ADVERTISEMENT

ರಾಜೀವ್‌ಗಾಂಧಿ ಆರೋಗ್ಯ ವಿ.ವಿ. ಕ್ಯಾಂಪಸ್ ನಿರ್ಮಾಣಕ್ಕೆ ಬೊಮ್ಮಾಯಿ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 14:36 IST
Last Updated 27 ಮಾರ್ಚ್ 2023, 14:36 IST
ರಾಮನಗರ ತಾಲ್ಲೂಕಿನ ಅರ್ಚಕರಹಳ್ಳಿ ಬಳಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಯಾಂಪಸ್‌ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಭೂಮಿಪೂಜೆ ನೆರವೇರಿಸಿದರು. ( ಎಡದಿಂದ) ವಿಧಾನ ಪರಿಷತ್ ಸದಸ್ಯರಾದ ಸಿ.ಪಿ. ಯೋಗೇಶ್ವರ್‌, ಅ. ದೇವೇಗೌಡ, ಸಚಿವರಾದ ಕೆ. ಸುಧಾಕರ್, ನಾರಾಯಣ ಗೌಡ, ವಿ.ವಿ. ಕುಲಪತಿ ರಮೇಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಇದ್ದರು
ರಾಮನಗರ ತಾಲ್ಲೂಕಿನ ಅರ್ಚಕರಹಳ್ಳಿ ಬಳಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಯಾಂಪಸ್‌ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಭೂಮಿಪೂಜೆ ನೆರವೇರಿಸಿದರು. ( ಎಡದಿಂದ) ವಿಧಾನ ಪರಿಷತ್ ಸದಸ್ಯರಾದ ಸಿ.ಪಿ. ಯೋಗೇಶ್ವರ್‌, ಅ. ದೇವೇಗೌಡ, ಸಚಿವರಾದ ಕೆ. ಸುಧಾಕರ್, ನಾರಾಯಣ ಗೌಡ, ವಿ.ವಿ. ಕುಲಪತಿ ರಮೇಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಇದ್ದರು   

ರಾಮನಗರ: ಇಲ್ಲಿ ನಿರ್ಮಾಣ ಆಗಲಿರುವ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿಗೆ ವಿಧಾನಸೌಧ ನಿರ್ಮಾತೃ ಕೆಂಗಲ್‌ ಹನುಮಂತಯ್ಯ ಅವರ ಹೆಸರು ಇಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಇಲ್ಲಿನ ಅರ್ಚಕರಹಳ್ಳಿ ಬಳಿ ಸೋಮವಾರ ಆರೋಗ್ಯ ವಿ.ವಿ. ಕ್ಯಾಂಪಸ್ ನಿರ್ಮಾಣ ಹಾಗೂ ರೇಷ್ಮೆಗೂಡು ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕ ಸೇರಿದಂತೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ ಕೆಂಗಲ್ ಹನುಮಂತಯ್ಯ ಅವರ ಹೆಸರನ್ನು ಇಲ್ಲಿನ ಮೆಡಿಕಲ್ ಕಾಲೇಜಿಗೆ ಇಡಬೇಕು’ ಎಂಬ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಮನವಿಗೆ ಸ್ಪಂದಿಸಿದ ಅವರು ‘ಹನುಮಂತಯ್ಯ ರಾಮನಗರದವರಾಗಿದ್ದು, ಮುಖ್ಯಮಂತ್ರಿಯಾಗಿ ನಾಡಿಗೆ ಏಳಿಗೆಗೆ ದುಡಿದ ಮಹನೀಯ. ಮೆಡಿಕಲ್‌ ಕಾಲೇಜಿಗೆ ಇಲ್ಲಿನ ಮಣ್ಣಿನ ಮಗನ ಹೆಸರಿಡದೇ ಇನ್ಯಾರ ಹೆಸರು ಇಡಲು ಸಾಧ್ಯ?’ ಎಂದು ಪ್ರಶ್ನಿಸಿದರು. ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿಯಲ್ಲಿ ಈ ಬಗ್ಗೆ ಅನುಮೋದನೆ ಮಾಡಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಅವರು ಸೂಚಿಸಿದರು.

ADVERTISEMENT

ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಆರೋಗ್ಯ ವಿ.ವಿ. ಕ್ಯಾಂಪಸ್ ಇಂದು ಸಾಕಾರಗೊಳ್ಳುತ್ತಿದೆ. ವಿ.ವಿ. ಸ್ಥಾಪನೆಗಾಗಿ ಕಳೆದ 16 ವರ್ಷದಿಂದ ಸಂಘರ್ಷ ನಡೆದಿದ್ದು, ಕ್ಯಾಂಪಸ್ ನಿರ್ಮಾಣವೇ ಅನುಮಾನ ಎಂಬಂತ ಪರಿಸ್ಥಿತಿ ಇತ್ತು. ಎಲ್ಲ ಸಮಸ್ಯೆಗಳನ್ನು ಎದುರಿಸಿ , ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡಲಾಗಿದೆ. ಇಲ್ಲಿ 1 ಸಾವಿರ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ತಲೆ ಎತ್ತಲಿದ್ದು, ಚಿಕಿತ್ಸೆ ಹಾಗೂ ಸಂಶೋಧನೆಗೂ ಸಹಕಾರ ಆಗಲಿದೆ. ಭಾರತದಲ್ಲಿಯೇ ಇದು ಬಹುದೊಡ್ಡ ಆರೋಗ್ಯ ಕೇಂದ್ರವಾಗಿ ಆಗಿ ಬೆಳೆಯಲಿದೆ ಎಂದು ಆಶಿಸಿದರು.

ರಾಮನಗರ ಹೊಸ ಜಿಲ್ಲೆಯಾಗಿದ್ದು, ಆರೋಗ್ಯ ವಿ.ವಿ. ಕ್ಯಾಂಪಸ್ ಹಾಗೂ ಮೆಡಿಕಲ್ ಕಾಲೇಜು ಸಂಕೀರ್ಣ ಆದಲ್ಲಿ ಎಲ್ಲ ತಾಲ್ಲೂಕಿಗೂ ಅನುಕೂಲ ಆಗಲಿದೆ. ಇಲ್ಲಿ ನಿರ್ಮಾಣ ಆ ಹೈಟೆಕ್ ರೇಷ್ಮೆ ಮಾರುಕಟ್ಟೆ ರಾಜ್ಯದಲ್ಲಿಯೇ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ. ಮಾರುಕಟ್ಟೆ ನಿಯಂತ್ರಣ ಸಾಧ್ಯವಾಗಲಿದೆ. ಉತ್ತಮ ಬೆಲೆಯೂ ಸಿಗಲಿದೆ. ಮಾವು ಸಂಸ್ಲರಣಾ ಘಟಕಕ್ಕೆ ಚಾಲನೆ ನೀಡಿದ್ದು, ರೈತರಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.

ಹಿಂದಿನ ಸರ್ಕಾರದ ಘೋಷಣೆಗಳು ಬರೀ ಘೋಷಣೆಗಳೇ ಆಗಿದ್ದವು. ಆದರೆ ಸಮಾಜಕ್ಕೆ ನ್ಯಾಯ ಸಲ್ಲಿಸುವ ಕೆಲಸ ಆಗಿರಲಿಲ್ಲ. ಭಾಷಣಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ. ಜನರ ಸಮಸ್ಯೆಗೆ ಪರಿಹಾರ ನೀಡುವ ಜನೋಪಯೋಗಿ ನಾಯಕರು ಸಮಾಜಕ್ಕೆ ಬೇಕಿದೆ ಎಂದರು.

ನಮ್ಮದೇ ಯೋಜನೆ: ಬೆಂಗಳೂರು–ಮೈಸೂರು ದಶಪಥ ಹೆದ್ದಾರಿ ಬಿಜೆಪಿ ಸರ್ಕಾರದ ಯೋಜನೆ. ಅದರ ಡಿಪಿಆರ್ ಆಗಿದ್ದೇ 2016ರಲ್ಲಿ. ಆಗ ಪ್ರಧಾನಿ ಇದ್ದವರು ಮೋದಿ. 2019ರಲ್ಲಿ ಅದಕ್ಕೆ ಅಡಿಗಲ್ಲು ಹಾಕಿದವರು ಮೋದಿ. ತಾವು ಮಾಡದೇ ಇರುವ ಕೆಲಸವನ್ಮು ನಾವು‌ ಮಾಡಿದ್ದೇವೆ ಎನ್ನುವರಿಗೆ ನಾಚಿಕೆ ಆಗಬೇಕು. ಎಂದಿಗೂ ಸತ್ಯಕ್ಕೆ ಜಯವೇ ಸಿಗಲಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ತಿರುಗೇಟು ನೀಡಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ರಾಜ್ಯದ 54 ಲಕ್ಷ ರೈತರಿಗೆ ಕಳೆದ ನಾಲ್ಕು ವರ್ಷದಲ್ಲಿ ₹16 ಸಾವಿರ ಕೋಟಿ ನೀಡಲಾಗಿದೆ. ಜಿಲ್ಲೆಯಲ್ಲಿಯು 4.26 ಲಕ್ಷ ರೈತರಿಗೆ ಈ ನೆರವು ಸಿಕ್ಕಿದೆ. ಈ ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ ಮನೆಮನೆಗೆ ಔಷಧ ವಿತರಣೆ, ಆ್ಯಸಿಡ್ ದಾಳಿ ಸಂತ್ರಸ್ಥರಿಗೆ ಮಾಸಾಶನವನ್ನು ₹10 ಸಾವಿರಕ್ಕೆ ಏರಿಸಲಾಗಿದೆ. 12 ಹೊಸ ಕಿಮೋ ಥೆರೆಪಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ವಿವರಿಸಿದರು.

ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ ' ಆರೋಗ್ಯ ವಿ.ವಿ. ಕ್ಯಾಂಪಸ್ 270 ಎಕರೆ ವಿಸ್ತೀರ್ಣ ದಲ್ಲಿ, ₹600 ಕೋಟಿ ವೆಚ್ಚದಲ್ಲಿ ಸಾಕಾರಗೊಳ್ಳುತ್ತಿದೆ. ಚನ್ನಪಟ್ಟಣದಲ್ಲಿ ಬೃಹತ್ ರೇಷ್ಮೆ ಮಾರುಕಟ್ಟೆಯು 14 ಎಕರೆ ಜಮೀನಿನಲ್ಲಿ ಸ್ಥಾಪನೆ ಆಗುತ್ತಿದ್ದು, ಒಟ್ಟು ₹150 ಕೋಟಿ ಅಂದಾಜಿಸಲಾಗಿದೆ. ಮೊದಲ ಹಂತದಲ್ಲಿ ₹75 ಕೋಟಿ ವೆಚ್ಚದಲ್ಲಿ ಇಂದು ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲ ಆಗಲಿದೆ' ಎಂದರು.

ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ₹1400 ಕೋಟಿ ವೆಚ್ಚದಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ. ಇದರಿಂದ 1500 ಗ್ರಾಮಗಳ 2 ಲಕ್ಷ ಕುಟುಂಬಗಳಿಗೆ ಅನುಕೂಲ ಆಗಲಿದೆ. ಇದಲ್ಲದೆ ವಿವಿಧ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಮುಕ್ತಾಯದ ಹಂತದಲ್ಲಿವೆ. ಶ್ರೀರಂಗ, ಸತ್ತೇಗಾಲ ಯೋಜನೆ ಸದ್ಯದಲ್ಲೇ ಉದ್ಘಾಟನೆ ಆಗಲಿವೆ ಎಂದು ವಿವರಿಸಿದರು.

ಇದೇ ವೇಳೆ ಕೆಎಸ್‍ಐಸಿ ವತಿಯಿಂದ 2020–21ನೇ ಸಾಲಿಗೆ ₹7.20 ಕೋಟಿ ಹಾಗೂ 2021–22ನೇ ಸಾಲಿಗೆ ₹9.49 ಕೋಟಿ ಡಿವಿಡೆಂಟ್‌ ಅನ್ನು ಮುಖ್ಯಮಂತ್ರಿ ಅವರಿಗೆ ನೀಡಲಾಯಿತು. ಕೆಎಸ್‌ಐಸಿ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹50 ಲಕ್ಷ ನೀಡಲಾಯಿತು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಇದೇ ವೇಳೆ ಹಕ್ಕುಪತ್ರ, ಅನುದಾನ ವಿತರಿಸಲಾಯಿತು.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ರೇಷ್ಮೆ ಸಚಿವ ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯರಾದ ಸಿ.ಪಿ. ಯೋಗೇಶ್ವರ್, ಅ. ದೇವೇಗೌಡ, ರೇಷ್ಮೆ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೌತಮ್‍ಗೌಡ, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಕೆ. ವಾಸುದೇವ, ರೇಷ್ಮೆ ಇಲಾಖೆ ಆಯುಕ್ತ ರಾಜೇಶ್‌ ಗೌಡ, ರಾಜೀವ್‌ಗಾಂಧಿ ಆರೋಗ್ಯ ವಿ.ವಿ. ಕುಲಪತಿ ರಮೇಶ್, ಕುಲಸಚಿವ ಎ.ಬಿ. ಬಸವರಾಜು, ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ಜಿ.ಪಂ. ಸಿಇಒ ದಿಗ್ವಿಜಯ್ ಬೋಡ್ಕೆ , ಐಜಿಪಿ ರವಿಕಾಂತೇಗೌಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‍ರೆಡ್ಡಿ , ವಿಭೂತಿಕೆರೆ ಗ್ರಾ.ಪಂ. ಅಧ್ಯಕ್ಷೆ ಮಂಗಳಗೌರಮ್ಮ ಮತ್ತಿತರರು ವೇದಿಕೆಯಲ್ಲಿದ್ದರು.


4 ನವನಗರ ನಿರ್ಮಾಣ; ಬಿಡದಿ, ಮಾಗಡಿಗೂ ಮೆಟ್ರೊ
ರಾಜಧಾನಿ ಬೆಂಗಳೂರಿಗೆ ಪರ್ಯಾಯವಾಗಿ ಸಮೀಪದಲ್ಲಿಯೇ ನಾಲ್ಕು ನವನಗರಗಳನ್ನು ನಿರ್ಮಾಣ ಮಾಡುವ ಕನಸು ಇದೆ. ಇದರಲ್ಲಿ ಬಿಡದಿ ಬಳಿಯೂ ಸಕಲ ಸೌಲಭ್ಯಗಳುಳ್ಳ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರು ಮೆಟ್ರೊ ಈಗಾಗಲೇ ದೇಶದ ಎರಡನೇ ದೊಡ್ಡ ಸಾರ್ವಜನಿಕ ಸಾರಿಗೆಯಾಗಿ ಬೆಳೆದಿದೆ. ಇದನ್ನು ಮುಂದಿನ ವರ್ಷಗಳಲ್ಲಿ ಬಿಡದಿ ಹಾಗೂ ಮಾಗಡಿಯವರೆಗೂ ವಿಸ್ತರಿಸಲು ಸರ್ಕಾರ ಈಗಾಗಲೇ ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದರು.

ವಿವಿಧ ಯೋಜನೆಗಳಿಗೆ ಚಾಲನೆ: ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ ನಿರ್ಮಾಣದ ಜೊತೆಗೆ ಮಾವು ಸಂಸ್ಕರಣ ಘಟಕ, ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ, ಬಿಡದಿ ಬಳಿ ಸರ್ಕಾರಿ ಪಾಲಿಟೆಕ್ನಿಕ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಚನ್ನಪಟ್ಟಣದಲ್ಲಿನ ಕೆಎಸ್‍ಐಸಿ ಮಾರಾಟ ಮಳಿಗೆ ಮತ್ತು ರೆಸ್ಟೋರೆಂಟ್ ಅನ್ನು ಉದ್ಘಾಟಿಸಲಾಯಿತು.

ಬಾಕ್ಸ್‌–2
ಹಾಗೇ ಬಂದು ಹೀಗೆ ಹೋದ ಶಾಸಕಿ

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್‌ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಅಲ್ಲಿಗೆ ಬಂದ ಶಾಸಕಿ ಅನಿತಾ ಕುಮಾರಸ್ವಾಮಿ ಎರಡು ನಿಮಿಷವಷ್ಟೇ ಇದ್ದು, ಬಳಿಕ ವೇದಿಕೆ ಏರದೇ ಹಾಗೆಯೇ ನಿರ್ಗಮಿಸಿದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸಂಸದ ಡಿ.ಕೆ. ಸುರೇಶ್ ಸಹ ಗೈರಾದರು. ಹೀಗಾಗಿ ಬಿಜೆಪಿ ನಾಯಕರಷ್ಟೇ ವೇದಿಕೆಯಲ್ಲಿ ಇದ್ದರು.

ಮುಖ್ಯಮಂತ್ರಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದ ಸಂದರ್ಭ ಮುತ್ತಿಗೆ ಹಾಕಲು ಯತ್ನಿಸಿದ ಪೌರಕಾರ್ಮಿಕರು, ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಒತ್ತಾಯಿಸಿದರು. ಕಾರ್ಯಕ್ರಮಕ್ಕೆ ವಿವಿಧ ಗ್ರಾಮಗಳಿಂದ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಬಸ್‌ಗಳಲ್ಲಿ ಕರೆತರಲಾಗಿತ್ತು. ಮಧ್ಯಾಹ್ನ 12ಕ್ಕೆಲ್ಲ ವೇದಿಕೆಗೆ ಬಂದವರು ಕಾದು ಸುಸ್ತಾದರು. ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಮುಖ್ಯಮಂತ್ರಿ ಸಂಜೆ 4ರ ಸುಮಾರಿಗೆ ವೇದಿಕೆಗೆ ಬಂದರು. ಮುಖ್ಯಮಂತ್ರಿ ಭಾಷಣದ ವೇಳೆಯೇ ಹೆಚ್ಚಿನವರು ಅಲ್ಲಿಂದ ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.