ADVERTISEMENT

ಕೊರೊನಾ ಸೇನಾನಿಗಳು 2021- ಪ್ರಜಾವಾಣಿ ಗುರುತಿಸಿದ ರಾಮನಗರ ಜಿಲ್ಲೆಯ ಸಾಧಕರಿವರು

ಪ್ರಜಾವಾಣಿ ವಿಶೇಷ
Published 2 ಜನವರಿ 2021, 2:37 IST
Last Updated 2 ಜನವರಿ 2021, 2:37 IST
ಪ್ರಜಾವಾಣಿ ಕೊರೊನಾ ಸೇನಾನಿಗಳು 2021
ಪ್ರಜಾವಾಣಿ ಕೊರೊನಾ ಸೇನಾನಿಗಳು 2021   

ಮನೆಯ ಗೋಡೆ ಮೇಲೆ ತೂಗುತ್ತಿದ್ದ ಹಳೆಯ ಕ್ಯಾಲೆಂಡರ್‌ ಬದಲಾಗಿದೆ. ಅದರ ಸ್ಥಳದಲ್ಲಿ 2021ರ ರಂಗುರಂಗಿನ ಹೊಸ ಕ್ಯಾಲೆಂಡರ್‌ ಬಂದು ಕೂತಿದೆ. ಬದುಕಿನ ಬಂಡಿ ಎಳೆಯುವ ಅಂಕಿಗಳ ಮೇಲೆ ಬಣ್ಣ ಮೆತ್ತಿಕೊಂಡಿದೆ. ಹೊಸ ವರ್ಷದ ಮೊದಲ ದಿನ ಸುಮ್ಮನೆ ಕುಳಿತು ಹಿಂದಿನ ವರ್ಷದತ್ತ ಒಮ್ಮೆ ಕಣ್ಣೋಟ ಬೀರಿದರೆ ನೆನಪುಗಳ ದೊಡ್ಡ ಸಂತೆಯ ಬಾಗಿಲು ತೆರೆದುಕೊಳ್ಳುತ್ತದೆ. ಆ ಸಂತೆಯಲ್ಲಿ ಹುಡುಕಿದರೆ ನಲಿವಿಗಿಂತ ನೋವಿನ ಮೂಟೆಗಳೇ ಹೆಚ್ಚು ಸಿಗುತ್ತವೆ.

ಎಲ್ಲರೂ ಕೋವಿಡ್ ಸಂಕಷ್ಟದ ಕುಲುಮೆಯಲ್ಲಿ ಬೇಯುತ್ತಿದ್ದೇವೆ. ಕೊರೊನಾ ತಂದಿತ್ತ ಸಂಕಷ್ಟದ ಹೊರೆಯನ್ನು ತುಸು ಇಳಿಸಿಕೊಂಡು ಹೊಸ ಭರವಸೆಯ ಹೆಜ್ಜೆಗಳನ್ನಿಡುತ್ತಾ ನೂತನ ವರ್ಷವನ್ನು ಬರಮಾಡಿಕೊಳ್ಳುವ ಹೊತ್ತು ಇದಾಗಿದೆ. ಈ ಸುಸಮಯವು ಸಕಾರಾತ್ಮಕ ಆಲೋಚನೆಗಳಿಗೆ ಸ್ಫೂರ್ತಿಯಾಗಲಿ ಎಂಬ ದೃಢ ಸಂಕಲ್ಪದೊಟ್ಟಿಗೆ ‘ಪ್ರಜಾವಾಣಿ’ ದಿಟ್ಟಹೆಜ್ಜೆ ಇಟ್ಟಿದೆ.

ಈ ಸಂಕಷ್ಟದಲ್ಲಿ ತಮ್ಮ ಅವಿರತ ಶ್ರಮದ ಮೂಲಕ ಜನರಿಗೆ ನೆರವಾದ ಸಾಧಕರನ್ನು ಪರಿಚಯಿಸುವ ಕೆಲಸ ಮಾಡಿದ್ದೇವೆ. ಹೊಸ ವರ್ಷದ ಹಾದಿಯಲ್ಲಿ ಇನ್ನಷ್ಟು ಮಂದಿಗೆ ಇದು ಪ್ರೇರಣೆಯಾಗಲಿ ಎಂಬುದೇ ನಮ್ಮ ಆಶಯ ಹಾಗೂ ಹಂಬಲ.

ADVERTISEMENT

ಪ್ರಚಾರಕ್ಕೆ ಹಂಬಲಿಸಿದೇ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಇನ್ನೂ ಅನೇಕರೂ ನಮ್ಮ ನಡುವಿದ್ದಾರೆ. ಇಂತಹವರ ಸಂತತಿ ನೂರ್ಮಡಿಯಾಗಲಿ. ಇವರ ಅರ್ಪಣಾ ಮನೋಭಾವ ಹೊಸ ವರ್ಷದ ಹೊಸ್ತಿಲಲ್ಲಿ ಎಲ್ಲರಿಗೂ ಮಾದರಿಯಾಗಲಿ ಎಂಬ ಸದಾಶಯ ನಮ್ಮದು...

1. ರಜೆ ಇಲ್ಲದ ದುಡಿಮೆ; ಕಾಯಕ ನಿಷ್ಠೆಯ ವೈದ್ಯ

ನರಸಿಂಹಮೂರ್ತಿ

‘ಕೋವಿಡ್‌ ಸಂದರ್ಭ ಮೂರು ತಿಂಗಳ ಕಾಲ ಸರ್ಕಾರಿ ಪ್ರವಾಸಿ ಮಂದಿರದಲ್ಲೇ ಉಳಿದಿದ್ದೆ. ಇದ್ದ ಒಬ್ಬ ಮಗನ ಮುಖ ನೋಡುವುದೂ ಕಷ್ಟವಾಗಿತ್ತು. ಆದರೆ ಎಂದೂ ಅದರಿಂದ ಬೇಸರಗೊಳ್ಳಲಿಲ್ಲ. ನಾನು ಧೈರ್ಯ ತಂದುಕೊಂಡು, ಇತರರಿಗೂ ಧೈರ್ಯ ತುಂಬಿ ಉತ್ಸಾಹದಿಂದ ಕೆಲಸ ಮಾಡಿದೆವು’

–ಹೀಗೆಂದು ತಮ್ಮ ಅನುಭವ ವಿವರಿಸಿದ್ದು ಕನಕಪುರದ ಸರ್ಕಾರಿ ಆಸ್ಪತ್ರೆಯ ವೈದ್ಯ ನರಸಿಂಹಮೂರ್ತಿ. ವೃತ್ತಿಯಲ್ಲಿ ಫಿಜಿಶಿಯನ್‌ ಆಗಿರುವ ಅವರು ರಾಮನಗರದ ಕಂದಾಯ ಭವನದಲ್ಲಿ ಕೋವಿಡ್ ಆಸ್ಪತ್ರೆ ಬಾಗಿಲು ತೆರೆದ ದಿನದಿಂದ ಈವರೆಗೆ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಿಪಿಇ ಕಿಟ್‌ ತೊಟ್ಟು ಆರೇಳು ಗಂಟೆ ಕಾಲ ಬೆವರಿನಲ್ಲಿ ತೋಯ್ದು ಕೆಲಸ ಮಾಡಿದ್ದಾರೆ. ತಿಂಗಳುಗಳ ಕಾಲ ರಜೆಯೇ ಇಲ್ಲದೆ ದುಡಿದಿದ್ದಾರೆ.

‘ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದು ನಮಗೂ ಹೊಸ ಅನುಭವ. ಆರಂಭದ ಕೆಲ ದಿನಗಳು ತುಂಬಾ ಕಷ್ಟವಿತ್ತು’ ಎನ್ನುವ ಅವರು, ಆರಂಭದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದ ಸಹೋದ್ಯೋಗಿ ವೈದ್ಯರನ್ನು ತಮ್ಮ ಮಾತುಗಳಿಂದ ಹುರಿದುಂಬಿಸಿದ್ದಾರೆ. ರೋಗಿಗಳ ಜೊತೆಯೂ ಸಮಾಲೋಚನೆ ನಡೆಸುತ್ತಾ ಅವರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಿದ್ದಾರೆ. ಕೊರೊನಾ ಸೋಂಕಿಗೆ ಒಳಗಾದ ತಮ್ಮ ಪತ್ನಿಯನ್ನೂ ತಾವು ಕಾರ್ಯ ನಿರ್ವಹಿಸುವ ಕೋವಿಡ್ ಆಸ್ಪತ್ರೆಯಲ್ಲೇ ದಾಖಲಿಸಿ ಆರೈಕೆ ಮಾಡಿದ್ದಾರೆ.

ನರಸಿಂಹ ಮೂರ್ತಿ ಅವರದ್ದು ವೈದ್ಯಕೀಯ ಕ್ಷೇತ್ರದಲ್ಲಿ 18 ವರ್ಷಗಳ ಅನುಭವ. ಬೆಂಗಳೂರಿನ ನೆಲಮಂಗಲದವರಾದ ಅವರು ಸದ್ಯ ಕನಕಪುರ ಸರ್ಕಾರಿ ಆಸ್ಪತ್ರೆ ಜೊತೆಗೆ ರಾಮನಗರದ ಕೋವಿಡ್ ಆಸ್ಪತ್ರೆಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.

2.ಬಹುಮುಖಿ ಕಾರ್ಯ ನಿರ್ವಹಣೆ ಗರಿಮೆ

ಕೆ.ಆರ್. ಹರಿಣಾಕ್ಷಿ

ತರಬೇತಿ ಕೇಂದ್ರದಲ್ಲಿ ಹಿರಿಯ ಕಿರಿಯ ಆರೋಗ್ಯ ಸಹಾಯಕರಿಗೆ ಮಾರ್ಗದರ್ಶನ, ಕೋವಿಡ್‌ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಶುಶ್ರೂಷೆ. ಜೊತೆಗೆ ಕೋವಿಡ್‌ ವಾರ್‌ ರೂಂ ಮತ್ತು ಆಂಬುಲೆನ್ಸ್ ವ್ಯವಸ್ಥೆ ನಿರ್ವಹಣೆ...

ಹೀಗೆ ಕೋವಿಡ್‌ನ ತುರ್ತು ಪರಿಸ್ಥಿತಿಯಲ್ಲಿ ಬಹುಮುಖಿ ಕಾರ್ಯಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡವರು ನರ್ಸಿಂಗ್‌ ಅಧಿಕಾರಿ ಹುದ್ದೆಯಲ್ಲಿರುವ ಕೆ.ಆರ್. ಹರಿಣಾಕ್ಷಿ. ಇಲಾಖೆಯ ನರ್ಸಿಂಗ್‌ ಶಾಲೆಯ ಪ್ರಾಚಾರ್ಯೆಯಾಗಿ ತರಬೇತಿ ನೀಡುವ ಜೊತೆಗೆ ಕೋವಿಡ್‌ ಆಸ್ಪತ್ರೆಯಲ್ಲಿ ನಾನಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.

‘ಸೋಂಕು ಹೆಚ್ಚಿದ್ದ ದಿನಗಳಲ್ಲಿ ರಾಮನಗರದ ಆಸ್ಪತ್ರೆಯಲ್ಲಿ 165–170 ರೋಗಿಗಳಿದ್ದರು. ಪಿಪಿಇ ಕಿಟ್‌ ಧರಿಸಿ ಅವರ ಜೊತೆ ಓಡನಾಟ ಬೆಳೆಸುವ ಜೊತೆಗೆ ಔಷದೋಪಚಾರ, ಅಗತ್ಯವಾದ ಕೌನ್ಸೆಲಿಂಗ್‌ ಮಾಡುತ್ತಿದ್ದೆ. ರೋಗಿಗಳಿಗೆ ಅಗತ್ಯವಾದ ಆಹಾರ, ಆಮ್ಲಜನಕ ಮೊದಲಾದವುಗಳಿಗೆ ಕೊರತೆ ಆಗದಂತೆ ಎಚ್ಚರ ವಹಿಸುತ್ತಿದ್ದೆವು. ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಹಾಗೂ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಿಂದ ಯಾವುದೇ ತೊಂದರೆ ಆಗದಂತೆ ನಿಭಾಯಿಸಿದೆವು’ ಎಂದು ತಮ್ಮ ಕಾರ್ಯದ ಬಗ್ಗೆ ವಿವರಿಸುತ್ತಾರೆ ಅವರು.

ಮೂವತ್ತು ವರ್ಷಗಳಿಂದ ನರ್ಸಿಂಗ್‌ ಸೇವೆಯಲ್ಲಿ ಇರುವ ಹರಿಣಾಕ್ಷಿ ನರ್ಸಿಂಗ್‌ ಮತ್ತು ಕೌನ್ಸೆಲಿಂಗ್‌, ಫ್ಯಾಮಿಲಿ ಥೆರೆಪಿ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಧುಮೇಹಕ್ಕೆ ಸಂಬಂಧಿಸಿದಂತೆ ಪಿಎಚ್‌ಡಿ ಸಹ ಮಾಡುತ್ತಿದ್ದಾರೆ.

3. ಗುತ್ತಿಗೆ ಉದ್ಯೋಗದಲ್ಲೇ ಕರ್ತವ್ಯ ನಿಷ್ಠೆ

ಸತೀಶ್

ಕಳೆದ 13 ವರ್ಷಗಳಿಂದಲೂ ಗುತ್ತಿಗೆ ಆಧಾರದಲ್ಲೇ ಉದ್ಯೋಗ. ಆದರೂ ಕರ್ತವ್ಯ ನಿಷ್ಠೆ ಬಿಡದ ಇವರು ಅದೆಷ್ಟೋ ಕೋವಿಡ್‌ ರೋಗಿಗಳನ್ನು ಸಕಾಲಕ್ಕೆ ಆಸ್ಪತ್ರೆಗಳಿಗೆ ತಲುಪಿಸಿದ್ದಾರೆ. ಈ ಮೂಲಕ ಅವರ ಪ್ರಾಣ ಉಳಿಸಲು ನೆರವಾಗಿದ್ದಾರೆ.

ರಾಮನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆಂಬುಲೆನ್ಸ್‌ ಚಾಲಕರಾಗಿರುವ ಸತೀಶ್‌ಗೆ ಉದ್ಯೋಗ ಭದ್ರತೆಯೇ ಇಲ್ಲ. ಸ್ವತಃ ಕೋವಿಡ್‌ ಸೋಂಕಿಗೆ ತುತ್ತಾಗಿ, ಹತ್ತು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಬಳಿಕ ಎಂದಿನಂತೆ ಕರ್ತವ್ಯಕ್ಕೆ ಮರಳಿದ್ದಾರೆ. ಹಗಲು–ರಾತ್ರಿ ಎನ್ನದೇ ವಾಹನ ಓಡಿಸುತ್ತಾ, ರೋಗಿಗಳನ್ನು ಎತ್ತಿ–ಇಳಿಸಿ ಅತ್ತಿಂದಿತ್ತ ಸಾಗಿಸುತ್ತ ಅವರ ಚಿಕಿತ್ಸೆಗೆ ನೆರವಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಿಂದ ಕಂದಾಯ ಭವನದ ಕೋವಿಡ್‌ ರೆಫರಲ್ ಆಸ್ಪತ್ರೆ, ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆಗೆ ಶರವೇಗದಲ್ಲಿ ಅದೆಷ್ಟೋ ಬಾರಿ ಆಂಬುಲೆನ್ಸ್‌ನಲ್ಲಿ ಸುತ್ತಾಡಿದ್ದಾರೆ.

‘ಆರಂಭದಲ್ಲಿ ನನಗೂ ಎಲ್ಲರಂತೆ ಕೋವಿಡ್‌ ಎಂದರೆ ಭಯ ಇತ್ತು. ಆದರೆ ಒಮ್ಮೆ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡ ಬಳಿಕ ಆ ಭಯ ಹೋಗಿ ಜವಾಬ್ದಾರಿ ಬಂತು. ರೋಗಿಗಳ ಜೊತೆ ಸಂಪರ್ಕಕ್ಕೆ ಬರುತ್ತಿದ್ದ ಕಾರಣ ಸ್ಚಚ್ಛತೆಗೆ ಮೊದಲ ಆದ್ಯತೆ ನೀಡುತ್ತೇನೆ. ಕೋವಿಡ್‌ ಕರ್ತವ್ಯ ನಿರ್ವಹಿಸುವಾಗಿನಿಂದ ಮನೆಯವರ ಜೊತೆ ಅಂತರ ಕಾಯ್ದುಕೊಳ್ಳುತ್ತೇನೆ. ನಿತ್ಯ ಬೇರೊಂದು ಬಟ್ಟೆ ತೊಡುವ ಜೊತೆಗೆ ಕಡ್ಡಾಯವಾಗಿ ಬಿಸಿ ನೀರಿನ ಸ್ನಾನ ಮಾಡುತ್ತೇನೆ. ಯಾವಾಗ ಕರೆದರೂ ಕೆಲಸಕ್ಕೆ ಸಿದ್ಧ’ ಎನ್ನುತ್ತಾರೆ ಸತೀಶ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.