ಮಾಗಡಿ: ವಿದ್ಯುತ್ ಪರಿವರ್ತಕ(ಟಿಸಿ) ಅಳವಡಿಕೆ ವಿಳಂಬದಿಂದ ಬೀದಿದೀಪ ಇಲ್ಲದೆ ಕೋಟೆ ಮುಖ್ಯರಸ್ತೆ ಕತ್ತಲಲ್ಲಿ ಮುಳಗಿದೆ.
ಬೀದಿದೀಪ ಇಲ್ಲದೆ ರಾತ್ರಿ ವೇಳೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಬಸ್ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕರು ಈ ರಸ್ತೆಯಲ್ಲಿ ರಾತ್ರಿ ವೇಳೆ ಸಂಚಾರ ಮಾಡಲು ಭಯಪಡುತ್ತಿದ್ದಾರೆ.
ಈ ಹಿಂದಿನ ಶಾಸಕರ ಅವಧಿಯಲ್ಲಿ ₹3.5 ಕೋಟಿ ವೆಚ್ಚದಲ್ಲಿ ಕೋಟೆಯ ರಸ್ತೆ ಇಕ್ಕೆಲ್ಲಗಳಲ್ಲಿ ವೈಟ್ ಟಾಪಿಂಗ್ ರಸ್ತೆ ನಿರ್ಮಿಸಲಾಗಿದೆ. ಈಗಾಗಲೇ ಕಾಮಗಾರಿ ಪೂರ್ಣವಾಗಿದ್ದು, ರಸ್ತೆಯಲ್ಲಿ ಹೊಸದಾಗಿ ವಿದ್ಯುತ್ ಕಂಬ ಅಳವಡಿಸಲಾಗಿದೆ. ಆದರೆ ವಿದ್ಯುತ್ ಪರಿವರ್ತಕ ಅಳವಡಿಕೆ ವಿಳಂಬ ಆಗುತ್ತಿರುವ ಕಾರಣ ವಿದ್ಯುತ್ ಪೂರೈಕೆ ಆಗದ ಬೀದಿದೀಪ ಉರಿಯುತ್ತಿಲ್ಲ. ಇದರಿಂದ ಕತ್ತಲಲ್ಲೆ ಜನ ಓಡಾಡಬೇಕಿದೆ.
ಮಾರುಕಟ್ಟೆಗೆ ಬರುವ ರೈತರಿಗೆ ತೊಂದರೆ: ಮುಂಜಾನೆ ಸಮಯದಲ್ಲಿ ಮಾರುಕಟ್ಟೆ ಹತ್ತಿರ ಇರುವುದರಿಂದ ಮಾರುಕಟ್ಟೆಗೆ ಬರುವ ರೈತರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಮಧ್ಯರಾತ್ರಿ ಎರಡು ಗಂಟೆಯಿಂದಲೇ ತರಕಾರಿ ಮಾರುಕಟ್ಟೆ ಪ್ರಾರಂಭವಾಗುತ್ತದೆ. ಆದರೆ ಬೀದಿದೀಪ ಬೆಳಕಿಲ್ಲದೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ದ್ವಿಚಕ್ರ ವಾಹನದಲ್ಲಿ ಬರುವ ರೈತರಿಗೆ ಮುಂದೆ ಏನಿದೆ ಎಂಬುದೇ ಗೊತ್ತಾಗದೆ ಭಯದಿಂದ ವಾಹನ ಚಾಲನೆ ಮಾಡಬೇಕಿದೆ.
ಪೊಲೀಸ್ ಠಾಣೆ ಸಿಬ್ಬಂದಿ ವಸತಿಗೃಹಕ್ಕೆ ಓಡಾಡಲು ಸಮಸ್ಯೆಯಾಗಿದೆ. ಅದಷ್ಟು ಬೇಗ ವಿದ್ಯುತ್ ಸಂಪರ್ಕ ಕಲ್ಪಿಸಿ ವಿದ್ಯುತ್ ದೀಪ ಉರಿಯುವಂತೆ ಮಾಡಿ ಜನ ಅನುಭವಿಸುತ್ತಿರುವ ಸಮಸ್ಯೆಗೆ ಅಂತ್ಯ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಳ್ಳರ ಅಡ್ಡ ಪೊಲೀಸ್ ಠಾಣೆ
ಸರ್ಕಾರಿ ಬಸ್ ನಿಲ್ದಾಣ ಖಾಸಗಿ ಬಸ್ ನಿಲ್ದಾಣ ಕೋಟೆ ಮೈದಾನ ಕೆಂಪೇಗೌಡ ವೃತ್ತದ ರಸ್ತೆ ಮತ್ತು ಮಾಗಡಿ ಬೆಂಗಳೂರು ಸಂಪರ್ಕಿಸುವ ರಸ್ತೆ ಇದಾಗಿದೆ. ಪ್ರತಿದಿನವೂ ಸಾಕಷ್ಟು ಮಂದಿ ಇಲ್ಲಿ ಓಡಾಡುತ್ತಾರೆ. ಬೀದಿದೀಪ ಇಲ್ಲದಿರುವುದರಿಂದ ಇಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಬೀದಿದೀಪ ಇಲ್ಲದಿರುವುದನ್ನು ಬಂಡವಾಳ ಮಾಡಿಕೊಂಡಿರುವ ಕಳ್ಳರು ರಾತ್ರಿ ವೇಳೆ ಇಲ್ಲಿ ಓಡಾಡುವ ಜನರಿಂದ ಮೊಬೈಲ್ ಪರ್ಸ್ ಮತ್ತು ಕೈಯಲ್ಲಿ ಹಿಡಿದಿಕೊಂಡಿರುವ ವಸ್ತುಗಳನ್ನು ಕಸಿದು ಪರಾರಿಯಾಗುತ್ತಿದ್ದಾರೆ. ಈಚೆಗೆ ಇದು ಕಳ್ಳರ ಅಡ್ಡವಾಗಿ ಮಾರ್ಪಟ್ಟಿದೆ.
ವಾರದೊಳಗೆ ಅಳವಡಿಕೆ
ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ವಿದ್ಯುತ್ ಪರಿವರ್ತಕ ಅಳವಡಿಸಲು ಬೆಸ್ಕಾಂ ಇಲಾಖೆಗೆ ಹಣ ಪಾವತಿಸಲಾಗಿದೆ. ವಾರದೊಳಗೆ ಹೊಸ ಟಿಸಿ ಬರಲಿದ್ದು ಬೀದಿ ದೀಪಕ್ಕೆ ವಿದ್ಯುತ್ ಸಂಪರ್ಕ ನೀಡಿ ಸಮಸ್ಯೆ ಬಗೆಹರಿಸಲಾಗುವುದು. ಮಾಗಡಿ ಜೊತೆಗೆ ಕುದೂರಿನಲ್ಲೂ ಇದೇ ರೀತಿ ಸಮಸ್ಯೆಯಾಗಿದ್ದು ಅದನ್ನು ಕೂಡ ಶೀಘ್ರದಲ್ಲೇ ಬಗೆಹರಿಸಲಾಗುವುದು’ ಎಂದು ಇಲಾಖೆಯ ಎಇಇ ಹನುಮಂತರಾಜು ತಿಳಿಸಿದ್ದಾರೆ.
ಬೀದಿದೀಪ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಲಾಗುವುದು. ಹೊಸ ಸಂಪರ್ಕ ಬರುವವರೆಗೂ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಪುರಸಭೆಯ ಹಳೆಯ ವಿದ್ಯುತ್ ಕಂಬಗಳಿಗೆ ಸಂಪರ್ಕ ಕಲ್ಪಿಸಲಾಗುವುದು.-ಶಿವರುದ್ರಯ್ಯ ಮುಖ್ಯಾಧಿಕಾರಿ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.