ADVERTISEMENT

ಅಲೆಮಾರಿ ಸಾಹಿತ್ಯ, ಸಾಂಸ್ಕೃತಿಕ ಕಲೋತ್ಸವ ಜ. 28ಕ್ಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 14:44 IST
Last Updated 1 ಜನವರಿ 2024, 14:44 IST

ರಾಮನಗರ: ‘ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಜ. 28ರಂದು ರಾಜ್ಯಮಟ್ಟದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಾಹಿತ್ಯ ಮತ್ತು ಸಾಂಸ್ಕತಿಕ ಕಲೋತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಹೇಳಿದರು.

‘ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ(ಹಿಂದುಳಿದ ವರ್ಗಗಳ ಪ್ರ.ವರ್ಗ-1) ಜನಾಂಗಗಳ ಒಕ್ಕೂಟ ಸ್ಥಾಪನೆಯಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕಾರ್ಯಕ್ರಮದಲ್ಲಿ ಅಲೆಮಾರಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧರಿಗೆ ಸನ್ಮಾನ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಅಲೆಮಾರಿ ಬದುಕು (ಅಂದು-ಇಂದು-ಮುಂದು) ವಿಷಯ ಕುರಿತು ನಡೆಯು ವಿಚಾರ ಸಂಕಿರಣದಲ್ಲಿ ಅಲೆಮಾರಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ’ ಎಂದರು.

ADVERTISEMENT

‘ಅಲೆಮಾರಿಗಳು ಇಂದಿಗೂ ಸರ್ಕಾರಿ ಜಾಗದಲ್ಲಿ ಟೆಂಟ್ ಅಥವಾ ಗುಡಿಸಲು ಹಾಕಿಕೊಂಡು ಹಲವು ವರ್ಷಗಳಿಂದ ಬದುಕುತ್ತಿದ್ದಾರೆ. ಸರ್ಕಾರ ಅಂತಹವರ ಸಮೀಕ್ಷೆ ನಡೆಸಿ, ಆ ಜಾಗವನ್ನು ಅವರಿಗೇ ನೀಡಬೇಕು. ಬದುಕಿಗಾಗಿ ಊರೂರು ಅಲೆಯದೆ ಅವರು ಒಂದೆಡೆ ನೆಲೆ ನಿಂತು ಬದುಕು ಕಟ್ಟಿಕೊಳ್ಳುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಪ್ರಕಾಶ್, ಬಿ.ಸಿ. ಚಂದ್ರಯ್ಯ, ರಂಗನಾಥ್, ಮಾರಪ್ಪ , ರಂಗಸ್ವಾಮಿ, ವೆಂಕಟೇಶ್, ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.