ರಾಮನಗರ: ರಾಮನಗರದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಜನವರಿ 12ರಂದು ಹಾವೇರಿ ಜಿಲ್ಲೆಯ ವಿರೂಪಾಕ್ಷಪ್ಪ ಎಂಬ ರೈತನ ಮೇಲೆ ಸ್ಥಳೀಯ ರೀಲರ್ ಒಬ್ಬರು ಹಲ್ಲೆ ಯತ್ನ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದರ ವಿಡಿಯೊ ವೈರಲ್ ಆಗುತ್ತಿದೆ.
ವಿರೂಪಾಕ್ಷಪ್ಪ ತಂದಿದ್ದ ರೇಷ್ಮೆಗೂಡು ಆನ್‌ಲೈನ್ ಹರಾಜಿನಲ್ಲಿ ಪ್ರತಿ ಕೆ.ಜಿ.ಗೆ ₹550 ದರದಲ್ಲಿ ಮಾರಾಟ ಆಗಿತ್ತು. ಈ ಹರಾಜು ಪಡೆದಿದ್ದ ರೀಲರ್ ರೈತನ ಬಳಿ ಬಂದು ‘ನಾನು ತಪ್ಪಾಗಿ ಪ್ರತಿ ಕೆ.ಜಿ.ಗೆ ₹550 ದರ ನಮೂದು ಮಾಡಿದ್ದೇನೆ. ಪ್ರತಿ ಕೆ.ಜಿ.ಗೆ ₹100 ರಂತೆ ಹಣ ಕಡಿತ ಮಾಡಿ ಉಳಿದಿದ್ದನ್ನು ಕೊಡುತ್ತೇನೆ. ಹಾಗೆಯೇ ವೇಸ್ಟೇಜ್ ಲೆಕ್ಕದಲ್ಲಿ 4 ಕೆ.ಜಿ. ಗೂಡಿನ ಹಣ ಕೊಡುವುದಿಲ್ಲ’ ಎಂದಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿರೂಪಾಕ್ಷಪ್ಪ ‘ಹಾಗೆ ಮಾಡಬೇಡಿ. ಬೇಕಿದ್ದರೆ ನಿಮ್ಮ ಹರಾಜು ಹಿಂಪಡೆಯಿರಿ’ ಎಂದು ರೀಲರ್‌ಗೆ ಕೈ ಮುಗಿದಿದ್ದರು. ಈ ಸಂದರ್ಭ ರೀಲರ್ ಮತ್ತವರ ಬೆಂಬಲಿಗರು ವಿರೂಪಾಕ್ಷಪ್ಪ ಅವರನ್ನು ನಿಂದಿಸಿ, ಹಲ್ಲೆಗೂ ಯತ್ನಿಸಿದ್ದರು ಎಂದು ದೂರಲಾಗಿದೆ.
ಘಟನೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ಮಾರುಕಟ್ಟೆ ಉಪನಿರ್ದೇಶಕ ವೆಂಕಟೇಶ್‌ಗೆ ಮನವಿ ಸಲ್ಲಿಸಿದರು. ಸಂಬಂಧಿಸಿದ ರೀಲರ್‌ನ ಪರವಾನಗಿ ರದ್ದುಪಡಿಸಿ, ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದರು.
ದೂರು ದಾಖಲು: ರೈತನ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ರಾಮನಗರದ ಟಿಪ್ಪು ನಗರ ನಿವಾಸಿ ಮುನೀರ್ ಅಹಮ್ಮದ್ ಎಂಬುವರ ವಿರುದ್ಧ ರಾಮನಗರ ರೇಷ್ಮೆಗೂಡು ಮಾರುಕಟ್ಟೆ ಅಧಿಕಾರಿಗಳು ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.