ADVERTISEMENT

ಚನ್ನಪಟ್ಟಣ | ಜನರ ಸಮಸ್ಯೆ ಬಗೆಹರಿಸಲು ಸರ್ಕಾರ ಸದಾ ಸಿದ್ಧ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 5:19 IST
Last Updated 2 ಜುಲೈ 2024, 5:19 IST
ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿದರು
ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿದರು   

ಚನ್ನಪಟ್ಟಣ: ಜನರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಸದಾ ಸಿದ್ಧವಾಗಿದ್ದು, ಜನರು ತಮ್ಮನ್ನು ನೇರವಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿಮ್ಮ ಮನೆ ಬಾಗಿಲಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದಿದ್ದಾರೆ. ನೀವು ಈ ಸೇವೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ನಿಮ್ಮ ಸೇವೆಗೆ ನನ್ನ ಕಚೇರಿ ಸದಾ ತೆರೆದಿರುತ್ತದೆ ಎಂದರು.

ಈ ಹಿಂದೆ ಇಂಧನ ಸಚಿವನಾಗಿದ್ದಾಗ ರೈತರಿಗೆ ಟ್ರಾನ್ಸ್‌ಫಾರ್ಮರ್‌ ಅಳವಡಿಕೆ ಮತ್ತು ನೀರಾವರಿ ಕೆಲಸಗಳನ್ನು ಮಾಡಿ ಅನುಕೂಲ ಮಾಡಿಕೊಡಲಾಗಿತ್ತು. ಕ್ಷೇತ್ರ ವಿಂಗಡಣೆಯಾಗಿ ನಾನು ಕನಕಪುರಕ್ಕೆ ಹೋದ ನಂತರ ಯಾವುದೇ ಶಾಸಕರು ಹೀಗೆ ಜನರ ಬಳಿಗೆ ಬಂದು ಕೆಲಸ ಮಾಡಿದ ಉದಾಹರಣೆಯೇ ಇಲ್ಲ. ಈ ಬಗ್ಗೆ ಜೆಡಿಎಸ್, ಬಿಜೆಪಿ ಸೇರಿದಂತೆ ಯಾರನ್ನೂ ಪ್ರಶ್ನೆ ಮಾಡಲು ಹೋಗುವುದಿಲ್ಲ ಎಂದರು.

ADVERTISEMENT

ತಾಲ್ಲೂಕಿನ ಐದೂ ಜಿಲ್ಲಾ ಪಂಚಾಯತಿಗಳಲ್ಲಿ 4,419 ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಸುಮಾರು 1,996 ಜನ ಮನೆ ಇಲ್ಲ ಎಂದು ಅರ್ಜಿ ಸಲ್ಲಿಸಿದ್ದಾರೆ. 1,010 ಮಂದಿ ನಿವೇಶನವಿಲ್ಲ ಎಂದಿದ್ದಾರೆ. ಸರ್ಕಾರಿ ಜಮೀನು ಅಥವಾ ಖಾಸಗಿ ಜಮೀನು ಹುಡುಕಿ ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಹಾಗೆಯೆ ಕಾಡಾನೆ ದಾಳಿಯ ಬಗ್ಗೆ ಅರ್ಕಿ ಸಲ್ಲಿಸಲಾಗಿದೆ. ಕಾಡಾನೆಗಳ ಹಾವಳಿ ತಪ್ಪಿಸಲು ಬನ್ನೇರುಘಟ್ಟದಿಂದ 180 ಕಿ.ಮೀ. ಉದ್ದದ ಬ್ಯಾರಿಕೇಡ್‌ ಅನ್ನು ಡಿ.ಕೆ. ಸುರೇಶ್ ಅವರ ಶ್ರಮದಿಂದ ಹಾಕಲಾಗುತ್ತಿದೆ. ಟಾಸ್ಕ್ ಫೋರ್ಸ್ ಸಿದ್ಧವಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಬದಲಾವಣೆಯಾಗಿದೆ. ಒಂದೇ ಒಂದು ರೂಪಾಯಿ ಲಂಚ ಕೊಡದೆ ಐದು ಭಾಗ್ಯಗಳನ್ನು ಪಡೆಯುತ್ತಿದ್ದಾರೆ. ಅದೇ ರೀತಿ ತಾಲ್ಲೂಕು ಕಚೇರಿಯಲ್ಲಿ ಒಂದೇ ಒಂದು ರೂಪಾಯಿ ಲಂಚ ಕೊಡದೆ ಸರ್ವೆ, ಪಹಣಿ, ಪೋಡಿ ಕೆಲಸ ಮಾಡಿಕೊಡಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.

ಕಾರ್ಯಕ್ರಮಕ್ಕೂ ಮೊದಲು ಗರಕಹಳ್ಳಿ ಏತ ನೀರಾವರಿ ಯೋಜನೆಯ ಉನ್ನತೀಕರಣ ಮತ್ತು ಕೋಡಂಬಳ್ಳಿ ಏರು ಕೊಳವೆ ಶಾಖೆಯ ಸಾಮರ್ಥ್ಯ ವೃದ್ಧಿಗಾಗಿ ₹40 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಶಾಸಕರಾದ ಪುಟ್ಟಣ್ಣ, ಎಸ್. ರವಿ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಬೆಂಗಳೂರು ಮೈಸೂರು ಇನ್ ಫ್ರಾಸ್ಟಕ್ಚರ್ ಕಾರಿಡಾರ್ ಅಧ್ಯಕ್ಷ ರಘನಂದನ್ ರಾಮಣ್ಣ, ಗ್ಯಾರಂಟಿ ಯೋಜನೆ ಅಧ್ಯಕ್ಷ ರಾಜು, ಚನ್ನಪಟ್ಟಣ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೂ ಮೊದಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗರಕಹಳ್ಳಿ ಏತ ನೀರಾವರಿ ಯೋಜನೆಯ ಉನ್ನತೀಕರಣ ಮತ್ತು ಕೋಡಂಬಳ್ಳಿ ಏರು ಕೊಳವೆ ಶಾಖೆಯ ಸಾಮರ್ಥ್ಯ ವೃದ್ಧಿಗಾಗಿ ರೂ. 40 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ನಾನೇ ಸೇವಕ ನಾನೇ ಶಾಸಕ: ಡಿಕೆಶಿ ‘ಚನ್ನಪಟ್ಟಣಕ್ಕೆ ಶಾಸಕರು ಇಲ್ಲದ ಕಾರಣ ಈಗ ನಾನೇ ನಿಮ್ಮ ಮನೆ ಮಗ. ನಾನೇ ಸೇವಕ ನಾನೇ ಶಾಸಕ ನಾನೇ ಮಂತ್ರಿ ನಾನೇ ಡಿಸಿಎಂ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ‘ಜನರ ಸೇವೆ ಮಾಡಲು ಉಪಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿದ್ದೇನೆ. ಜನಸೇವೆ ಮಾಡಲು ಮೊದಲು ಅವಕಾಶ ನೀಡಿದವರು ಚನ್ನಪಟ್ಟಣದ ಮತದಾರರು. ನಾನು ಜಾತಿ ನೋಡಿ ಜನಸೇವೆ ಮಾಡಿಲ್ಲ ನೀತಿ ನೋಡಿ ಕೆಲಸ ಮಾಡಿದ್ದೇನೆ’ ಎಂದರು. ‘ನಾನು ಯಾರ ಜೊತೆಗೂ ಸ್ಪರ್ಧಿಸಲು ಇಲ್ಲಿಗೆ ಬಂದಿಲ್ಲ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬಂದಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಮತ ನೀಡಿದ್ದೀರಿ. ಅದಕ್ಕಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.