ಚನ್ನಪಟ್ಟಣ: ನಗರದ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಆದಷ್ಟು ಶೀಘ್ರ ಮುಕ್ತಾಯಗೊಳಿಸಲಾಗುವುದು ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಭರವಸೆ ನೀಡಿದರು.
ಗುರುವಾರ ನಗರದ ಎಲೇಕೇರಿ ಬಳಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ, 2025ರ ಫೆಬ್ರವರಿ ವೇಳೆಗೆ ಮೇಲ್ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
₹ 19.6 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ವಿಳಂಭವಾದ ಕಾರಣ ಕಾಮಗಾರಿ ಕುಂಟಿತವಾಗಿತ್ತು. ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಹಣ ಬಿಡುಗಡೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗ ಕಾಮಗಾರಿಯನ್ನು ಪುನರಾರಂಭಿಸಲಾಗಿದೆ. ಶೀಘ್ರ ಮುಕ್ತಾಯಗೊಳಿಸಲಾಗುವುದು ಎಂದರು.
ಇದೇ ವೇಳೆ ಸ್ಥಳೀಯರು ಚನ್ನಪಟ್ಟಣದಲ್ಲಿ ಹಲವು ರೈಲುಗಳು ನಿಲುಗಡೆ ಮಾಡದಿರುವ ಬಗ್ಗೆ ಸಂಸದರ ಗಮನಕ್ಕೆ ತಂದರು. ಚನ್ನಪಟ್ಟಣದಿಂದ ನೂರಾರು ಮಂದಿ ರೈಲ್ವೆ ಪ್ರಯಾಣಿಕರು ಪ್ರತಿದಿನ ಸಂಚರಿಸುತ್ತಿದ್ದಾರೆ. ಅವರಿಗೆ ಅನುಕೂಲವಾಗುವಂತೆ ಮೈಸೂರು–ಬೆಂಗಳೂರು ನಡುವೆ ಓಡಾಡುವ ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಮಾಡಿಸುವಂತೆ ಮನವಿ ಮಾಡಿಕೊಳ್ಳಲಾಯಿತು.
ಮಹಿಳೆಯೊಬ್ಬರು ತಾವು ಹೃದಯ ಸಂಬಂಧ ಖಾಯಿಲೆಯಿಂದ ನರಳುತ್ತಿದ್ದು, ಚಿಕಿತ್ಸೆಗೆ ಸಹಕರಿಸುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ರೈಲ್ವೆ ಇಲಾಖೆಯ ಹಿರಿಯ ವಿಭಾಗೀಯ ಎಂಜಿನಿಯರ್ ರುಚಿಕಾ, ಉಪ ಮುಖ್ಯ ಎಂಜಿನಿಯರ್ ಸತ್ಯ ನಾರಾಯಣ, ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.