ರಾಮನಗರ: ಮಗನ ಉತ್ತಮ ರಾಜಕೀಯ ಭವಿಷ್ಯಕ್ಕಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ತಮ್ಮ ಕ್ಷೇತ್ರವನ್ನೇ ತ್ಯಾಗ ಮಾಡಿದ್ದು, ಇಲ್ಲಿಂದಲೇ ನಿಖಿಲ್ ಪಟ್ಟಾಭಿಷೇಕಕ್ಕೆ ಎಚ್‌ಡಿಕೆ ದಂಪತಿ ಯೋಜನೆ ರೂಪಿಸಿದಂತಿದೆ.
ರಾಮನಗರದಲ್ಲಿ ನಿಖಿಲ್ ಸ್ಪರ್ಧೆ ಬಗ್ಗೆ ಈ ಮೊದಲಿನಿಂದಲೂ ಕೇಳಿಬಂದಿದ್ದು, ನಿಖಿಲ್ ಕೂಡ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಆದರೆ, ಕುಮಾರಸ್ವಾಮಿ ಇದನ್ನು ಅಧಿಕೃತವಾಗಿ ಘೋಷಿಸಿರಲಿಲ್ಲ. ಇದೀಗ ಜೆಡಿಎಸ್‌ನ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುನ್ನವೇ ಈ ಘೋಷಣೆ ಹೊರಬಿದ್ದಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿರುವ ನಿಖಿಲ್‌ಗೆ ಭದ್ರ ರಾಜಕೀಯ ನೆಲೆ ನೀಡಬಲ್ಲ ಕ್ಷೇತ್ರದ ಹುಡುಕಾಟದಲ್ಲಿ ಎಚ್‌ಡಿಕೆ ದಂಪತಿ ತೊಡಗಿದ್ದರು. ಅದಕ್ಕಾಗಿ ಜೆಡಿಎಸ್ ಭದ್ರಕೋಟೆಯಾದ ರಾಮನಗರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಈ ಆಯ್ಕೆ ಜಾಣ್ಮೆಯ ನಡೆಯೂ ಆಗಿದೆ ಎನ್ನುವುದು ರಾಜಕೀಯ ಮುಖಂಡರ ಅಭಿಪ್ರಾಯವಾಗಿದೆ.
ಜೆಡಿಎಸ್ ಭದ್ರಕೋಟೆ: ರಾಮನಗರ ವಿಧಾನಸಭಾ ಕ್ಷೇತ್ರ ಕಳೆದ ಎರಡು ದಶಕಗಳಿಂದ ದೇವೇಗೌಡರ ಕುಟುಂಬದ ಹಿಡಿತದಲ್ಲಿ ಇದೆ. 1994ರಲ್ಲಿ ಎಚ್.ಡಿ.ದೇವೇಗೌಡರು ಇಲ್ಲಿಂದ ಸ್ಪರ್ಧಿಸಿ ಗೆದ್ದು ನಂತರದಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ನಂತರದಲ್ಲಿ ಎಚ್.ಡಿ. ಕುಮಾರಸ್ವಾಮಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದಿದ್ದು, ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಒಮ್ಮೆ ಉಪಚುನಾವಣೆಯಲ್ಲಿ ಮಾತ್ರ ಕೆ. ರಾಜು ಶಾಸಕರಾಗಿ ಆಯ್ಕೆ ಆಗಿದ್ದರು.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕುಮಾರಸ್ವಾಮಿ ಚನ್ನಪಟ್ಟಣ ಹಾಗೂ ರಾಮನಗರ ಎರಡೂ ಕ್ಷೇತ್ರದಲ್ಲೂ ಸ್ಪರ್ಧಿಸಿ ಗೆದ್ದ ಬಳಿಕ ರಾಮನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಭಾರಿ ಬಹುಮತದಿಂದ ಆಯ್ಕೆ ಆಗಿದ್ದರು.
ನಂತರದ ದಿನಗಳಲ್ಲಿ ಶಾಸಕರ ಕಾರ್ಯವೈಖರಿ ಬಗ್ಗೆ ಮಿಶ್ರ ಅಭಿಪ್ರಾಯ ಮೂಡಿತ್ತು. ಜತೆಗೆ ನಿಖಿಲ್ ಸ್ಪರ್ಧೆ ಬಗ್ಗೆ ಯುವ ಕಾರ್ಯಕರ್ತರ ಒತ್ತಡವೂ ಹೆಚ್ಚಿತ್ತು. ಇದೀಗ ಅನಿತಾ ಅವರೇ ಮಗನಿಗೆ ಕ್ಷೇತ್ರ ಧಾರೆ ಎರೆಯಹೊರಟಿದ್ದಾರೆ. ಕುಮಾರಸ್ವಾಮಿ ಮತ್ತೊಮ್ಮೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವುದು ಖಚಿತವಾಗಿದೆ.
*
ಮಂಡ್ಯದಲ್ಲಿ ಒತ್ತಡಕ್ಕೆ ಮಣಿದು ನಿಖಿಲ್ ಸ್ಪರ್ಧಿಸಿದ್ದರು. ಆದರೆ ಕುತಂತ್ರದಿಂದ ಸೋಲಾಯಿತು. ಇಲ್ಲಿಯೂ ಮುಂದೆ ಏನಾದರೂ ಆಗಬಹುದು. ಚಕ್ರವ್ಯೂಹ ಬೇಧಿಸಲು ನಿಮ್ಮ ಶಕ್ತಿ ಜೊತೆಗಿರಲಿ.
-ಅನಿತಾ ಕುಮಾರಸ್ವಾಮಿ, ಶಾಸಕಿ
*
ಅನಿತಾ ನನ್ನ ಗಮನಕ್ಕೆ ಬಾರದೆ ನಿಖಿಲ್ ಹೆಸರು ಘೋಷಿಸಿದ್ದಾರೆ. ಆದರೂ ತಾಯಿ ತನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದಾರೆ. ಅವರ ಮುಂದಿನ ಬದುಕು ನಿಮ್ಮ ಕೈಯಲ್ಲಿದೆ
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
*
ರಾಮನಗರ ನಮ್ಮ ಕುಟುಂಬಕ್ಕೆ ಎಂದೆಂದಿಗೂ ವಿಶೇಷವಾದದ್ದು. ಇಂದು ಈ ಅನಿರೀಕ್ಷಿತ ಜವಾಬ್ದಾರಿ ನನ್ನ ಹೆಗಲಿಗೆ ಬಂದಿದೆ. ಇವತ್ತಿಗೂ ರಾಮನಗರಕ್ಕೆ ಕುಮಾರಸ್ವಾಮಿ ಅವರೇ ಸೂಕ್ತ ಅಭ್ಯರ್ಥಿ
-ನಿಖಿಲ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.