ರಾಮನಗರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು–ಮೈಸೂರು ದಶಪಥ ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ದರ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ, ಜಿಲ್ಲೆಯ ಕುಂಬಳಗೋಡು ಸಮೀಪದ ಕಣಮಿಣಕಿ ಟೋಲ್ ಪ್ಲಾಜಾ ಬಳಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ಟೋಲ್ ಪ್ಲಾಜಾ ಬಳಿ ಜಮಾಯಿಸಿದ ಕಾರ್ಯಕರ್ತರು, ತಮಟೆ–ಹಲಗಿ ಬಾರಿಸುತ್ತಾ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿಯಲ್ಲಿ ವಾಹನಗಳ ಸವಾರರಿಗೆ ಹೊರೆಯಾಗಿರುವ ಟೋಲ್ ದರವನ್ನು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು. ಕೆಲವರು ಹೆದ್ದಾರಿಯಲ್ಲಿ ಮಲಗಿ ಆಕ್ರೋಶ ಹೊರ ಹಾಕಿದರು.
ಈ ವೇಳೆ ಕಾರ್ಯಕರ್ತರು ರಸ್ತೆ ತಡೆಗೆ ಮುಂದಾದಾಗ, ಪೊಲೀಸರು ತಡೆಯೊಡ್ಡಿದರು. ಆಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪಟ್ಟ ಬಿಡದೆ ರಸ್ತೆ ತಡೆಗೆ ಕಾರ್ಯಕರ್ತರು ಮುಂದಾದ ಪೊಲೀಸರು, ಕೆಲವರನ್ನು ತಮ್ಮ ವಶಕ್ಕೆ ಪಡೆದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಸು.ಚಿ. ನೀಲೇಶ್ ಗೌಡ ಮಾತನಾಡಿ, ‘ಅತ್ಯಂತ ಅವೈಜ್ಞಾನಿಕವಾಗಿ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ಸರಿಯಾಗಿ ನಿರ್ವಹಣೆ ಕೂಡ ಮಾಡುತ್ತಿಲ್ಲ. ಆದರೂ ಶೇ 22ರಷ್ಟು ಟೋಲ್ ದರ ಹೆಚ್ಚಳ ಮಾಡಿರುವುದು ಖಂಡನೀಯ’ ಎಂದರು.
‘ಟೋಲ್ ದರ ಹೆಚ್ಚಳವು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರಿಗೆ ಭಾರೀ ಹೊರೆಯಾಗಲಿದೆ. ಹಾಗಾಗಿ, ಪ್ರಾಧಿಕಾರ ಕೂಡಲೇ ಟೋಲ್ ದರವನ್ನು ಕಡಿಮೆ ಮಾಡಬೇಕು. ಹೆದ್ದಾರಿ ನಿರ್ವಹಣೆಯನ್ನು ಸೂಕ್ತವಾಗಿ ಮಾಡಬೇಕು. ಅಪಘಾತ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.