ರಾಮನಗರ: ನಗರದಲ್ಲಿ ಎಲ್ಲೆಂದರಲ್ಲಿ ಕಣ್ಣಿಗೆ ರಾಚುವ ಕಸದ ಸಮಸ್ಯೆಗೆ ಮುಕ್ತಿ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚೆಗೆ ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಕಸ ತಂದು ಹಾಕುವ ಸ್ಥಳಗಳನ್ನು (ಬ್ಲ್ಯಾಕ್ ಸ್ಪಾಟ್) ಗುರುತಿಸಿದ್ದ ನಗರಸಭೆಯು, ಅವುಗಳ ನಿವಾರಣೆಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿತ್ತು. ಇದರಿಂದ ಕೆಲ ಕಸದ ತಿಪ್ಪೆಗಳಿಗೆ ಮುಕ್ತಿ ಸಿಕ್ಕಿತು. ಆದರೆ, ನಗರಸಭೆಯ ಆರಂಭ ಶೂರತ್ವ ಅದೇ ರೀತಿ ಮುಂದುವರಿಯಲಿಲ್ಲ.
ನಗರಸಭೆಯೇ ಗುರುತಿಸಿದ್ದ ಬ್ಲ್ಯಾಕ್ ಸ್ಪಾಟ್‌ಗಳು ಸೇರಿದಂತೆ ಮುಖ್ಯರಸ್ತೆ, ಗಲ್ಲಿ ರಸ್ತೆಗಳ ಬದಿ, ಖಾಲಿ ನಿವೇಶನಗಳು, ಸರ್ಕಾರಿ ಕಚೇರಿಗಳ ಜಾಗಗಳಲ್ಲಿ ಕಸದ ರಾಶಿಯ ದರ್ಶನವಾಗುತ್ತಿದೆ. ಸಣ್ಣದೊಂದು ಜಿಲ್ಲಾಕೇಂದ್ರವನ್ನು ಸ್ವಚ್ಛವಾಗಿಡಲು ನಗರಸಭೆಯು ಏದುಸಿರು ಬಿಡುತ್ತಿದೆ. ಯಾವೊಂದು ರಸ್ತೆಯೂ ಅನೈರ್ಮಲ್ಯದಿಂದ ಮುಕ್ತವಾಗಿಲ್ಲ. ಬ್ಲ್ಯಾಕ್‌ಸ್ಪಾಟ್ ನಿರ್ಮೂಲನೆ ಕಾರ್ಯಾಚರಣೆ ಉಪ ಚುನಾವಣೆ ನೆಪದಲ್ಲಿ ಸ್ಥಗಿತಗೊಂಡಿದೆ.
ನಗರಸಭೆ ವ್ಯಾಪ್ತಿಯಲ್ಲಿ ಹಾಗೂ ಹೊರವಲಯದಲ್ಲಿ ಹಾದು ಹೋಗಿರುವ ಬೆಂಗಳೂರು–ಮೈಸೂರು ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ನಗರ ವ್ಯಾಪ್ತಿಯ ಐಜೂರು, ವಿವೇಕಾನಂದ ನಗರ, ಅರ್ಕಾವತಿ ಬಡಾವಣೆ, ಅಂಬೇಡ್ಕರ್ ನಗರ, ವಿನಾಯಕ ನಗರ, ಮಾಗಡಿ ರಸ್ತೆ, ರಾಯರದೊಡ್ಡಿ ವೃತ್ತ, ಜಾಲಮಂಗಲ ರಸ್ತೆ, ಮಂಜುನಾಥನಗರ, ಕೋರ್ಟ್ ರಸ್ತೆ, ಎಪಿಎಂಸಿ, ಯಾರಬ್ ನಗರ, ಟಿಪ್ಪುನಗರ, ಹುಣಸನಹಳ್ಳಿ ರಸ್ತೆ, ಅರಳಿಮರದ ವೃತ್ತ ಸೇರಿದಂತೆ ಕಸದ ಸಮಸ್ಯೆ ಇಲ್ಲದೆ ಬಡಾವಣೆಗಳೇ ಇಲ್ಲವಾಗಿವೆ.
30ಕ್ಕೂ ಹೆಚ್ಚು ಬ್ಲ್ಯಾಕ್‌ಸ್ಪಾಟ್: ಸದ್ಯ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮತ್ತು ನಗರಸಭೆ ಪೌರಾಯುಕ್ತ ಡಾ. ಜಯಣ್ಣ ಅವರು, ನಗರದ ತ್ಯಾಜ್ಯ ನಿರ್ವಹಣೆಯಲ್ಲಾಗಿರುವ ಸಮಸ್ಯೆಗೆ ಮುಕ್ತಿ ಹಾಡಲು ಮುಂದಾಗಿದ್ದರು. ನಗರದಲ್ಲಿರುವ 31 ವಾರ್ಡ್‌ಗಳಲ್ಲಿ 30ಕ್ಕೂ ಹೆಚ್ಚು ಸ್ಪಾಟ್‌ಗಳನ್ನು ನಗರಸಭೆ ಗುರುತಿಸಿತ್ತು.
ಆ ಸ್ಥಳವನ್ನು ಸ್ವಚ್ಛಗೊಳಿಸಿದ್ದ ಪೌರ ಕಾರ್ಮಿಕರು, ಆ ಜಾಗದಲ್ಲಿ ಯಾರೂ ಮತ್ತೆ ಕಸ ತಂದು ಎಸೆಯದಂತೆ ರಂಗೋಲಿ ಬಿಡಿಸಿ ಸಿಂಗರಿಸಿದ್ದರು. ಜೊತೆಗೆ ಕಸ ಎಸೆದರೆ ದಂಡ ವಿಧಿಸುವ ಎಚ್ಚರಿಕೆಯ ಸೂಚನಾಫಲಕ ಅಳವಡಿಸಲಾಗಿತ್ತು. ಎಚ್ಚರಿಕೆ ಮೀರಿಯೂ ಕಸ ಎಸೆಯುವವರ ಮೇಲೆ ನಿಗಾ ಇಡಲು ಕೆಲ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ನಿರಂತರ ಕಾರ್ಯಾಚರಣೆ ಅಗತ್ಯ: ‘ನಗರಸಭೆಯವರು ಬ್ಲ್ಯಾಕ್‌ಸ್ಪಾಟ್ ವಿರುದ್ಧದ ಕಾರ್ಯಾಚರಣೆಯನ್ನು ಆರಂಭದಲ್ಲಿ ಚನ್ನಾಗಿ ನಡೆಸಿದರು. ಸ್ವಚ್ಛತೆಗೆ ಸಂಬಂಧಿಸಿದಂತೆ ನಗರದಲ್ಲಿ ಏನೋ ಬದಲಾವಣೆ ಆಗುತ್ತಿದೆ ಎಂಬ ನಿರೀಕ್ಷೆ ಜನರಲ್ಲಿ ಹುಟ್ಟಿತ್ತು. ಆದರೆ, ಅಷ್ಟೇ ಬೇಗ ಆ ನಿರೀಕ್ಷೆ ಹುಸಿಯಾಯಿತು. ರಸ್ತೆ ಬದಿ ಕಸದ ರಾಶಿ ಎಂದಿನಂತೆ ಬೀಳುತ್ತಿದೆ’ ಎಂದು ಗಾಂಧಿನಗರದ ನಿವಾಸಿ ಶ್ರೀನಿವಾಸ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಕಾರ್ಯಾಚರಣೆ ನಿರಂತರವಾಗಿ ನಡೆಸುವ ಜೊತೆಗೆ, ಎಚ್ಚರಿಕೆಗೆ ಲೆಕ್ಕಿಸದೆ ಕಸ ಹಾಕುವವರಿಗೆ ನಗರಸಭೆಯವರು ದಂಡ ವಿಧಿಸಬೇಕು. ನೋಟಿಸ್ ನೀಡಬೇಕು. ಅದಕ್ಕೂ ಜಗ್ಗದಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಬೇಕು. ಕಠಿಣ ಕ್ರಮದ ಬೆದರಿಕೆ ಇಲ್ಲದಿದ್ದರೆ ಜನ ಮಾತು ಕೇಳುವುದಿಲ್ಲ. ಅಷ್ಟರಮಟ್ಟಿಗೆ ಸಮಾಜ ಜಡ್ಡುಗಟ್ಟಿದೆ’ ಎಂದು ಹೇಳಿದರು.
ಹಂದಿ–ನಾಯಿಗಳ ಕಾಟ: ಕಸದ ನಿರ್ವಹಣೆ ಹಾಗೂ ವಿಲೇವಾರಿ ಸರಿಯಾಗಿ ನಡೆಯದಿರುವುದರಿಂದ ನಗರದ ಕೆಲ ಪ್ರದೇಶಗಳಲ್ಲಿ ಹಂದಿಗಳು ಹಾಗೂ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಅರ್ಕಾವತಿ ಬಡಾವಣೆಯ ಗ್ಯಾಸ್ ಗೋಡೌನ್ ಸಮೀಪ ಸೇರಿದಂತೆ ಹಲವೆಡೆ ಇರುವ ಕಸದ ತಿಪ್ಪೆಗಳು ಹಂದಿ–ನಾಯಿಗಳಿಗೆ ಆಹಾರದ ತಾಣವಾಗಿವೆ. ಸದಾ ಅಲ್ಲೇ ಬೀಡು ಬಿಡುವ ಪ್ರಾಣಿಗಳಿಂದಾಗಿ, ಒಬ್ಬರೇ ಆ ರಸ್ತೆಯಲ್ಲಿ ಓಡಾಡುವುದಕ್ಕೆ ಭಯಪಡುವ ಸ್ಥಿತಿ ಇದೆ ಎನ್ನುತ್ತಾರೆ ಸ್ಥಳೀಯರು.
ಕಾರ್ಯಾಚರಣೆ ತೀವ್ರಗೊಳಿಸಲು ಕ್ರಮ: ಪೌರಾಯುಕ್ತ
‘ಚನ್ನಪಟ್ಟಣ ಉಪ ಚುನಾವಣೆ ಕಾರಣದಿಂದಾಗಿ ಕಸದ ಬ್ಲ್ಯಾಕ್‌ಸ್ಪಾಟ್ ನಿರ್ಮೂಲನೆ ಕಾರ್ಯಾಚರಣೆಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಕಾರ್ಯಾಚರಣೆಯನ್ನು ಮತ್ತಷ್ಟು ಚುರಕುಗೊಳಿಸಲಾಗುವುದು. ಈಗಾಗಲೇ ಗುರುತಿಸಿರುವ 28 ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಜೆಟ್‌ಗೆ ಅನುಗುಣವಾಗಿ ಇನ್ನೂ 30 ಕ್ಯಾಮೆರಾಗಳನ್ನು ಎರಡು ಹಂತದಲ್ಲಿ ಅಳವಡಿಸಲಾಗುವುದು. ಮತ್ತಷ್ಟು ಕಸದ ಸ್ಪಾಟ್‌ಗಳನ್ನು ಗುರುತಿಸಿ ನಿವಾರಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಡಾ. ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಖಾಲಿ ನಿವೇಶನವೆಂಬ ಕಸದ ತಿಪ್ಪೆ
ನಗರದಲ್ಲಿರುವ ಬಹುತೇಕ ಖಾಲಿ ನಿವೇಶನಗಳು ಕಸದ ತಿಪ್ಪೆಗಳಾಗಿವೆ. ಯಾವುದೇ ನಿವೇಶನದತ್ತ ಕಣ್ಣಾಡಿಸಿದರೂ ಯಾವುದಾದರೂ ಒಂದು ಮೂಲೆಯಲ್ಲಿ ಕಸದ ರಾಶಿ ಎದ್ದು ಕುಳಿತಿರುತ್ತದೆ. ನಗರಸಭೆಯ ವಾಹನಗಳಿಗೆ ಕಸ ಕೊಡಲಾಗದವರು ಹಾಗೂ ಸ್ಥಳೀಯ ಅಂಗಡಿಯವರು ರಾತ್ರೋರಾತ್ರಿ ಪ್ಲಾಸ್ಟಿಕ್‌ನಲ್ಲಿ ಕಸವನ್ನು ಎಸೆದು ಹೋಗುತ್ತಾರೆ. ಖಾಲಿ ನಿವೇಶನಗಳ ಮೇಲೆ ನಿಗಾ ಇಟ್ಟು ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕಾದ ನಗರಸಭೆ ಆ ವಿಷಯಕ್ಕೂ ತನಗೂ ಸಂಬಂಧವೇ ಇಲ್ಲವೆಂದು ಕಣ್ಮುಚ್ಚಿ ಕುಳಿತಿದೆ. ‘ನಮ್ಮ ಮನೆಯ ಬಳಿಯೇ ಕೆಲವರು ಗೊತ್ತಾಗದಂತೆ ಕಸವನ್ನು ತಂದು ಎಸೆದು ಹೋಗುತ್ತಾರೆ. ತರಕಾರಿ ಆಹಾರ ಸೇರಿದಂತೆ ಹಲವು ಬಗೆಯ ತ್ಯಾಜ್ಯದಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ನಾವು ಬದುಕಬೇಕಿದೆ. ಕೆಲವರು ಕಸಕ್ಕೆ ಬೆಂಕಿ ಹಚ್ಚುತ್ತಾರೆ. ಇದರಿಂದಾಗಿ ದಟ್ಟ ಹೊಗೆ ಆವರಿಸಿಕೊಳ್ಳುತ್ತದೆ. ನಗರಸಭೆಯವರು ನಿತ್ಯ ಕಸದ ರಾಶಿ ಇರುವ ರಸ್ತೆಯಲ್ಲಿ ಓಡಾಡಿದರೂ ಅತ್ತ ಗಮನ ಹರಿಸುವುದಿಲ್ಲ’ ಎಂದು ಅರ್ಕಾವತಿ ಬಡಾವಣೆಯ ನಿವಾಸಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಉದ್ಯಾನ ಹೆದ್ದಾರಿ ಬದಿಗಿಲ್ಲ ಸ್ವಚ್ಛತೆ ಭಾಗ್ಯ
ಕಸದ ಬ್ಲ್ಯಾಕ್‌ಸ್ಪಾಟ್ ನಿರ್ಮೂಲನೆ ಕಾರ್ಯಾಚರಣೆ ಆರಂಭಿಸಿದ್ದ ನಗರಸಭೆಯು ಅದರ ಜೊತೆಗೆ ನಗರದಲ್ಲಿರುವ ಉದ್ಯಾನಗಳು ಹಾಗೂ ನಗರಸಭೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬದಿ ಇರುವ ತ್ಯಾಜ್ಯ ವಿಲೇವಾರಿ ಮಾಡಲು ಮುಂದಾಗಿತ್ತು. ಪ್ರತಿ ಗುರುವಾರ ಹೆದ್ದಾರಿಯನ್ನು ಹಾಗೂ ಪ್ರತಿ 2ನೇ ಮತ್ತು 4ನೇ ಶನಿವಾರ ಉದ್ಯಾನಗಳನ್ನು ಸ್ವಚ್ಛಗೊಳಿಸುವ ಕಾರ್ಯವೂ ಸ್ಥಗಿತಗೊಂಡಿದೆ. ಕೆಲ ದಿನ ಕಚೇರಿ ಬಿಟ್ಟು ಹೊರಬಂದು ಸ್ವಚ್ಛತೆ ಮೇಲೆ ನಿಗಾ ಇಡುತ್ತಿದ್ದ ಅಧಿಕಾರಿಗಳು ಇದೀಗ ಹೊರಕ್ಕೆ ಬರುತ್ತಿಲ್ಲ. ಪರಿಸರ ಎಂಜಿನಿಯರ್ ಆರೋಗ್ಯ ನಿರೀಕ್ಷಕರು ಕ್ಷೇತ್ರದಲ್ಲಿ ಕಾಣಿಸುವುದೇ ಅಪರೂಪವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.