ರಾಮನಗರ: ಶ್ರೀರಾಮನ ಹುಟ್ಟಿದ ದಿನದ ಅಂಗವಾಗಿ ಶ್ರೀರಾಮ ನವಮಿಯನ್ನು ನಗರದೆಲ್ಲೆಡೆ ಶನಿವಾರ ಸಂಭ್ರಮ, ಭಕ್ತಿಯಿಂದ ಆಚರಿಸಲಾಯಿತು.
ಇಲ್ಲಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ಮತ್ತಿತರ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಎಲ್ಲಾ ದೇವಸ್ಥಾನಗಳಲ್ಲಿ ಜನ ಜಂಗುಳಿಯೇ ಕಂಡುಬಂತು. ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಜನರು ಸಾಲು ಸಾಲಾಗಿ ನಿಂತು ದೇವರ ದರ್ಶನ ಪಡೆದರು.
ವಿವಿಧ ಕಡೆಗಳಲ್ಲಿ ರಾಮ ಭಕ್ತರು ರಾಮನಾಮ ಸಂಕೀರ್ತನೆ, ಭಜನೆ, ವಿಷ್ಣುಸಹಸ್ರನಾಮದ ಪಠಣ, ಪಾರಾಯಣ ನಡೆಸುವ ಮೂಲಕ ತಮ್ಮ ಭಕ್ತಿಯನ್ನು ಮೆರೆದರು. ಶ್ರೀರಾಮ ದೇವಾಲಯ, ಐಜೂರಿನ ಮಾರಮ್ಮ ದೇವಸ್ಥಾನ, ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ, ವಿವೇಕಾನಂದನಗರದ ಆಂಜನೇಯ ದೇವಾಲಯದಲ್ಲಿ ದೇವರಿಗೆ ಮಾಡಿದ್ದ ವಿಶೇಷ ಅಲಂಕಾರ ಗಮನ ಸೆಳೆಯಿತು.
ಇಲ್ಲಿನ ಛತ್ರದ ಬೀದಿಯಲ್ಲಿರುವ ಶ್ರಿರಾಮ ದೇವಾಲಯ, ರಾಮದೇವರ ಬೆಟ್ಟಕ್ಕೆ ತೆರಳಿದ ಭಕ್ತರು ಪೂಜೆ ಸಲ್ಲಿಸಿದರು. ರಾಮನವಮಿ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು.
ಕೆಲವು ದೇವಸ್ಥಾನಗಳ ಮುಂದೆ ಹಾಗೂ ರಸ್ತೆಯ ಪ್ರಮುಖ ಸ್ಥಳಗಳಲ್ಲಿ ಶಾಮಿಯಾನ ಹಾಕಿ ಬಿಸಿಲಲ್ಲಿ ಬಸವಳಿದವರಿಗೆ ಪಾನಕ, ಕೋಸುಂಬರಿ, ಮಜ್ಜಿಗೆ ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.