಲ್ಲಿಯೂ ನಗರಸಭೆಯ ಸಮಸ್ಯೆಗಳ ಚರ್ಚೆಗೆ ಪ್ರತ್ಯೇಕ ಸಮಯ ದೊರೆತಿಲ್ಲ. ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಅಧಿಕಾರ ಕಳೆದುಕೊಂಡಿರುವ ಕಾರಣ ತಮ್ಮದೇ ಸರ್ಕಾರ ಇದ್ದರೂ ಸ್ಥಳೀಯ ಸಮಸ್ಯೆಗಳ ವಿಚಾರದಲ್ಲಿ ಮೌನ ತಾಳಿದ್ದಾರೆ.
ಕನಕಪುರದವರಾಗಿರುವ ಶಾಸಕ ಡಿ.ಕೆ. ಶಿವಕುಮಾರ್ ಸದ್ಯ ಇ.ಡಿ. ಬಂಧನದಲ್ಲಿ ಇದ್ದಾರೆ. ಇದಕ್ಕೂ ಮುನ್ನ ಸಮ್ಮಿಶ್ರ ಸರ್ಕಾರ ಉಳಿಸುವ ಕಾರ್ಯದಲ್ಲಿ ಅವರು ಮಗ್ನರಾಗಿದ್ದ ಕಾರಣ ಸ್ಥಳೀಯ ವಿಚಾರಗಳ ಕಡೆ ಗಮನ ನೀಡಿಲ್ಲ. ಸಂಸದ ಡಿ.ಕೆ ಸುರೇಶ್ ಸಹ ಕೆಲವು ವಾರಗಳಿಂದ ದೆಹಲಿಯಲ್ಲೇ ಉಳಿದಿದ್ದಾರೆ. ಮಾಗಡಿಯಲ್ಲಿ ಶಾಸಕ ಎ.ಮಂಜುನಾಥ್ ಆಗೊಮ್ಮೆ ಈಗೊಮ್ಮೆ ಸಮಸ್ಯೆ ಆಲಿಸುತ್ತಿದ್ದಾರಾದರೂ ಧೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.