ಮಾಗಡಿ: ತಾಲ್ಲೂಕಿನ ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿ ಬಳಿ ಅರ್ಧಕ್ಕೆ ನಿಂತಿರುವ ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡ ಪೂರ್ಣಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
2010–11ರಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರದ ಮೊದಲ ಅಂತಸ್ತಿನ ಕಟ್ಟಡ ಕಾಮಗಾರಿ ಆರಂಭವಾಯಿತು. ಆದರೆ, ಮೊದಲನೆ ಮಹಡಿ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅದರ ನಿರ್ವಹಣೆ ಇಲ್ಲದೆ ಕುಸಿಯುವ ಹಂತ ತಲುಪಿದೆ. ಅಂದು ಶಾಸಕರಾಗಿದ್ದ ಎಚ್.ಸಿ.ಬಾಲಕೃಷ್ಣ ಅವರು ಮೊದಲ ಹಂತಸ್ತಿನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.
ರಾಜಕೀಯ ಬದಲಾವಣೆಯಾಗಿ ಶಾಸಕ ಎ.ಮಂಜುನಾಥ್ ಅಧಿಕಾರದ ಅವಧಿ ಮುಗಿದು, ಮತ್ತೆ ಈಗ ಎಚ್.ಸಿ.ಬಾಲಕೃಷ್ಣ ಶಾಸಕರಾಗಿದ್ದಾರೆ. ಈಗಲಾದರೂ ರಾಜೀವ್ ಗಾಂಧಿ ಸೇವಾ ಕೇಂದ್ರ ಪೂರ್ಣಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಮ್ಮ ಗ್ರಾಮ ಪಂಚಾಯಿತಿ ಕೇಂದ್ರದ ಪಕ್ಕದಲ್ಲಿ ಅರ್ಧಕ್ಕೆ ನಿಂತಿರುವ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಶಾಸಕರಿಂದ ಅನುದಾನ ಪಡೆದು ಶೀಘ್ರವಾಗಿ ಕಟ್ಟಡ ಪೂರ್ಣಗೊಳಿಸಿ ಉದ್ಘಾಟಿಸುತ್ತೇವೆ- ರಾಜಣ್ಣ ಅಧ್ಯಕ್ಷರು ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿ
ಹಿಂದೆ ಇದ್ದ ಪಿಡಿಒ ಅವರು ರಾಜೀವ್ ಗಾಂಧಿ ಮೊದಲ ಮಹಡಿ ಕಟ್ಟಲು ₹5 ಲಕ್ಷಕ್ಕೆ ಟೆಂಡರ್ ಕರೆದಿದ್ದರು. ತಾಲ್ಲೂಕು ಪಂಚಾಯಿತಿ ಎಂಜಿನಿಯರಿಂಗ್ ಇಲಾಖೆಯವರು ಹಣ ಸಾಕಾಗುತ್ತಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ಟೆಂಡರ್‌ನಲ್ಲಿ ಒಪ್ಪಿಕೊಂಡ ಮೇಲೆ ಕಟ್ಟಡ ಪೂರ್ಣಗೊಳಿಸಬೇಕು. ಎಂಜಿನಿಯರಿಂಗ್ ಇಲಾಖೆಗೆ ಟೆಂಡರ್ ದಾಖಲೆ ನೀಡುವಂತೆ ಎರಡು ಪತ್ರ ಬರೆದಿದ್ದೇನೆ. ಮಾಹಿತಿ ನೀಡಿಲ್ಲ. ಸೇವಾ ಕೇಂದ್ರವನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಪಿಡಿಒ ನರಸಿಂಹಮೂರ್ತಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.