ರಾಮನಗರ: ಈ ಬಾರಿಯ ಉಪ ಚುನಾವಣೆ ಕದನವು ಮತ್ತೆ ಎರಡು ಕುಟುಂಬಗಳ ನಡುವೆ ಬಂದು ನಿಂತಿದೆ. ಇಲ್ಲಿ ಇತಿಹಾಸ ಪುನರಾವರ್ತನೆ ಆಗಲಿದೆಯೇ ಇಲ್ಲವೇ ಹೊಸ ಇತಿಹಾಸ ಸೃಷ್ಟಿಯಾಗಲಿದೆಯೇ ಎನ್ನುವ ಕುತೂಹಲ ಮೂಡಿದೆ.
ರಾಮನಗರ ವಿಧಾನಸಭಾ ಕ್ಷೇತ್ರದ ರಾಜಕಾರಣದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನಡುವಿನ ಕದನ ಎರಡು ದಶಕಗಳಷ್ಟು ಹಳೆಯದು. ಈ ಬಾರಿ ಗೌಡರ ಪಾಳಯದಿಂದ ಅವರ ಸೊಸೆ ಅನಿತಾ ಕುಮಾರಸ್ವಾಮಿ ಅಭ್ಯರ್ಥಿಯಾಗಿದ್ದರೆ, ಲಿಂಗಪ್ಪ ಪುತ್ರ ಚಂದ್ರಶೇಖರ್ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ. ಈ ಇಬ್ಬರ ನಡುವೆಯೇ ನೇರ ಹಣಾಹಣಿ ನಡೆಯುವುದು ಸ್ಪಷ್ಟವಾಗಿದೆ.
ಮೊದಲ ಮುಖಾಮುಖಿ: ಲಿಂಗಪ್ಪ ಹಾಗೂ ಎಚ್.ಡಿ. ದೇವೇಗೌಡರು ಮುಖಾಮುಖಿಯಾಗಿದ್ದು 1994ರ ವಿಧಾನಸಭೆ ಚುನಾವಣೆಯಲ್ಲಿ. 1989ರ ಚುನಾವಣೆಯಲ್ಲಿ ಲಿಂಗಪ್ಪ ರಾಮನಗರ ಕ್ಷೇತ್ರದಿಂದ ಮೊದಲ ಬಾರಿಗೆ ಗೆಲುವಿನ ಸವಿ ಅನುಭವಿಸಿದ್ದರು. ಅತ್ತ ಅದೇ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರು ಕನಕಪುರ ಹಾಗೂ ಹೊಳೆ ನರಸೀಪುರ ಎರಡೂ ಕ್ಷೇತ್ರಗಳಲ್ಲಿ ಸೋತು ನಿರಾಸೆ ಅನುಭವಿಸಿದ್ದರು. ಹೊಸ ಬದಲಾವಣೆಯ ಆಸೆ ಹೊತ್ತು ಗೌಡರು ರಾಮನಗರಕ್ಕೆ ವಲಸೆ ಬಂದರು.
94ರ ಈ ಚುನಾವಣೆಯು ಈ ಇಬ್ಬರ ನಡುವಿನ ಸಮಬಲದ ಹೋರಾಟಕ್ಕೆ ಸಾಕ್ಷಿಯಾಯಿತು. ಗೌಡರು ಜನತಾದಳದ ಅಭ್ಯರ್ಥಿಯಾದರೆ, ಲಿಂಗಪ್ಪ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದರು. ಅಂತಿಮವಾಗಿ ಜಯ ದೇವೇಗೌಡರದ್ದಾಯಿತು. ಈ ಗೆಲುವು ಅವರಿಗೆ ಶಾಸಕ ಸ್ಥಾನದ ಜೊತೆಗೆ ಮುಖ್ಯಮಂತ್ರಿ ಪಟ್ಟವನ್ನೂ ತಂದುಕೊಟ್ಟಿತು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ದೇವೇಗೌಡರು ರಾಷ್ಟ್ರ ರಾಜಕಾರಣದತ್ತ ಮುಖಮಾಡಿ ದೇಶದ ಪ್ರಧಾನಿಯಾದರು. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ 1997ರಲ್ಲಿ ನಡೆದ ಉಪ ಚುನಾವಣೆಯು ಹೈವೋಲ್ಟೇಜ್ ಕದನವಾಯಿತು. ಗೌಡರು ತಮ್ಮ ಪ್ರತಿನಿಧಿಯಾಗಿ ಖ್ಯಾತ ಚಿತ್ರನಟ ಅಂಬರೀಷ್ ಅಲಿಯಾಸ್ ಅಮರ್‌ನಾಥ್‌ರನ್ನು ಅಭ್ಯರ್ಥಿಯನ್ನಾಗಿಸಿದರು. ಲಿಂಗಪ್ಪ ಕಾಂಗ್ರೆಸ್‌ನಿಂದ ಮತ್ತೆ ಸ್ಪರ್ಧೆಗೆ ಇಳಿದರು. ಈ ಬಾರಿ ಮತದಾರರ ಅನುಕಂಪ ಲಿಂಗಪ್ಪರ ಮೇಲಿತ್ತು. ಅವರು ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಈ ಮೂಲಕ ಗೌಡರ ವಿರುದ್ಧದ ಸೇಡು ತೀರಿಸಿಕೊಂಡರು. 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಲಿಂಗಪ್ಪ ಮರು ಆಯ್ಕೆಯಾದರು. ಜೆಡಿಎಸ್ ಇಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು.
ಗೆಲುವಿಗೆ ಪೂರ್ಣವಿರಾಮ: ಲಿಂಗಪ್ಪರ ಗೆಲುವಿನ ಓಟಕ್ಕೆ ಪೂರ್ಣ ವಿರಾಮ ಇಟ್ಟದ್ದು ಎಚ್.ಡಿ. ಕುಮಾರಸ್ವಾಮಿ. ಇದು ಸಾಧ್ಯವಾಗಿದ್ದು 2004ರ ಚುನಾವಣೆಯಲ್ಲಿ. ರಾಮನಗರ ಕ್ಷೇತ್ರದಲ್ಲಿ ಈ ಇಬ್ಬರೂ ನಾಯಕರು ಆ ಚುನಾವಣೆಯಲ್ಲಿ ಮುಖಾಮುಖಿಯಾದರು. ಕುಮಾರಸ್ವಾಮಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರೆ, ಲಿಂಗಪ್ಪ ನಿರಾಸೆ ಅನುಭವಿಸಿದರು. ಈ ಸೋಲಿನಿಂದ ಕಂಗೆಟ್ಟ ಅವರು 2008ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಮನಸ್ಸು ಮಾಡಲಿಲ್ಲ.
ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮತ್ತೆ ಲಿಂಗಪ್ಪ ಕಾಂಗ್ರೆಸ್ ಅಭ್ಯರ್ಥಿಯಾದರು. ಆದರೆ ಈ ಬಾರಿ ಗೆಲುವು ಅವರ ಕೈ ಹಿಡಿಯಲಿಲ್ಲ. ಜೆಡಿಎಸ್‌ನ ಕೆ. ರಾಜು ಶಾಸಕರಾಗಿ ಆಯ್ಕೆಯಾದರು. ಮುಂದಿನ ವಿಧಾನಸಭೆ ಚುನಾವಣೆಗಳಲ್ಲಿ ಲಿಂಗಪ್ಪ ಸ್ಪರ್ಧಿಸಲಿಲ್ಲ.
ಯಾರನ್ನು ಬೆಂಬಲಿಸುತ್ತಾರೆ ಲಿಂಗಪ್ಪ?
ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ತಮ್ಮ ಪುತ್ರ ಚಂದ್ರಶೇಖರ್ ಬೆಂಬಲಕ್ಕೆ ನಿಲ್ಲುತ್ತಾರೋ ಇಲ್ಲವೇ ಕಾಂಗ್ರೆಸ್ ಹೈಕಮಾಂಡ್ ಆದೇಶಕ್ಕೆ ತಲೆಬಾಗುತ್ತಾರೋ ಕಾದು ನೋಡಬೇಕಿದೆ.
‘ನಾನು ಸತ್ತರೂ ಜೆಡಿಎಸ್ ಪರ ಪ್ರಚಾರ ಮಾಡಲಾರೆ, ಮತ ಹಾಕಲಾರೆ’ ಎಂದು ಅವರು ಈಗಾಗಲೇ ಬಹಿರಂಗ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ, ಅವರನ್ನು ಕಮಲ ಪಾಳಯಕ್ಕೆ ಸೆಳೆಯುವ ಪ್ರಯತ್ನವೂ ನಡೆದಿದೆ ಎನ್ನಲಾಗಿದೆ.
ಮುಖ್ಯಾಂಶಗಳು
* 1994ರಲ್ಲಿ ದೇವೇಗೌಡರ ವಿರುದ್ಧ ಲಿಂಗಪ್ಪರಿಗೆ ಸೋಲು
* 2004ರ ಚುನಾವಣೆಯಲ್ಲಿ ಕುಮಾರಸ್ವಾಮಿಗೆ ಗೆಲುವು
* ಉಪ ಚುನಾವಣೆ: ಒಮ್ಮೆ ಗೆದ್ದು, ಒಮ್ಮೆ ಸೋತ ಲಿಂಗಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.