ರಾಮನಗರ: ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಮತ್ತೆ ರಸ್ತೆ ಉಬ್ಬು ತಲೆ ಎತ್ತಿದ್ದು, ಅಧಿಕಾರಿಗಳ ಈ ಕ್ರಮ ಚರ್ಚೆಗೆ ಗ್ರಾಸವಾಗಿದೆ.
ಹಿಂದೊಮ್ಮೆಯೂ ಇದೇ ಸ್ಥಳದಲ್ಲಿ ಹೀಗೆ ಅಡ್ಡಾದಿಡ್ಡಿಯಾಗಿ ಎರಡೂ ಕಡೆ ರಸ್ತೆ ಉಬ್ಬು ನಿರ್ಮಿಸಲಾಗಿತ್ತು. ಹಂಪ್ಸ್ ಕಾಣದೇ ಸಾಕಷ್ಟು ವಾಹನ ಸವಾರರು ಎಡವಿ ಅಪಘಾತಗಳೂ ಸಂಭವಿಸಿತ್ತು. ಎರಡೂ ಕಡೆ ಇಳಿಜಾರು ಇರುವ ಕಾರಣ ಇಲ್ಲಿ ಹಂಪ್ ನಿರ್ಮಾಣ ವೈಜ್ಞಾನಿಕವಲ್ಲ ಎಂದು ಸಂಚಾರ ಪೊಲೀಸರು ಕಿವಿಮಾತು ಹೇಳಿದ್ದರು. ಮಾಧ್ಯಮಗಳ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಹಂಪ್ಸ್ ತೆರವುಗೊಳಿಸಿದ್ದರು.
ಆದರೆ ಇದೀಗ ಮತ್ತೆ ಅದೇ ಜಾಗದಲ್ಲಿ ಹಂಪ್ಸ್ ಹಾಕಲಾಗಿದೆ. ಪದೇ ಪದೇ ಹೆದ್ದಾರಿ ವಿರೂಪಗೊಳಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ಅಸಮಾಧಾನವೂ ವ್ಯಕ್ತವಾಗಿದೆ. ಅಧಿಕಾರಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಇದನ್ನು ನಿರ್ಮಿಸಲಾಗಿದೆ ಎಂಬ ಆಕ್ಷೇಪಣೆಗಳೂ ಕೇಳಿ ಬಂದಿವೆ.
ಆದರೆ ಈ ಬಗ್ಗೆ ಜಿಲ್ಲಾಧಿಕಾರಿ ಕೆ. ರಾಜೇಂದ್ರ ಸಮಜಾಯಿಷಿ ನೀಡಿದ್ದು, ಅಪಘಾತಗಳ ನಿಯಂತ್ರಣಕ್ಕಾಗಿ ಈ ರಸ್ತೆ ಉಬ್ಬು ನಿರ್ಮಿಸಲಾಗಿದೆ ಎಂದಿದ್ದಾರೆ.
ಬೆಂಗಳೂರು -ಮೈಸೂರು ರಸ್ತೆಯಲ್ಲಿ ದಿನ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ರಾಮನಗರ ಪ್ರವೇಶ ಸಂದರ್ಭದಲ್ಲಿ ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿದ್ದವು. ಇದರಿಂದ ಜನರ ಓಡಾಟಕ್ಕೆ ತೊಂದರೆ ಆಗಿತ್ತು. ಸ್ಥಳೀಯ ವಾಹನ ಸವಾರರು ಹಾಗೂ ಪಾದಚಾರಿಗಳ ಹಿತದೃಷ್ಟಿಯಿಂದ ಹಂಪ್ಸ್ ಹಾಕಿ, ಬ್ಯಾರಿಕೇಡ್‌ಗಳನ್ನು ಇಡಲಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.