ADVERTISEMENT

ರಾಮನಗರ: ‘ಸ್ವೀಟಿ‘ ಎಂಬ ತಾಯಿಯಿಂದಲೇ ಹತ್ಯೆಯಾದ ಮಕ್ಕಳ ಶವ ಹೊರ ತೆಗೆದು ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 6:38 IST
Last Updated 15 ಅಕ್ಟೋಬರ್ 2024, 6:38 IST
ರಾಮನಗರದ ಎಪಿಎಂಸಿ ಬಳಿ ಇರುವ ಸ್ಮಶಾನದಲ್ಲಿ ಮೃತ ಮಕ್ಕಳ ಶವವನ್ನು ಹೊರತೆಗೆಯುವ ಸ್ಥಳದಲ್ಲಿ ತಹಶೀಲ್ದಾರ್ ತೇಜಸ್ವಿನಿ, ಡಿವೈಎಸ್ಪಿ ದಿನಕರ ಶೆಟ್ಟಿ, ರಾಮನಗರ ಸರ್ಕಲ್ ಇನ್ ಸ್ಪೆಕ್ಟರ್ ಕೃಷ್ಣ, ಐಜೂರು ಠಾಣೆ ಪಿಎಸ್ ಐ ದುರಗಪ್ಪ ಹಾಜರಿದ್ದರು
ರಾಮನಗರದ ಎಪಿಎಂಸಿ ಬಳಿ ಇರುವ ಸ್ಮಶಾನದಲ್ಲಿ ಮೃತ ಮಕ್ಕಳ ಶವವನ್ನು ಹೊರತೆಗೆಯುವ ಸ್ಥಳದಲ್ಲಿ ತಹಶೀಲ್ದಾರ್ ತೇಜಸ್ವಿನಿ, ಡಿವೈಎಸ್ಪಿ ದಿನಕರ ಶೆಟ್ಟಿ, ರಾಮನಗರ ಸರ್ಕಲ್ ಇನ್ ಸ್ಪೆಕ್ಟರ್ ಕೃಷ್ಣ, ಐಜೂರು ಠಾಣೆ ಪಿಎಸ್ ಐ ದುರಗಪ್ಪ ಹಾಜರಿದ್ದರು   

ರಾಮನಗರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತವೆ ಎಂದು ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಹೂತು ಹಾಕಿದ್ದ ಆಕೆಯ ಇಬ್ಬರು ಮಕ್ಕಳ ಶವಗಳನ್ನು ಸೋಮವಾರ ಹೊರ ತೆಗೆದು ಪರೀಕ್ಷೆ ನಡೆಸಲಾಯಿತು. 

ಮಕ್ಕಳ ತಾಯಿ ಸ್ವೀಟಿ ಮತ್ತು ಆಕೆಯ ಪ್ರಿಯಕರ ಗ್ರೆಗೋರಿ ಫ್ರಾನ್ಸಿಸ್ ನೀಡಿದ ಮಾಹಿತಿ ಮೇರೆಗೆ ಇಲ್ಲಿನ ಎಪಿಎಂಸಿ ಬಳಿ ಇರುವ ಮಸಣದಲ್ಲಿ ಕಬಿಲ(2) ಹಾಗೂ ಕಬೀಲನ್ (11 ತಿಂಗಳು) ಶವಗಳನ್ನು ಹೊರತೆಗೆಯಲಾಯಿತು.

ತಹಶೀಲ್ದಾರ್ ತೇಜಸ್ವಿನಿ, ಡಿವೈಎಸ್‌ಪಿ ದಿನಕರ ಶೆಟ್ಟಿ, ರಾಮನಗರ ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣ, ಐಜೂರು ಠಾಣೆ ಪಿಎಸ್ ಐ ದುರಗಪ್ಪ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ಮಕ್ಕಳ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ವೇಳೆ ಆರೋಪಿಗಳಾದ ಸ್ವೀಟಿ, ಗ್ರೆಗೋರಿ ಫ್ರಾನ್ಸಿಸ್ ಹಾಗೂ ಸ್ವೀಟಿಯ ಪತಿ ಶಿವ ಸಹ ಇದ್ದರು.

ಬೆಂಗಳೂರಿನ ಎ.ಕೆ. ಕಾಲೊನಿ ನಿವಾಸಿ, ಮನೆಗೆಲಸದ ಸ್ವೀಟಿ ಮತ್ತು  ಕಾಲ್‌ಸೆಂಟರ್‌ ಉದ್ಯೋಗಿ ಬಾಣಸವಾಡಿಯ ಫ್ರಾನ್ಸಿಸ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು.

ADVERTISEMENT

ಸೆ. 15ರಂದು ಮಕ್ಕಳ ಸಮೇತ ಪ್ರಿಯಕರನ ಜೊತೆ ರಾಮನಗರಕ್ಕೆ ಬಂದಿದ್ದ ಜೋಡಿ ದಂಪತಿ ಎಂದು ಸುಳ್ಳು ಹೇಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ರಾಮನಗರದ ಮಂಜುನಾಥ ಬಡಾವಣೆಯಲ್ಲಿ ನೆಲೆಸಿದ್ದ ಆರೋಪಿಗಳು ತಮ್ಮ ಅಕ್ರಮ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗುತ್ತವೆ ಎಂದು ಒಂದೇ ವಾರದ ಅಂತರದಲ್ಲಿ ಎರಡೂ ಮಕ್ಕಳನ್ನು ಕೊಂದು ಅಂತ್ಯಕ್ರಿಯೆ ಮಾಡಿದ್ದರು. ಅನುಮಾನಗೊಂಡ ಮಸಣದ ಕಾವಲುಗಾರ ಇಬ್ಬರ ಚಿತ್ರ ಮತ್ತು ವೀಡಿಯೊ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದ.

ಈ ನಡುವೆ ಪತ್ನಿ ಮತ್ತು ಮಕ್ಕಳು ಕಾಣೆಯಾಗಿದ್ದಾರೆ ಎಂದು ಸ್ವೀಟಿಯ ಪತಿ ಶಿವ, ಬೆಂಗಳೂರಿನ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.

ಪತ್ನಿ ಮತ್ತು ಮಕ್ಕಳು ರಾಮನಗರದಲ್ಲಿರುವ ಮಾಹಿತಿ ಸಿಕ್ಕ ತಕ್ಷಣ ಪತಿ ಶಿವ ಅವರನ್ನು ಹುಡುಕಿಕೊಂಡು ರಾಮನಗರಕ್ಕೆ ಬಂದಿದ್ದರು. ಪೊಲೀಸರ ನೆರವಿನೊಂದಿಗೆ ಮನೆ ಪತ್ತೆ ಹಚ್ಚಿ ವಿಚಾರಿಸಿದಾಗ ಮಕ್ಕಳು ಮೃತಪಟ್ಟ ವಿಷಯ ಗೊತ್ತಾಗಿತ್ತು. ಶಿವ ಐಜೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾವಲುಗಾರ ಸೆರೆ ಹಿಡಿದಿದ್ದ ಫೋಟೊಗಳ ನೆರವಿನಿಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಮೃತಮಕ್ಕಳ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಶವಗಳು
ಮೃತಮಕ್ಕಳಾದ ಕಬಿಲ ಹಾಗೂ ಕಬಿಲನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.