ADVERTISEMENT

ರಾಮನಗರ ಜನರು ಬೆಂಗಳೂರು ಜಿಲ್ಲೆಯವರು: ಡಿ.ಕೆ ಶಿವಕುಮಾರ್

ಕನಕಾಂಬರಿ ಮಹಿಳಾ ಒಕ್ಕೂಟ ಜಾಗೃತಿ ಸಮಾವೇಶ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 14:09 IST
Last Updated 24 ನವೆಂಬರ್ 2024, 14:09 IST
ಕನಕಪುರ ರೂರಲ್ ಕಾಲೇಜಿನಲ್ಲಿ ನಡೆದ ಮಹಿಳಾ ಸಮಾವೇಶವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಎಚ್.ಕೆ ಶ್ರೀಕಂಠ, ಮತ್ತಿತರರು ಉಪಸ್ಥಿತರಿದ್ದರು
ಕನಕಪುರ ರೂರಲ್ ಕಾಲೇಜಿನಲ್ಲಿ ನಡೆದ ಮಹಿಳಾ ಸಮಾವೇಶವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಎಚ್.ಕೆ ಶ್ರೀಕಂಠ, ಮತ್ತಿತರರು ಉಪಸ್ಥಿತರಿದ್ದರು   

ಕನಕಪುರ: ‘ಕುಟುಂಬದ ಕಣ್ಣಾಗಿರುವ ಹೆಣ್ಣಿಗೆ ಆರ್ಥಿಕ ಶಕ್ತಿ ನೀಡಿ ಸಬಲೀಕರಣ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಸ್ತ್ರೀಶಕ್ತಿ ಸಂಘ  ಪ್ರಾರಂಭಿಸಲಾಯಿತು.‌ ಅದರ ಪರಿಣಾಮ ಮಹಿಳೆಯರ ಸಬಲೀಕರಣ ಸಾಧ್ಯವಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.

ಇಲ್ಲಿನ ರೂರಲ್ ಕಾಲೇಜು ಆವರಣದಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟದಿಂದ ಭಾನುವಾರ ನಡೆದ ಮಹಿಳಾ ಜಾಗೃತಿ ಮಹಾ ಸಮಾವೇಶ ಹಾಗೂ ಒಕ್ಕೂಟದ ಗೌರವಾಧ್ಯಕ್ಷ ಎಚ್.ಕೆ.ಶ್ರೀಕಂಠ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಸೇವಾ ಕಾರ್ಯಗಳನ್ನು ಉದ್ಘಾಟಿಸಿ ಮಾತನಾಡಿದರು.

‘ಮಹಿಳೆಯರು ಕುಟುಂಬದ ಶಕ್ತಿ. ಈ ದೇಶದ ಆಸ್ತಿ. ಅವರಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿ. ಮಹಿಳೆಯರಿಗೆ ಗೌರವ ತರುವ ಹಾಗೂ ಶಕ್ತಿ ತುಂಬವ ಕೆಲಸವನ್ನು ಸರ್ಕಾರ ಐದು ಗ್ಯಾರಂಟಿಗಳ ಮೂಲಕ ಮಾಡುತ್ತಿದೆ’ ಎಂದರು.

ADVERTISEMENT

ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿಯಾದರೆ ಆ ಕುಟುಂಬವೇ ಅಭಿವೃದ್ಧಿ ಆಗುತ್ತದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಕೆಲಸವನ್ನು ಕನಕಪುರ ತಾಲ್ಲೂಕಿನಲ್ಲಿ ಎಚ್.ಕೆ.ಶ್ರೀಕಂಠ ನೇತೃತ್ವದಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟ ಮಾಡುತ್ತಿದೆ. ಅವರು ಸಮಾಜಮುಖಿ ಕೆಲಸಗಳನ್ನು ಮಾಡುವುದಲ್ಲದೆ ತಾಲ್ಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗೂ ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಆರ್‌ಇಎಸ್ ಸಂಸ್ಥೆಗೆ ಕೃಷಿ ಕಾಲೇಜು ಮಂಜೂರು ಮಾಡಲಾಗಿದೆ ಎಂದರು. 

‘ನಾವು ಹಿಂದಿನಿಂದಲೂ ಬೆಂಗಳೂರು ಜಿಲ್ಲೆಯವರಾಗಿದ್ದು ಮುಂದೆಯೂ ಬೆಂಗಳೂರು ಜಿಲ್ಲೆಯವರಾಗಿಯೇ ಇರುತ್ತೇವೆ. ರೈತರ ಜೇಬಿಗೆ ನೇರವಾಗಿ ನಾವು ದುಡ್ಡು ಹಾಕಲು ಆಗುವುದಿಲ್ಲ. ಆದರೆ, ನಿಮ್ಮ ಆಸ್ತಿ ಮೌಲ್ಯ ಹೆಚ್ಚಿಸಲಾಗುವುದು’ ಎಂದರು.

ಕನಕಾಂಬರಿ ಮಹಿಳಾ ಒಕ್ಕೂಟದ ಗೌರವಾಧ್ಯಕ್ಷ ಎಚ್.ಕೆ ಶ್ರೀಕಂಠ ಮಾತನಾಡಿ, ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಲು ಅವರ ಸಬಲೀಕರಣ ಮುಖ್ಯ. ಸರ್ಕಾರದಿಂದ ಸಾಕಷ್ಟು ಯೋಜನೆಗಳು ಜಾರಿಗೊಳಿಸಲಾಗಿದೆ. ಮಹಿಳೆಯರು ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.

7 ಸಾವಿರಕ್ಕೂ ಹೆಚ್ಚು ಮಹಿಳೆಯರು ಒಕ್ಕೂಟದಲ್ಲಿ ಇದ್ದಾರೆ. ವಾರ್ಷಿಕವಾಗಿ ₹15ಕೋಟಿ ಸಾಲ ನೀಡಲಾಗಿದೆ. ಅದನ್ನು ಸಮರ್ಪಕವಾಗಿ ಪಾವತಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಶಿಬಿರ, ಅಂಗವಿಕಲರಿಗೆ ಸವಲತ್ತು ವಿತರಣೆ, ವಿದ್ಯಾರ್ಥಿ ವೇತನ, ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಯಿತು.

ಶಾಸಕ ದರ್ಶನ್ ಧ್ರುವನಾರಾಯಣ್, ವಿಧಾನ ಪರಿಷತ್‌ ಸದಸ್ಯ ಎಸ್.ರವಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಕೆ.ಎನ್.ದಿಲೀಪ್, ಬಮೂಲ್ ಅಧ್ಯಕ್ಷ ರಾಜ ಕುಮಾರ್, ಭವಾನಿ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ್, ಮುಖಂಡ ಡಿ.ಎಂ.ವಿಶ್ವನಾಥ್, ಆರ್‌ಇಎಸ್‌ ನಿರ್ದೇಶಕ ಎನ್.ಎಸ್.ರಾಮೇಗೌಡ, ಕೆ.ಬಿ.ನಾಗರಾಜು, ಸೂರ್ಯನಾರಾಯಣಗೌಡ, ಮಂಜುನಾಥ್, ಪುಟ್ಟಸ್ವಾಮಿ ಇದ್ದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಒಕ್ಕೂಟದ ಸದಸ್ಯೆಯರು
‘ಡಿಕೆಶಿ ಗ್ಯಾರಂಟಿಗಳ ಪಿತಾಮಹ’
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ ಕುಟುಂಬದ ಶಕ್ತಿಯಾಗಿರುವ ಮಹಿಳೆಯರು ಆರ್ಥಿಕವಾಗಿ ಸಬಲೀಕರಣರಾಗಬೇಕೆಂದು ಡಿ.ಕೆ.ಶಿವಕುಮಾರ್ ಬಯಸಿದ್ದರು. ಕೋವಿಡ್ ಸಂದರ್ಭದಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಮಹಿಳೆಯರ ಸಂಕಷ್ಟ ಅರಿತರು. ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿದೆ. ಶಿವಕುಮಾರ್ ಅವರು ಗ್ಯಾರಂಟಿಗಳ ಪಿತಾಮಹ ಎಂದು ಶ್ಲಾಘಿಸಿದರು. ಗ್ಯಾರಂಟಿ ಯೋಜನೆಯಲ್ಲಿ ಗೃಹಲಕ್ಷ್ಮಿ ಹಣ ತಾಲ್ಲೂಕಿನಲ್ಲಿ 70 ಸಾವಿರ ಮಹಿಳೆಯರಿಗೆ ಬರುತ್ತಿದೆ. ತಿಂಗಳಿಗೆ ₹140 ಕೋಟಿ ಹಣ ಸಂದಾಯವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಡಿಕೆ ಶಿವಕುಮಾರ್ ವಿದ್ಯಾರ್ಥಿ ವೇತನದ ಚಿಕ್ ವಿತರಣೆ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.