ADVERTISEMENT

ರಾಮನಗರ ಜಿಲ್ಲೆಯ ತಾಲ್ಲೂಕುಗಳು ಬೆಂಗಳೂರಿಗೆ ಸೇರಲಿವೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 15:23 IST
Last Updated 3 ಜುಲೈ 2024, 15:23 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಚನ್ನಪಟ್ಟಣ (ರಾಮನಗರ): ‘ನಾವು ಬೆಂಗಳೂರು ಜಿಲ್ಲೆಯವರು. ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ಎಲ್ಲವೂ ಬೆಂಗಳೂರು ಗ್ರಾಮಾಂತರವಾಗಿದ್ದು, ಎಲ್ಲವೂ ಬೆಂಗಳೂರಿಗೆ ಸೇರಲಿದೆ. ಇನ್ನೆರಡು ದಿನ ಕಾದು ನೋಡಿ, ಇದಕ್ಕೆಲ್ಲಾ ಉತ್ತರ ಸಿಗಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಪಟ್ಟಣದಲ್ಲಿ ಬುಧವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮತ್ತು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಪಠ್ಯಪುಸ್ತಕಗಳನ್ನು ತೆಗೆದುನೋಡಿ, ಎಲ್ಲವೂ ಬೆಂಗಳೂರು ಎಂದೇ ಇದೆ. ಮುಂದೆ ಎಲ್ಲಾ ತಾಲ್ಲೂಕುಗಳು ಬೆಂಗಳೂರಿಗೆ ಸೇರಲಿದ್ದು, ರಾಮನಗರವು ವಿಭಾಗವಾಗಿಯೇ ಇರಲಿದೆ’ ಎಂದರು.

ವರ್ಷದಿಂದಲೂ ಡಿಕೆಶಿ, ‘ಕನಕಪುರ ಬೆಂಗಳೂರಿಗೆ ಸೇರಲಿದ್ದು, ನಾವು ಬೆಂಗಳೂರು ಜಿಲ್ಲೆಯವರು’ ಎಂದು ಹೇಳುತ್ತಲೇ, ರಾಮನಗರ ಜಿಲ್ಲೆ ರಚನೆಗೆ ಕಾರಣವಾದ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು. ಇದೀಗ, ಎಲ್ಲಾ ತಾಲ್ಲೂಕುಗಳು ಬೆಂಗಳೂರಿಗೆ ಸೇರಲಿವೆ ಎಂದು ಹೇಳುವ ಮೂಲಕ ಮತ್ತೊಂದು ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.

ADVERTISEMENT

‘ನನ್ನ ವಿರುದ್ಧ ಷಡ್ಯಂತ ಮಾಡಿ ಜೈಲಿಗೆ ಹಾಕಿಸಿದ್ರು’ ಎಂಬ ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ‘ಹೌದಾ, ಸಂತೋಷ. ಅವರಿಗೆ ಒಳ್ಳೆಯದಾಗಲಿ. ನನ್ನನ್ನು ನೆನಪಿಸಿಕೊಳ್ಳುತ್ತಾ ಇರಲಿ’ ಎಂದು ವ್ಯಂಗ್ಯವಾಡಿದರು.

‘ಕೆ.ಆರ್‌.ಎಸ್ ಜಲಾಶಯದ ಬಳಿ ಯಾರೂ ಪ್ರಾಯೋಗಿಕ ಸ್ಫೋಟ ಮಾಡುವುದಿಲ್ಲ. ಅದರ ಸುತ್ತಮುತ್ತ ಸುರಕ್ಷತಾ ಹಾಗೂ ತಾಂತ್ರಿಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡೇ ಸ್ಫೋಟ ಮಾಡುತ್ತಾರೆ’ ಎಂದು ಸ್ಫೋಟಕ್ಕೆ ರೈತರಿಂದ ವಿರೋಧ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಯಾವ ಹಗರಣವೂ ಆಗಿಲ್ಲ. ಎಲ್ಲವೂ ಬಿಜೆಪಿ ಕಾಲದಲ್ಲೇ ಆಗಿರೋದು. ಅವರು ರಾಜಕೀಯ ಕಾರಣಕ್ಕಾಗಿ ಪ್ರತಿಭಟನೆ ಮಾಡುವುದಾದರೆ ಮಾಡಲಿ
ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.