ADVERTISEMENT

ರಾಮನಗರ: ಮಂಚನಾಯಕನಹಳ್ಳಿ ಪಿಡಿಒ ಯತೀಶ್ ಅಮಾನತು

ಅಕ್ರಮವಾಗಿ ಆಸ್ತಿ ಸಂಪಾದನೆ ಆರೋಪದಡಿ ದಾಳಿ ನಡೆಸಿದ್ದ ಲೋಕಾಯುಕ್ತ; ಮೂರು ತಿಂಗಳ ಬಳಿಕ ಕ್ರಮ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 6:07 IST
Last Updated 15 ಜೂನ್ 2024, 6:07 IST
<div class="paragraphs"><p>ಅಮಾನತುಗೊಂಡಿರುವ ಪಿಡಿಒ ಯತೀಶ್</p></div>

ಅಮಾನತುಗೊಂಡಿರುವ ಪಿಡಿಒ ಯತೀಶ್

   

ರಾಮನಗರ: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪದಡಿ ಮೂರು ತಿಂಗಳ ಹಿಂದೆ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ತಾಲ್ಲೂಕಿನ ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಯತೀಶ್ ಅವರನ್ನು, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಅವರು ಶುಕ್ರವಾರ ಅಮಾನತು ಮಾಡಿದ್ದಾರೆ.

ಯತೀಶ್ ಅವರ ಮೇಲೆ ಲೋಕಾಯುಕ್ತ ಪೊಲಿಸರು ಮಾರ್ಚ್ 27ರಂದು ದಾಳಿ ನಡೆಸಿದಾಗ, ಅವರು ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಗೊತ್ತಾಗಿದೆ. ಅದರ ಮೌಲ್ಯ ₹3.57 ಕೋಟಿ (ಶೇ 140.01) ಇದೆ. ಅಕ್ರಮವಾಗಿ ಗಳಿಸಿರುವ ಸ್ಥಿರ ಮತ್ತು ಚರಾಸ್ತಿಯು ಯತೀಶ್ ಅವರ ನಿಗದಿತ ವರಮಾನಕ್ಕಿಂತ ಹೆಚ್ಚಿನದಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಆರೋಪಿ ಅಧಿಕಾರಿಯು ವಿವಿಧ ಬಾಬ್ತುಗಳಿಗಾಗಿ ಮಾಡಿರುವ ಖರ್ಚು–ವೆಚ್ಚಗಳು ಇನ್ನು ಕೆಲವು ಮೂಲಗಳಿಂದ ಬರಬೇಕಾಗಿದೆ. ಪ್ರಕರಣದ ತನಿಖೆ ಮುಂದುವರಿದಂತೆ ಅವರು ಸಂಪಾದಿಸಿರುವ ಸ್ಥಿರ ಮತ್ತು ಚರಾಸ್ತಿಯ ಮೌಲ್ಯ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ. ಗೊತ್ತಾದ ಆದಾಯದ ಮೂಲಗಳಿಗಿಂತ ಹೆಚ್ಚು ಸಂಪಾದನೆ ಮಾಡಿರುವುದು ಪ್ರಾಥಮಿಕ ತನಿಖಾ ವರದಿಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ. ಹಾಗಾಗಿ, ಅವರನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಯತೀಶ್ ಅವರು ಆರ್ಥಿಕವಾಗಿ ಹಾಗೂ ಸ್ಥಳೀಯವಾಗಿಯೂ ಪ್ರಭಾವಿಯಾಗಿದ್ದಾರೆ. ಪ್ರಕರಣದ ತನಿಖೆಯು ಸುಗಮವಾಗಿ ನಡೆಯದಂತೆ ಅಡ್ಡಿಯುಂಟು ಮಾಡುವ ಅಥವಾ ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಸಾಧ್ಯತೆಗಳಿವೆ. ಹಾಗಾಗಿ, ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಲೋಕಾಯುಕ್ತ ಪೊಲೀಸ್ ಮಹಾನಿರೀಕ್ಷಕರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ ಯತೀಶ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಅಮಾನತು ಅವಧಿಯಲ್ಲಿ ಯತೀಶ್ ಅವರು, ಕರ್ನಾಟಕ ನಾಗರಿಕ ಸೇವಾ ನಿಯಮದ ಪ್ರಕಾರ, ಜೀವಾನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ಅಲ್ಲದೆ, ರಾಮನಗರ ತಾಲ್ಲೂಕು ಪಂಚಾಯಿತಿ ಇಒ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ. ಅವರಿಂದ ತೆರವಾಗಿರುವ ಮಂಚನಾಯಕನಹಳ್ಳಿಯ ಪಂಚಾಯಿತಿಯ ಪ್ರಭಾರ ಪಿಡಿಒ ಆಗಿ ಕಂಚುಗಾರನಹಳ್ಳಿ ಪಿಡಿಒ ಅವರನ್ನು ನಿಯುಕ್ತಿಗೊಳಿಸುವಂತೆ ತಾ.ಪಂ. ಇಒಗೆ ತಮ್ಮ ಆದೇಶದಲ್ಲಿ ಸಿಇಒ ಸೂಚಿಸಿದ್ದಾರೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಪಿಡಿಒ ಯತೀಶ್ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಮುಂದಿನ ಆದೇಶದವರೆಗೆ ಕರ್ತವ್ಯದಿಂದ ಅಮಾನತು ಮಾಡಲಾಗಿದೆ

– ದಿಗ್ವಿಜಯ್ ಬೋಡ್ಕೆ ಸಿಇಒ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.