ಗೋವಿಂದರಾಜು.ವಿ
ಹಾರೋಹಳ್ಳಿ: ಸರ್ಕಾರದ ಕೆಲವು ಯೋಜನೆಗಳ ಕಮಿಷನ್ ಹಣವನ್ನು ಸರ್ಕಾರ ಸಕಾಲದಲ್ಲಿ ಪಾವತಿಸುತ್ತಿಲ್ಲ ಎಂದು ಗ್ರಾಮ ಒನ್ ಕೇಂದ್ರಗಳ ನೌಕರರು ಆರೋಪಿಸಿದ್ದಾರೆ.
ರಾಜ್ಯದಲ್ಲಿ 5963 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಕೇಂದ್ರಗಳಿವೆ. ಒಂದೇ ಸೂರಿನಡಿ 750 ಸೇವೆ ಲಭ್ಯವಿದ್ದು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಗ್ರಾಮ ಒನ್ ಕೇಂದ್ರಗಳಲ್ಲಿ ಆರೋಗ್ಯ ಭಾರತ್ ಕಾರ್ಡ್, ಪಾನ್‌ಕಾರ್ಡ್, ಬೆಳೆವಿಮೆ ನೋಂದಣಿ, ಆಯುಷ್ಮಾನ್ ಕಾರ್ಡ್ ಹಾಗೂ ಇನ್ನತರ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದೀಗ ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳ ಫಲಾನುಭವಿಗಳನ್ನು ಉಚಿತವಾಗಿ ನೋಂದಣಿ ಮಾಡುವಂತೆ ನಾಡಕಚೇರಿ, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಿಗೆ ಸರ್ಕಾರ ಸೂಚಿಸಿದೆ. ಎಲ್ಲ ಕೇಂದ್ರಗಳಲ್ಲೂ ಕಂಪ್ಯೂಟರ್ ಆಪರೇಟರ್‌ಗಳ ವೇತನ, ವಿದ್ಯುತ್, ಪ್ರಿಂಟರ್‌ಗಳನ್ನು ಸರ್ಕಾರ ನೀಡುತ್ತದೆ. ಆದರೆ ಗ್ರಾಮ ಒನ್ ಸೇವಾ ಕೇಂದ್ರ ಸರ್ಕಾರದ ಅಧೀನದಲ್ಲಿ ಬಂದರೂ ಖರ್ಚು-ವೆಚ್ಚಗಳನ್ನು ಆಪರೇಟರ್‌ಗಳೇ ಭರಿಸಿಕೊಳ್ಳಬೇಕಿದೆ.
ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಉಚಿತವಾಗಿ ನೋಂದಣಿ ಮಾಡಿದರೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದಿರುವ ಗ್ರಾಮ ಒನ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ಜಿಲ್ಲಾ ಸಂಯೋಜಕರು, ಸರ್ಕಾರದ ಯೋಜನೆಗಳ ನೋಂದಣಿಗೆ ಸರ್ಕಾರ ಕಮಿಷನ್ ಹಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸೇವಾ ಶುಲ್ಕ ಪಡೆಯಲು ಅನುಮತಿ ನೀಡಲಿ: ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬರುವ ಫಲಾನುಭವಿಗಳಿಗೆ ಸೇವಾ ಶುಲ್ಕ ವಿಧಿಸಲು ಗ್ರಾಮ ಒನ್ ಕೇಂದ್ರಗಳಿಗೆ ಅನುಮತಿ ನೀಡಬೇಕು. ಜನರು ಉಚಿತವಾಗಿ ಅರ್ಜಿ ಹಾಕಲು ಅನುಮತಿ ನೀಡದರೆ, ನಮ್ಮ ಹೊಟ್ಟೆ ತುಂಬುವುದಿಲ್ಲ. ಕಚೇರಿ, ಕಂಪ್ಯೂಟರ್, ಇಂಟರ್‌ನೆಟ್, ವೆಚ್ಚ ಭರಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ಗೃಹಜ್ಯೋತಿ ಯೋಜನೆಗೆ ಫಲಾನುಭವಿಗಳಿಂದ ಹಣ ಪಡೆದಿಲ್ಲ. ಹೀಗಾಗಿ ಗೃಹಲಕ್ಷ್ಮಿ ಅರ್ಜಿ ಸ್ವೀಕಾರಕ್ಕೆ ಶುಲ್ಕ ವಿಧಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ, ಕಟ್ಟಡದ ಬಾಡಿಗೆ ನಿರ್ವಹಣೆಗೂ ಕಷ್ಟವಾಗುತ್ತದೆ ಎಂದು ಗ್ರಾಮ ಒನ್ ಆಪರೇಟರ್‌ಗಳು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮ ಒನ್ ಕೇಂದ್ರಗಳಲ್ಲಿ ಸರ್ಕಾರ ಯೋಜನೆಗಳಿಗೆ ಸಂಬಂಧಿಸಿದಂತೆ ಕಮಿಷನ್ ನೀಡುತ್ತಿದ್ದು ಸೇವಾ ಶುಲ್ಕ ನಿಗದಿಗೆ ಸಂಬಂಧಿಸಿದ್ದಂತೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕುವೇಣು. ಕೆ, ಜಿಲ್ಲಾ ಯೋಜನಾ ವ್ಯವಸ್ಥಾಪಕ, ಗ್ರಾಮ ಒನ್ ಕೇಂದ್ರ, ರಾಮನಗರ
ನಮಗೆ ಆಯುಷ್ಮನ್ ಭಾರತ್ ಅರೋಗ್ಯ ಕಾರ್ಡ್ ಹಣ ಬಂದಿಲ್ಲ. ಗೃಹಜ್ಯೋತಿ ಯೋಜನೆಗೆ ಉಚಿತವಾಗಿ ನೋಂದಣಿ ಮಾಡಿದರೆ, ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಬಾಡಿಗೆ ಹಾಗೂ ಇತರೆ ಖರ್ಚು, ವೆಚ್ಚಗಳನ್ನು ನಿಭಾಯಿಸಲು ಸಮಸ್ಯೆಯಾಗುತ್ತಿದೆ. ಸರ್ಕಾರ ಗೌರವಧನ ನೀಡಿದರೆ, ಅನುಕೂಲವಾಗುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ಗ್ರಾಮ ಒನ್ ಸಿಬ್ಬಂದಿ ಆರೋಪಿಸಿದರು.
ಆಯುಷ್ಮನ್ ಭಾರತ್ ಕಾರ್ಡ್ ಹಣವೂ ಬಂದಿಲ್ಲ
ಗ್ರಾಮ ಒನ್ ಕೇಂದ್ರಗಳಲ್ಲಿ ಆರೋಗ್ಯ ಭಾರತ್ ಕಾರ್ಡ್ ಹಾಗೂ ಆಯುಷ್ಮನ್ ಕಾರ್ಡ್ ನೋಂದಣಿಗೆ ಆದೇಶ ನೀಡಲಾಗಿತ್ತು. ಒಂದು ಆರೋಗ್ಯ ಭಾರತ್ ಕಾರ್ಡ್ ಮತ್ತು ಆಯುಷ್ಮಾನ್ ಕಾರ್ಡ್ ನೋಂದಣಿಗೆ 8-10 ರೂ. ನೀಡುವುದಾಗಿ ತಿಳಿಸಲಾಗಿತ್ತು. ಆಪರೇಟರ್‌ಗಳು 4000-5000 ಕಾರ್ಡ್‌ಗಳನ್ನು ನೋಂದಣಿ ಮಾಡಿದ್ದು, ಈವರೆಗೂ ಅದರ ಕಮಿಷನ್ ಹಣವನ್ನು ಜಮಾ ಮಾಡಿಲ್ಲ. ಜನರಿಗೆ ಇಲಾಖೆ ಆರೋಗ್ಯ ಭಾರತ್ ಕಾರ್ಡ್ ಕೂಡ ನೀಡಿಲ್ಲ. ಕೆಲವರಿಗೆ 2000-3000 ರೂ. ಸೇವಾ ಶುಲ್ಕ ಮಾತ್ರ ಜಮಾ ಮಾಡಿದ್ದು, ಈಗಾಗಲೇ ಸಂಕಷ್ಟದಲ್ಲಿರುವ ಗ್ರಾಮ ಒನ್ ಕೇಂದ್ರಗಳಿಗೆ ಗೃಹಲಕ್ಷ್ಮೀ ಯೋಜನೆಯ ನೋಂದಣಿಯನ್ನು ಉಚಿತ ಮಾಡಿ ಇಲ್ಲಿನ ನೌಕರರನ್ನು ಸಂಕಷ್ಟಕ್ಕೆ ದೂಡುತ್ತಿದೆ.
ಸಂಕಷ್ಟದಲ್ಲಿ ಕೇಂದ್ರಗಳು
ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು 10-20 ಸಾವಿರ ರೂ. ಬಾಡಿಗೆ ಕಟ್ಟಿ, ವಿದ್ಯುತ್ ಬಿಲ್, ಪೇಪರ್, ಇಂಕ್ ಹಾಗೂ ಇನ್ನಿತರ ಖರ್ಚುಗಳನ್ನು ಸರಿದೂಗಿಸಲಾಗದೆ. ಗ್ರಾಮ ಒನ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಖಾಸಗಿ ಕಂಪ್ಯೂಟರ್ ಕೇಂದ್ರಗಳ ಸೇವಾ ಶುಲ್ಕ ಹೆಚ್ಚಳದಿಂದಾಗಿ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಇದರ ನಡುವೆ ಒಬ್ಬರು ಅಥವಾ ಇಬ್ಬರನ್ನೂ ಕೆಲಸಕ್ಕೆ ನೇಮಿಸಿಕೊಂಡು ಅವರಿಗೆ ಸಂಬಳ ಕೊಡುವಲ್ಲಿ ಗ್ರಾಮ ಒನ್ ಕೇಂದ್ರಗಳ ಸಿಬ್ಬಂದಿ ತೊಂದರೆಗೆ ಸಿಲುಕಿದ್ದಾರೆ
ಸೇವಾ ಶುಲ್ಕ ನಿಗದಿಗೊಳಿಸಿ
ಗೃಹಲಕ್ಷ್ಮಿ ಯೋಜನೆಯ ಉಚಿತ ನೋಂದಣಿಗೆ ಅವಕಾಶ ನೀಡಿದ್ದು, ಒಂದು ಅರ್ಜಿ ಸಲ್ಲಿಸುವ ಆಪರೇಟರ್‌ಗಳಿಗೆ 15 ರೂ. ಸೇವಾ ಶುಲ್ಕ ನಿಗದಿ ಮಾಡಿದೆ. ಈಗಾಗಲೇ ಆಯುಷ್ಮಾನ್ ಹಾಗೂ ಆರೋಗ್ಯ ಭಾರತ್ ಕಾರ್ಡ್‌ಗಳನ್ನು ಮಾಡಿಸಿ ಸೇವಾ ಶುಲ್ಕ ನೀಡದೆ ಇರುವ ಉದಾಹರಣೆ ಎದುರಿಗೆ ಇರುವಾಗ 15 ರೂ. ನೀಡುತ್ತಾರೆ ಎಂಬ ನಂಬಿಕೆ ಇಲ್ಲ. ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸಲು ಸೇವಾ ಶುಲ್ಕವನ್ನು 100 ರೂ. ಗಳಿಗೆ ಏರಿಸಬೇಕು. ಉಚಿತ ನೋಂದಣಿ ಮಾಡದೆ ಇಂತಿಷ್ಟು ದರ ನಿಗದಿ ಮಾಡಿದರೆ ಗ್ರಾಮ ಒನ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಅನುಕೂಲವಾಗುತ್ತದೆ ಎಂಬ ಒತ್ತಾಯ ಕೇಳಿಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.