ADVERTISEMENT

ರಾಮನಗರ ನಗರಸಭೆ | ಅಧ್ಯಕ್ಷ ಸ್ಥಾನಕ್ಕೆ ‘ಕೈ’ನಲ್ಲಿ ಬಿರುಸಿನ ಚಟುವಟಿಕೆ

ಘೋಷಣೆಯಾಗದ ಅಧ್ಯಕ್ಷ– ಉಪಾಧ್ಯಕ್ಷ ಚುನಾವಣೆ ದಿನಾಂಕ

ಓದೇಶ ಸಕಲೇಶಪುರ
Published 21 ಸೆಪ್ಟೆಂಬರ್ 2024, 5:02 IST
Last Updated 21 ಸೆಪ್ಟೆಂಬರ್ 2024, 5:02 IST
ರಾಮನಗರ ನಗರಸಭೆ
ರಾಮನಗರ ನಗರಸಭೆ   

ರಾಮನಗರ: ಇಲ್ಲಿನ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯು ಕಾವು ನಿಧಾನವಾಗಿ ಏರಿಕೆಯಾಗುತ್ತಿದೆ. ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಹೊಂದಿರುವುರಿಂದ ಎರಡೂ ಸ್ಥಾನಗಳನ್ನು ಅಲಂಕರಿಸುವುದರಲ್ಲಿ ಎರಡು ಮಾತಿಲ್ಲ. ಬದಲಾಗಿರುವ ಮೀಸಲಾತಿಯಿಂದಾಗಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿರುವವರ ತೆರೆಮರೆಯ ರಾಜಕಾರಣ ಬಿರುಸುಗೊಂಡಿದೆ.

ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮತ್ತು ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದೆ. ನಗರಸಭೆಯ 31 ಸದಸ್ಯರ ಬಲದ ಪೈಕಿ ಕಾಂಗ್ರೆಸ್‌ 20 ಮತ್ತು ಜೆಡಿಎಸ್ 11 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯದ್ದು ಇಲ್ಲಿ ಶೂನ್ಯ ಸಂಪಾದನೆ. ಸದಸ್ಯರ ಬಲದಲ್ಲಿ ಅಜಗಜಾಂತರ ವ್ಯತ್ಯಾಸವಿರುವುದರಿಂದ ‘ಕೈ’ ಸದಸ್ಯರನ್ನು ತಮ್ಮತ್ತ ಸೆಳೆದು ನಗರಸಭೆ ಚುಕ್ಕಾಣಿ ಹಿಡಿಯುವಂತಹ ಪ್ರಯತ್ನಕ್ಕೆ ಜೆಡಿಎಸ್ ಕೈ ಹಾಕದು.

ಮೀಸಲಾತಿ ಪ್ರಕಟವಾದ ಬೆನ್ನಲ್ಲೇ, ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯ ವಾರ್ಡ್ ನಂ. 5ರ ಕೆ. ಶೇಷಾದ್ರಿ ಶಶಿ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ನಗರಸಭೆ ಸದಸ್ಯರಾದಿಯಾಗಿ, ಪಕ್ಷದ ಮುಖಂಡರು ಶೇಷಾದ್ರಿ ಹೆಸರನ್ನೇ ಪ್ರಸ್ತಾಪಿಸುತ್ತಿದ್ದಾರೆ. ಜೊತೆಗೆ ವಾರ್ಡ್ ನಂ. 19ರ ಎಕ್ಬಾಲ್ ಷರೀಫ್ (ದೌಲತ್ ಷರೀಫ್), ವಾರ್ಡ್ ನಂ. 14ರ ನಿಜಾಮುದ್ದೀನ್ ಷರೀಫ್ ಹಾಗೂ ವಾರ್ಡ್ ನಂ. 25ರ ಆರ್‌. ಮುತ್ತುರಾಜು ಹೆಸರು ಸಹ ಚಾಲ್ತಿಗೆ ಬಂದಿದೆ.

ADVERTISEMENT

ಆಕಾಂಕ್ಷಿಗಳ ಪೈಕ ಕೆಲವರು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಸೇರಿದಂತೆ ಪಕ್ಷದ ಮುಖಂಡರ ಹಿಂದೆ–ಮುಂದೆ ಕಾಣಿಸಿಕೊಳ್ಳುತ್ತಾ ತಮ್ಮ ಪರ ಮನವೊಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅಧ್ಯಕ್ಷ ಹುದ್ದೆಗೆ ಶೇಷಾದ್ರಿ ಅವರ ಜೊತೆಗೆ, ತಮ್ಮದೇ ಸಮುದಾಯದ ಸದಸ್ಯರಿಬ್ಬರು ರೇಸ್‌ನಲ್ಲಿ ಇರುವುದರಿಂದ ಶಾಸಕರು ಯಾರ ಪರ ವಾಲುತ್ತಾರೆ ಎಂಬ ಕುತೂಹಲವೂ ಹೆಚ್ಚಾಗಿದೆ.

ಅಧ್ಯಕ್ಷ ಸ್ಥಾನವು ಬಿಸಿಎಂ ‘ಎ’ ವರ್ಗಕ್ಕೆ ನಿಗದಿಯಾಗಲಿದೆ ಎಂಬ ನಿರೀಕ್ಷೆಇತ್ತು. ಈ ನಿಟ್ಟಿನಲ್ಲಿ ಕೆಲವರು ಪ್ರಯತ್ನ ಕೂಡ ನಡೆಸಿದ್ದರು. ಅಂದುಕೊಂಡಂತೆ ಆಗಿದ್ದಲ್ಲಿ, ಅಲ್ಪಸಂಖ್ಯಾತರನ್ನು ಅಧ್ಯಕ್ಷರನ್ನಾಗಿ ಮಾಡಿದರಾಯಿತು ಎಂಬ ಲೆಕ್ಕಾಚಾರ ಪಕ್ಷದಲ್ಲಿತ್ತು. ಆದರೆ, ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನವು ಮುಖಂಡರ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ.

ಕಳೆದ ಎರಡೂ ವರ್ಷದ ಅವಧಿಯಲ್ಲಿ ಸದಸ್ಯರಾದ ಬಿ.ಸಿ. ಪಾರ್ವತಮ್ಮ, ಪವಿತ್ರ ಹಾಗೂ ವಿಜಯಕುಮಾರಿ ನಗರಸಭೆ ಹುದ್ದೆಯನ್ನು ಅಲಂಕರಿಸಿದ್ದಾರೆ. ಮೇ ತಿಂಗಳಲ್ಲಿ ವಿಜಯಕುಮಾರಿ ಅವರ ಅವಧಿ ಅಂತ್ಯಗೊಂಡಿದೆ. ನಗರಸಭೆಯು ಈಗಾಗಲೇ ಅಧ್ಯಕ್ಷರಿಲ್ಲದೆ ನಾಲ್ಕು ತಿಂಗಳನ್ನು ಕಳೆಯುತ್ತಾ ಬಂದಿದೆ. ಮುಂದೆ ಅಧ್ಯಕ್ಷರಾಗುವವರು 2 ವರ್ಷ 2 ತಿಂಗಳು ಅಧಿಕಾರದಲ್ಲಿರಬೇಕಾಗುತ್ತದೆ.

ಶೇಷಾದ್ರಿಯತ್ತ ಎಲ್ಲರ ಚಿತ್ತ

ನಗರಸಭೆಯಲ್ಲಿ ಶೇಷಾದ್ರಿ ಅವರು ತಮ್ಮದೇ ಹಿಡಿತ ಹೊಂದಿದ್ದಾರೆ. ಕಳೆದ ಎರಡೂವರೆ ವರ್ಷದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಕೂರಿಸಬೇಕೆಂದು ತೀರ್ಮಾನಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಈಗ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರೇ ಮುನ್ನೆಲೆಗೆ ಬಂದಿದ್ದರೂ ಆ ಕುರಿತು ತುಟಿ ಬಿಚ್ಚಿಲ್ಲ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬಿಟ್ಟು ಮೌನವಾಗಿದ್ದಾರೆ. ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಶೇಷಾದ್ರಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕೆಂದು ಬೆಂಬಲಿಗರು ಎರಡ್ಮೂರು ಸಲ ಸಭೆ ನಡೆಸಿ ಬೆಂಗಳೂರಿಗೆ ಹೋಗಿ ಡಿಕೆಶಿ ಅವರಿಗೂ ಮನವಿ ಕೊಟ್ಟಿದ್ದರು. ಸೂಕ್ತ ಸಮಯದಲ್ಲಿ ಸ್ಥಾನಮಾನ ನೀಡುವುದಾಗಿ ಡಿಸಿಎಂ ಭರವಸೆ ನೀಡಿದ್ದರು. ನಂತರ ನಡೆದ ಪ್ರಾಧಿಕಾರ ಮತ್ತು ನಿಗಮಗಳಿಗೂ ಇವರ ಹೆಸರು ಪರಿಗಣಿಸಿಲ್ಲ. ತಮ್ಮ ಆಪ್ತ ವಲಯದಲ್ಲಿರುವ ಶೇಷಾದ್ರಿ ಅವರನ್ನು ಇದೀಗ ನಗರಸಭೆ ಅಧ್ಯಕ್ಷ ಕುರ್ಚಿಗೆ ಕೂರಿಸುವರೇ ಎಂದು ಕಾದು ನೋಡಬೇಕಿದೆ.

‘ಕಾಯಕಲ್ಪಕ್ಕೆ ಸಮರ್ಥರೇ ಬೇಕು’

ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಇ–ಖಾತೆ ಸೇರಿದಂತೆ ನಗರಸಭೆಯ ಯಾವುದೇ ಕೆಲಸಗಳು ಹಣವಿಲ್ಲದೆ ನಡೆಯುವುದಿಲ್ಲ. ಎರಡೂವರೆ ವರ್ಷದಲ್ಲಿ ಮೂವರು ಅಧ್ಯಕ್ಷರನ್ನು ಕಂಡಿದ್ದರೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಸದಸ್ಯರೇ ತಮ್ಮ ವಾರ್ಡ್‌ಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಅಧಿಕಾರಿಗಳಿಗೆ ದುಂಬಾಲು ಬೀಳಬೇಕಾದ ಸ್ಥಿತಿ ಇದೆ. ಜನರೂ ನಗರಸಭೆ ವಿರುದ್ಧ ಬೇಸತ್ತಿದ್ದಾರೆ. ನಗರಸಭೆಗೆ ಕಾಯಕಲ್ಪ ನೀಡಿ ಜನಸ್ನೇಹಿ ಮಾಡಲು ಸಮರ್ಥ ಅಧ್ಯಕ್ಷರು ಬೇಕು. ಅದಕ್ಕೆ ಶೇಷಾದ್ರಿ ಅವರೇ ಸೂಕ್ತ ಎನ್ನುತ್ತಾರೆ ನಗರಸಭೆಯ ಕೆಲ ಸದಸ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.