ADVERTISEMENT

ಬಡವರಿಗೆ ನಿವೇಶನ ಹಂಚಿಕೆ: ಡಿ.ಕೆ.ಶಿವಕುಮಾರ್ ಭರವಸೆ

ಜನಸ್ಪಂದನ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಭರವಸೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 6:25 IST
Last Updated 4 ಜುಲೈ 2024, 6:25 IST
ಚನ್ನಪಟ್ಟಣದ ಫರ್ಹಾ ಶಾಲಾ ಆವರಣದಲ್ಲಿ ನಡೆದ ಜಿಲ್ಲಾಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು
ಚನ್ನಪಟ್ಟಣದ ಫರ್ಹಾ ಶಾಲಾ ಆವರಣದಲ್ಲಿ ನಡೆದ ಜಿಲ್ಲಾಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು   

ಚನ್ನಪಟ್ಟಣ: ಚನ್ನಪಟ್ಟಣದ ಸುತ್ತಮುತ್ತ 40-50 ಎಕರೆ ಜಾಗದಲ್ಲಿ ನಿವೇಶನ ಮಾಡಿ ಅವುಗಳನ್ನು ಬಡವರಿಗೆ ನೀಡಲಾಗುವುದು. ಸರ್ಕಾರಿ ಜಮೀನು ಇಲ್ಲವಾದರೆ ಖಾಸಗಿ ಜಮೀನು ಖರೀದಿಸಿ ಬಡಾವಣೆ ಮಾಡಿ ನಿವೇಶನ ಹಂಚಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ನಗರದ ಕೋಟೆ ಮಾರಮ್ಮ ದೇವಸ್ಥಾನ ಆವರಣ ಮತ್ತು ಫರ್ಹಾ ಶಾಲಾ ಆವರಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಸ್ಥಳೀಯ ನಗರಸಭಾ ಸದಸ್ಯರ ಜೊತೆಗೂಡಿ ಚಾಲನೆ ನೀಡಿ ಮಾತನಾಡಿದ ಅವರು, ಕನಕಪುರದಲ್ಲಿ 100 ಎಕರೆ ಜಮೀನಿನಲ್ಲಿ ಬಡಾವಣೆ ಮಾಡಿ ನಿವೇಶನ ಹಂಚಿಕೆ ಮಾಡಲಾಗಿದೆ. ಅದೇ ರೀತಿ ಇಲ್ಲಿಯೂ ಹಂಚಿಕೆ ಮಾಡಲಾಗುವುದು ಎಂದರು.

ರಾಮನಗರ, ಚನ್ನಪಟ್ಟಣವನ್ನು ಅವಳಿ ನಗರಗಳನ್ನಾಗಿ ಮಾಡುತ್ತೇನೆ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದರು. ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಮಾಡಲಿಲ್ಲ. ಆದರೆ, ನಾನು ಕೊಟ್ಟ ಮಾತನ್ನು ಮರೆಯುವವನಲ್ಲ. ನನ್ನ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ. ಮತದಾರರು ನಮ್ಮವರನ್ನು ಶಾಸಕರನ್ನಾಗಿ ಮಾಡಿ ನಮ್ಮ ಕೈ ಬಲಪಡಿಸಬೇಕು. ಆಗ ಈ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ನನಗೆ ಶಕ್ತಿ ಸಿಗುತ್ತದೆ ಎಂದು ತಿಳಿಸಿದರು.

ADVERTISEMENT

ಸಾವಿರಾರು ಮಂದಿ ಮನೆ, ನಿವೇಶನ, ಸಾಲ ಸೌಲಭ್ಯ, ಪಿಂಚಣಿ ಸಮಸ್ಯೆ, ಖಾತೆ, ಪೋಡಿ, ರಸ್ತೆ ದುರಸ್ತಿ, ಒಳ ಚರಂಡಿ, ಕುಡಿಯುವ ನೀರು ಸೇರಿದಂತೆ ವಿವಿಧ ವಿಚಾರವಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಕಾರ್ಯಕ್ರಮದ ಬಳಿಕ ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ಮಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ. ನಿಮ್ಮ ಎಲ್ಲ ಸಮಸ್ಯೆಗಳನ್ನು ಒಂದೇ ಬಾರಿ ಸರಿಪಡಿಸುತ್ತೇನೆ ಎಂದು ಹೇಳುತ್ತಿಲ್ಲ. ಹಂತ ಹಂತವಾಗಿ ಕಾನೂನು ವ್ಯಾಪ್ತಿಯಲ್ಲಿ ಸರಿಪಡಿಸುತ್ತೇವೆ. ಸ್ವಯಂ ಉದ್ಯೋಗ ಮಾಡುವವರಿಗೆ ಸಾಲ ಸೌಲಭ್ಯ ನೀಡುತ್ತೇವೆ. ಎಲ್ಲಾ ಸಮುದಾಯಕ್ಕೂ ಸಮುದಾಯ ಭವನ, ಸ್ಮಶಾನ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ರಾಮನಗರ ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಎಸ್.ರವಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ, ರಘುನಂದನ್ ರಾಮಣ್ಣ, ಅಶ್ವಥ್, ರಾಜು, ಅವಿನಾಶ್ ಮೆನನ್, ಕಾರ್ತಿಕ್ ರೆಡ್ಡಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಜರಿದ್ದರು.

ಜಿಲ್ಲಾಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನರ ಅಹವಾಲು ಸ್ವೀಕರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.