ADVERTISEMENT

ಮಾಗಡಿ | ಕಳ್ಳರ ಬಂಧನ: ₹ 8.60 ಲಕ್ಷ ಮೌಲ್ಯದ ವಸ್ತು ವಶ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 5:27 IST
Last Updated 2 ಜುಲೈ 2024, 5:27 IST
ಮಾಗಡಿ ಪೊಲೀಸರು ಚಿನ್ನಾಭರಣ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿರುವುದು.
ಮಾಗಡಿ ಪೊಲೀಸರು ಚಿನ್ನಾಭರಣ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿರುವುದು.   

ಮಾಗಡಿ: ಮನೆಕಳ್ಳತನ, ಸರಗಳವು, ಜೇಬುಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ಆರು ಆರೋಪಿಗಳನ್ನು ಈಚೆಗೆ ಬಂಧಿಸಿರುವ ಮಾಗಡಿ ಪೊಲೀಸರು, ಚಿನ್ನದ ಒಡವೆ, ನಗದು, ಮೊಬೈಲ್, ಬೈಕ್ ಸೇರಿ ಒಟ್ಟು ₹ 8.60 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆಯ ಜಯಪ್ರಕಾಶ್ ನಾಯ್ಕ, ದೇವರಾಜು, ಮಹೇಶ್ ಕುಮಾರ್, ಬೆಂಗಳೂರಿನ ಅಕ್ರಮ್ ಖಾನ್  ಹಾಗೂ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಬಂಧಿತ ಆರೋಪಿಗಳು.

ಜೂನ್ 20ರಂದು ತಾಲ್ಲೂಕಿನ ಬ್ಯಾಲಕೆರೆ ಗ್ರಾಮದಲ್ಲಿ ಮನೆಯ ಬೀಗ ಒಡೆದು ಸುಮಾರು 55 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.

ADVERTISEMENT

ತುಮಕೂರು ಜಿಲ್ಲೆಯ ಐವಾರಲಹಳ್ಳಿಯ ಜಯಪ್ರಕಾಶ್ ನಾಯ್ಕ, ದೇವರಾಜು ಹಾಗೂ ತುಮಕೂರು ನಗರ ಅರಳೇಪೇಟೆಯ ರಾಮ್ ಜ್ಯುವೆಲರ್ಸ್ ಅಂಗಡಿ ಮಾಲೀಕ ಮಹೇಶ್ ಕುಮಾರ್ ಬಂಧಿತ ಆರೋಪಿಗಳು. ಜಯಪ್ರಕಾಶ್ ಮತ್ತು ದೇವರಾಜು ಪೇಂಟಿಂಗ್ ಕೆಲಸಗಾರರು. ಬಂಧಿತರಿಂದ ₹3.85 ಲಕ್ಷ ಮೌಲ್ಯದ 55 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಜೂನ್ 30ರಂದು ತಾಲ್ಲೂಕಿನ ಅಜ್ಜನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಮನೆ ಮುಂದೆ ಪಾತ್ರೆ ತೊಳೆಯುತ್ತಿದ್ದಾಗ ಬೈಕ್‌ನಲ್ಲಿ ಬಂದಿದ್ದ ಬಾಲಕರು, ಮಹಿಳೆಯ ಕೊರಳಿನಲ್ಲಿದ್ದ 42 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದರು. ಈ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ ₹2.50 ಲಕ್ಷ ಮೌಲ್ಯದ 42 ಗ್ರಾಂ ಚಿನ್ನದ ಮಾಂಗಲ್ಯ ಸರ ಹಾಗೂ  ₹ 2 ಲಕ್ಷ ಮೌಲ್ಯದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಮೇ 27ರಂದು ಮಾಗಡಿ ಬಸ್ ನಿಲ್ದಾಣದಲ್ಲಿ ಅಂಕನಹಳ್ಳಿಗ್ರಾಮದ ನಿವಾಸಿಯೊಬ್ಬರು ಬಸ್ ಹತ್ತುವಾಗ ಅವರ ಬ್ಯಾಗಿನಲ್ಲಿದ್ದ ₹ 12 ಸಾವಿರ ನಗದು ಹಾಗೂ ಮೊಬೈಲ್ ಕಳವು ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬೆಂಗಳೂರಿನ ಕೆ.ಜಿ. ಹಳ್ಳಿಯ ಅಕ್ರಮ್ ಖಾನ್ ಎಂಬಾತನನ್ನು ಬಂಧಿಸಿ, ಆತನಿಂದ ₹ 12 ಸಾವಿರ ನಗದು ಹಾಗೂ ₹ 13 ಸಾವಿರ ಮೌಲ್ಯದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಮೂರು ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗಾಗಿ ರಾಮನಗರ ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಶೇಷ ತಂಡ ರಚಿಸಿದ್ದರು. ಬಳಿಕ ಆರೋಪಿಗಳನ್ನು ಬಂಧಿಸಿದ್ದ ತಂಡವು, ಅವರಿಂದ ಚಿನ್ನದ ಒಡವೆ, ನಗದು, ಮೊಬೈಲ್, ಬೈಕ್ ಸೇರಿ ಒಟ್ಟು ₹ 8.60 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾಗಡಿ ಪೊಲೀಸ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್  ಜಿ.ವೈ. ಗಿರಿರಾಜ್, ಪಿಎಸ್ಐ ಸಿದ್ದರಾಜು, ಸಿಬ್ಬಂದಿಗಳಾದ ಎಎಸ್ಐ ಬಾಲನಾಯ್ಕ, ಬೀರಪ್ಪ, ನಾಗರಾಜು, ವೀರಭದ್ರಪ್ಪ, ಪ್ರಮೋದ, ಮುನೀಂದ್ರ ಅವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಕಾರ್ತಿರ್ ರೆಡ್ಡಿ ಮೆಚ್ಚುಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.