ADVERTISEMENT

ಹಾರೋಹಳ್ಳಿ | ಶೀಘ್ರದಲ್ಲೇ ಹಕ್ಕುಪತ್ರ ವಿತರಣೆಗೆ ಕ್ರಮ: ಇಕ್ಬಾಲ್ ಹುಸೇನ್

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 5:22 IST
Last Updated 2 ಜುಲೈ 2024, 5:22 IST
ಲ
   

ಹಾರೋಹಳ್ಳಿ: ಬಗರ್ ಹುಕುಂ ಸಮಿತಿಯಲ್ಲಿ ಎಲ್ಲ ಸಾಧಕಬಾಧಕಗಳನ್ನು ನೋಡಿಕೊಂಡು  500 ಜನರಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ಹಾರೋಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಬಗರ್ ಹುಕುಂ ಸಾಗುವಳಿ ಸಭೆಯಲ್ಲಿ ಸೋಮವಾರ ಭಾಗವಹಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕನಾದ ಮೇಲೆ ಬಗರ್ ಹುಕಂ ಸಮಿತಿ ರಚಿಸಿ ಮೊದಲನೇ ಸಭೆ ನಡೆಸುತ್ತಿದ್ದೇನೆ. ನಮೂನೆ 50,57,53 ಹೀಗೆ ಅನೇಕ ರೀತಿಯಲ್ಲಿ ಅರ್ಜಿಗಳು ಬಂದಿವೆ ಆ ಪೈಕಿ ಕೆಲವು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಎಚ್‌.ಡಿ. ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಶಾಸಕರಾಗಿದ್ದಾಗ ಕೆಲವು ಅರ್ಜಿಗಳನ್ನು ವಿಲೇವಾರಿ ಮಾಡಿ ಕೆಲವು ಅರ್ಜಿಗಳಿಗೆ ಹಕ್ಕು ಪತ್ರ ನೀಡಿ ಇನ್ನು ಕೆಲವು ಅರ್ಜಿಗಳನ್ನು ಬಾಕಿ ಉಳಿಸಿದ್ದಾರೆ ಎಂದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ಸಹ ಜನರು ಸಾಗುವಳಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳು ಬಹಳ ಹಿಂದೆಯೇ ಸಲ್ಲಿಕೆಯಾಗಿವೆ. ಪಟ್ಟಣ ಪಂಚಾಯಿತಿ ಕೆಲವು ವರ್ಷಗಳ ಹಿಂದೆಯಷ್ಟೇ ಘೋಷಣೆಯಾಗಿದೆ ಹೀಗಾಗಿ ಈ ವಿಚಾರವನ್ನು ಕಂದಾಯ ಸಚಿವರ ಬಳಿ ಚರ್ಚಿಸಲಾಗುವುದು ಎಂದರು.

ADVERTISEMENT

ತಾಲ್ಲೂಕಿನ ಜನರ ಕಷ್ಟ ಸುಖ ಸೇರಿದಂತೆ ಅಹವಾಲು ಆಲಿಸಲು ಪ್ರತಿ ಗುರುವಾರ ಮೀಸಲಿರಿಸಲಾಗುವುದು ಎಂದರು. ಹಲವು ಗ್ರಾಮದಲ್ಲಿ ಸ್ಮಶಾನ,ಆಶ್ರಯ ಯೋಜನೆಗಳಿಗೆ ಬೇಡಿಕೆ ಇದೆ ಈ ವಿಚಾರವಾಗಿಯೂ ಈಗಾಗಲೇ ಗ್ರಾಮ ಲೆಕ್ಕಾಧಿಕಾರಿಗಳಿಗೆ ಜಾಗ ಗುರುತಿಸಲು ತಿಳಿಸಲಾಗಿದೆ ಎಂದರು.

ತಹಸೀಲ್ದಾರ್ ವಿಜಿಯಣ್ಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜು, ಸಮಿತಿ ಸದಸ್ಯರು ಹಾಗೂ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.