ADVERTISEMENT

ರಾಮನಗರ: ಚುರುಕುಗೊಂಡ ಮುಂಗಾರು ಬಿತ್ತನೆ

ಬಿತ್ತನೆಗೆ ಭೂಮಿ ಹದಗೊಳಿಸುವತ್ತ ರೈತರ ಚಿತ್ತ; ಗರಿಗೆದರಿದ ಕೃಷಿ ಚಟುವಟಿಕೆ

ಓದೇಶ ಸಕಲೇಶಪುರ
Published 19 ಜುಲೈ 2024, 4:05 IST
Last Updated 19 ಜುಲೈ 2024, 4:05 IST
ಬಿತ್ತನೆ ಕಾರ್ಯಕ್ಕಾಗಿ ರಾಮನಗರದ ಹೊರವಲಯದಲ್ಲಿ ರೈತರೊಬ್ಬರು ಟ್ರಾಕ್ಟರ್‌ನಲ್ಲಿ ಭೂಮಿ ಉಳುಮೆಯ ಅಂತಿಮ ತಯಾರಿ ನಡೆಸಿದರು (ಸಂಗ್ರಹ ಚಿತ್ರ) 
ಬಿತ್ತನೆ ಕಾರ್ಯಕ್ಕಾಗಿ ರಾಮನಗರದ ಹೊರವಲಯದಲ್ಲಿ ರೈತರೊಬ್ಬರು ಟ್ರಾಕ್ಟರ್‌ನಲ್ಲಿ ಭೂಮಿ ಉಳುಮೆಯ ಅಂತಿಮ ತಯಾರಿ ನಡೆಸಿದರು (ಸಂಗ್ರಹ ಚಿತ್ರ)    

ರಾಮನಗರ: ಜಿಲ್ಲೆಯಲ್ಲಿ ಆಗಾಗ ಸಾಧಾರಣ ಮಳೆ ಸುರಿಯುತ್ತಿರುವ ಬೆನ್ನಲ್ಲೇ, ಮುಂಗಾರು ಬೆಳೆಗಳ ಬಿತ್ತನೆ ಚಟುವಟಿಕೆಯೂ ಚುರುಕುಗೊಂಡಿದೆ. ಜಿಲ್ಲೆಯ ಬಿತ್ತನೆ ಗುರಿ 91,108 ಹೆಕ್ಟೇರ್ ಪ್ರದೇಶದ ಇದುವರೆಗೆ ಪೈಕಿ 5,906 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ.

ಪ್ರಮುಖ ಬೆಳೆಯಾದ ರಾಗಿಯನ್ನು 4,200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಲಾಗಿದೆ. ಉಳಿದಂತೆ ಎಳ್ಳು 900 ಹೆಕ್ಟೇರ್‌, ಅಲಸಂದೆ 364 ಹೆಕ್ಟೇರ್, ತೊಗರಿ 162 ಹೆಕ್ಟೇರ್‌ ಹಾಗೂ ಅವರೆಯನ್ನು 280 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ರಾಗಿ ಬಿತ್ತನೆ ಜುಲೈನಿಂದ ಶುರುವಾಗಿ, ಆಗಸ್ಟ್‌ವರೆಗೆ ನಡೆಯಲಿದೆ. ಸದ್ಯ ರೈತರು ಬಿತ್ತನೆಗೆ ಸಂಬಂಧಿಸಿದ ಚಟುವಟಿಕೆಗಳ ತಯಾರಿ ನಡೆಸುತ್ತಿದ್ದಾರೆ.

‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಎಳ್ಳು ಬೆಳೆಯ ಹೂ ಮತ್ತು ಕಾಯಿ ಬಲಿಯುವ ಹಂತದಲ್ಲಿದೆ. ಅಲಸಂದೆ ಮತ್ತು ಅವರೆ ಹೂ ಕಾಯಿ ಬಿಡುವ ಹಂತದಲ್ಲಿದೆ. ತೊಗರಿ ಬೆಳೆಯು ಬೆಳವಣಿಗೆ ಹಂತದಲ್ಲಿದೆ. ರಾಗಿ ಬಿತ್ತನೆಗಾಗಿ ರೈತರು ಭೂಮಿ ಹದಗೊಳಿಸುತ್ತಿದ್ದಾರೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಅಂಬಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬೀಜ ವಿತರಣೆ: ‘ಸಹಾಯಧನದಡಿ ಬಿತ್ತನೆ ಬೀಜ ವಿತರಣೆಯು ಚುರುಕುಗೊಂಡಿದೆ. ಜಿಲ್ಲೆಯಲ್ಲಿ ವಿವಿಧ ಬೆಳೆಗಳ ಒಟ್ಟು 2.30 ಟನ್‌ ಬಿತ್ತನೆ ಬೀಜ ವಿತರಣೆಯ ಗುರಿ ನಿಗದಿಪಡಿಸಲಾಗಿದೆ. ಸದ್ಯ ತೊಗರಿ, ಅಲಸಂದೆ, ರಾಗಿ, ಭತ್ತ, ಮುಸುಕಿನ ಜೋಳ ಹಾಗೂ ನೆಲಗಡಲೆ ಬೆಳೆಗಳ 1.35 ಟನ್ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ’ ಎಂದು ಹೇಳಿದರು.

‘ಸಂಗ್ರಹವಿರುವ ಬಿತ್ತನೆ ಬೀಜದ ಪೈಕಿ, ಇದುವರೆಗೂ 869 ಕ್ವಿಂಟಲ್ ವಿತರಿಸಿದ್ದು, 489 ಕ್ವಿಂಟಲ್ ದಾಸ್ತಾನು ಸಂಗ್ರಹವಿದೆ. ಬೆಳೆ ಬಿತ್ತನೆ ಸಂದರ್ಭಕ್ಕೆ ಹಾಗೂ ಬೇಡಿಕೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಅಗತ್ಯ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗುವುದು. ಇದರ ಜೊತೆಗೆ ರಸಗೊಬ್ಬರ ವಿತರಣೆಗೂ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಗೊಬ್ಬರ ಕೊರತೆ ಇಲ್ಲ: ‘ಜಿಲ್ಲೆಯಲ್ಲಿ 28,047 ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆ ಗುರಿ ಇದೆ. ಸದ್ಯ ಮೂಲ ದಾಸ್ತಾನು ಸೇರಿ 16,135 ಮೆ.ಟನ್‌ಗಳಷ್ಟು ಸರಬರಾಜು ಆಗಿದ್ದು, ರೈತರಿಗೆ 8,195 ಮೆ.ಟನ್ ವಿತರಣೆ ಮಾಡಲಾಗಿದೆ. ಸದ್ಯ 7,939 ಮೆ.ಟನ್‌ಗಳಷ್ಟು ದಾಸ್ತಾನು ಸಂಗ್ರಹವಿದೆ. ಸದ್ಯ ರಸಗೊಬ್ಬರದ ಕೊರತೆಯಿರುವುದಿಲ್ಲ’ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು ಜುಲೈನಿಂದ ಆಗಸ್ಟ್‌ವರೆಗೆ ಬಿತ್ತನೆ ಹಾಗೂ ಇತರ ಚಟುವಟಿಕೆಗಳು ನಡೆಯುತ್ತವೆ. ಸದ್ಯ ರೈತರು ಬಿತ್ತನೆಗೆ ಸಂಬಂಧಿಸಿದಂತೆ ಭೂಮಿ ಉಳುಮೆ ಸೇರಿದಂತೆ ಇತರ ತಯಾರಿ ಮಾಡಿಕೊಳ್ಳುತ್ತಿದ್ದಾರೆ
– ಅಂಬಿಕಾ ಜಂಟಿ ನಿರ್ದೇಶಕಿ ಕೃಷಿ ಇಲಾಖೆ ರಾಮನಗರ

ಶೇ 1ರಷ್ಟು ಮಳೆ ಕೊರತೆ ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜನವರಿ 1ರಿಂದ ಜುಲೈ 16ರವರೆಗೆ ಜಿಲ್ಲೆಯ ವಾಡಿಕೆ ಮಳೆ 284 ಮಿ.ಮೀ. ಇದ್ದು ವಾಸ್ತವವಾಗಿ 281 ಮಿ.ಮೀ. ಮಳೆ ಸುರಿದಿದ್ದು ಶೇ 1ರಷ್ಟು ಕೊರತೆಯಾಗಿದೆ. ಜುಲೈ 1ರಿಂದ 15ರವರೆಗೆ ವಾಡಿಕೆ ಮಳೆ 36 ಮಿ.ಮೀ. ಇದ್ದು ವಾಸ್ತವವಾಗಿ 37 ಮಿ.ಮೀ. ಮಳೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.