ADVERTISEMENT

ಕಾಂಗ್ರೆಸ್ ಪಾಲಿಗೆ ರಾಜ್ಯ ಎಟಿಎಂ ಇದ್ದಂತೆ: ಆರ್.ಅಶೋಕ ಆರೋಪ

ಕಾಂಗ್ರೆಸ್ ಪಾಲಿಗೆ ರಾಜ್ಯ ಎಟಿಎಂ ಇದ್ದಂತೆ: ಆರೋಪ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 15:00 IST
Last Updated 10 ನವೆಂಬರ್ 2024, 15:00 IST
ಚನ್ನಪಟ್ಟಣ ನಗರದ ಎನ್ ಡಿಎ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದರು. ಮಾಜಿ ಡಿಸಿಎಂ ಡಾ.ಸಿ.ಎನ್. ಆಶ್ವಥ್ ನಾರಾಯಣ, ಇತರರು ಹಾಜರಿದ್ದರು
ಚನ್ನಪಟ್ಟಣ ನಗರದ ಎನ್ ಡಿಎ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದರು. ಮಾಜಿ ಡಿಸಿಎಂ ಡಾ.ಸಿ.ಎನ್. ಆಶ್ವಥ್ ನಾರಾಯಣ, ಇತರರು ಹಾಜರಿದ್ದರು   

ಚನ್ನಪಟ್ಟಣ: ಕರ್ನಾಟಕ ಸರ್ಕಾರ ಕಾಂಗ್ರೆಸ್ ಪಾಲಿಗೆ ಎಟಿಎಂ ಇದ್ದಂತೆ. ಅಬಕಾರಿ ಇಲಾಖೆಯಿಂದ ₹900 ಕೋಟಿ ಹಣ ಸಂಗ್ರಹಿಸಿ ಮಹಾರಾಷ್ಟ್ರ ಚುನಾವಣೆ ಹಾಗೂ ಕರ್ನಾಟಕ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಿಗೆ ಹಣ ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್ ಹಂಚುತ್ತಿರುವ ಹಣ ಅಬಕಾರಿ ಇಲಾಖೆ ಮೂಲಕ ಸಂಗ್ರಹ ಮಾಡಿರುವ ಹಣ. ಒಂದು ಲೈಸೆನ್ಸ್ ನವೀಕರಣಕ್ಕೆ ₹2ರಿಂದ 3ಲಕ್ಷ ಲಂಚ ಪಡೆಯುತ್ತಿದ್ದಾರೆ. ಪ್ರತಿ ದಿನ ವೈನ್‌, ಬಾರ್ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದರು.

ಈಗಾಗಲೇ ಮಾಲೀಕರು ದೂರ ಕೂಡ ನೀಡಿದ್ದಾರೆ. ಮುಂದೆ ಪ್ರತಿಭಟನೆ ಮಾಡುವ ಎಚ್ಚರಿಕೆ  ನೀಡಿದ್ದಾರೆ ಎಂದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ, ಅಬಕಾರಿ ಇಲಾಖೆ ಮೂಲಕ ಚುನಾವಣೆಗೆ ಹಣ ಸಂಗ್ರಹಿಸುತ್ತಿರುವ ವಿಚಾರ ಹೇಳಿರುವುದು ಸತ್ಯ. ಲಿಕ್ಕರ್ ಅಸೋಸಿಯೇಷನ್ ದೂರು ನೀಡಿದೆ. ಪ್ರಧಾನ ಮಂತ್ರಿ ಬಗ್ಗೆ ಮಾತನಾಡಬೇಕಾದರೆ ಸಿ.ಎಂ ಹಾಗೂ ಡಿಸಿಎಂ ಗೌರವ ಇಟ್ಟು ಮಾತನಾಡಬೇಕು ಎಂದರು. 

‘ಉಪಚುನಾವಣೆ ಕಾರಣಕ್ಕೆ ಗೃಹಲಕ್ಷ್ಮಿ ಯೋಜನೆ ಮೂರು ತಿಂಗಳ ಹಣ ಬಿಡುಗಡೆ ಮಾಡಿದ್ದೀರಿ. ಬೇರೆ ಕಡೆ ಎಲ್ಲಿ ನಿಮ್ಮ ಗ್ಯಾರಂಟಿ ಕೆಲಸ ಮಾಡುತ್ತಿದೆ ತೋರಿಸಿ. ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಸತ್ತು ಹೋಗಿದೆ ಎಂದು ಟೀಕಿಸಿದರು.

ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ವಾದ್ರಾ ಅವರ ಚುನಾವಣೆಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭಾವಚಿತ್ರ ಇರುವ ಅಕ್ಕಿ ಚೀಲ ಹಂಚಲಾಗಿದೆ. ಅದನ್ನು ಅಲ್ಲಿಯ ಮುಖ್ಯಮಂತ್ರಿಯವರೇ ಖುದ್ದಾಗಿ ತೋರಿಸಿದ್ದಾರೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತೆ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದರು.

ಈಗಾಗಲೇ ಸರ್ಕಾರ ಮೂಡಾ, ವಾಲ್ಮೀಕಿ ಹಗರಣದಲ್ಲಿ ಸಿಲುಕಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಕೋಳಿ ಮೊಟ್ಟೆ ಕೊಡಲು ದಾನಿಗಳು ₹1500 ಕೋಟಿ ನೀಡಿದರೂ ಇಂದಿಗೂ ಮೊಟ್ಟೆ ಕೊಟ್ಟಿಲ್ಲ. ಈಗ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಮೇಲೆ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಸರ್ಕಾರ ಬದುಕಿದೆಯೋ, ಸತ್ತಿದೆಯೋ ಜನರೇ ನಿರ್ಧರಿಸಬೇಕು ಎಂದರು.

ರಾಜ್ಯದಲ್ಲಿ 1.12 ಲಕ್ಷ ಎಕರೆ ಭೂಮಿ ವಕ್ಫ್‌ಗೆ ಸೇರಿದ್ದು, ಇದಕ್ಕೆಲ್ಲ ದಾಖಲೆ ಇದೆ ಎಂದು ವಕ್ಫ್ ಮಂಡಳಿ ಹೇಳುತ್ತಿದೆ. ವಶಕ್ಕೆ ಪಡೆಯಿರಿ ಎಂದು ಮುಸ್ಲಿಂ ಮುಖಂಡರು ವಕ್ಫ್ ಗೆ ಈಗಾಗಲೇ ಒತ್ತಡ ಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಂಪೇಗೌಡರು ಕಟ್ಟಿರುವ ಹಲವು ಪೇಟೆಗಳನ್ನು ವಕ್ಫ್ ಬೋರ್ಡ್ ನಮ್ಮದೇ ಎನ್ನುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇನ್ನೂ ಏನೇನು ಮಾಡುತ್ತದೆಯೋ ಗೊತ್ತಿಲ್ಲ ಎಂದು ಹರಿಹಾಯ್ದರು.

ಕೋವಿಡ್ ಸಂದರ್ಭದಲ್ಲಿ ಹಗರಣ ಆಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ದೂರು ನೀಡುತ್ತವೆ ಎನ್ನುತ್ತಾರೆ. ಸದ್ಯ ರಾಜ್ಯದಲ್ಲಿ ವಕ್ಫ್, ಮೂಡಾ, ವಾಲ್ಮಿಕಿ ಹಗರಣದ ಬಗ್ಗೆ ಚರ್ಚೆ ಆಗುತ್ತಿದೆ. ಅದನ್ನು ದಿಕ್ಕು ತಪ್ಪಿಸಲು ಕೋವಿಡ್‌ ವಿಚಾರ ಮುಂದಕ್ಕೆ ತಂದಿದ್ದಾರೆ. ಸಮಿತಿ ವರದಿ ಬರಲು ಇನ್ನು ಆರು ತಿಂಗಳು ಬಾಕಿ ಇದೆ. ಆದರೂ, ರಾಜಕೀಯ ದ್ವೇಷದಿಂದ ಕೋವಿಡ್ ವಿಚಾರ ತಂದಿದ್ದಾರೆ ಎಂದರು.

ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಸೋಲು ಅನುಭವಿಸಲಿದೆ. ‘ದೇವೇಗೌಡರು ಬರುವವರೆಗೆ ಬೇರೆಯವರ ಹವಾ ಇತ್ತು. ಈಗ ಬಂದ ಮೇಲೆ ಅವರದೆ ಹವಾ’ ಎಂದರು.
ಮಾಜಿ ಡಿಸಿಎಂ ಡಾ.ಸಿ.ಎನ್.ಆಶ್ವಥ್ ನಾರಾಯಣ, ಶಾಸಕ ಕೆ.ಗೋಪಾಲಯ್ಯ, ಮಾಜಿ ಶಾಸಕರಾದ ಬಂಡಪ್ಪ ಕಾಶೆಂಪೂರ, ಎ.ಮಂಜುನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ಇತರರು ಹಾಜರಿದ್ದರು.

‘ಉಪ ಚುನಾವಣೆ ನಂತರ ಡಿಕೆಶಿ ಸಿಎಂ’

'ಉಪ ಚುನಾವಣೆ ನಂತರ ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೆ. ಅವರದೇ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಅಂದಮೇಲೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಅವರೇ ಒಪ್ಪಿಕೊಳ್ಳುತ್ತಿದ್ದಾರೆ’ ಎಂದಾಯಿತು. ಆರ್.ಅಶೋಕ್ ಪ್ರತಿಪಕ್ಷ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.