ADVERTISEMENT

ರಾಮನಗರ | ಸಾಧಾರಣ ಮಳೆ: ಬೆಳೆಗೆ ಜೀವಕಳೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 7:31 IST
Last Updated 16 ಅಕ್ಟೋಬರ್ 2024, 7:31 IST
ರಾಮನಗರದಲ್ಲಿ ಮಂಗಳವಾರ ಸುರಿದ ಮಳೆಯಿಂದಾಗಿ ರಾಮನಗರದ ಮುಖ್ಯರಸ್ತೆಯು ಹಳ್ಳದಂತಾಗಿರುವುದು
ರಾಮನಗರದಲ್ಲಿ ಮಂಗಳವಾರ ಸುರಿದ ಮಳೆಯಿಂದಾಗಿ ರಾಮನಗರದ ಮುಖ್ಯರಸ್ತೆಯು ಹಳ್ಳದಂತಾಗಿರುವುದು   

ರಾಮನಗರ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆಯು ಬೆಳೆಗಳಿಗೆ ಜೀವಕಳೆ ತಂದಿದೆ. ಮಳೆ ಇಲ್ಲದೆ ಬೆಳೆ ಒಣಗುತ್ತಿವೆ ಎಂದು ಚಿಂತಾಕ್ರಾಂತರಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೆಲವೊಮ್ಮೆ ಗುಡುಗು ಸಹಿತ ಧಾರಾಕಾರವಾಗಿ ಹಾಗೂ ನಂತರ ಸಾಧಾರಣವಾಗಿ ಸುರಿಯುತ್ತಿರುವ ಮಳೆ ಬಿಸಿಲ ಬೇಗೆಯನ್ನು ಸಹ ತಣಿಸಿದೆ.

ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಎನ್ನದೆ ಆಗಾಗ ಬಿಡುವು ಕೊಟ್ಟು ಸುರಿಯುತ್ತಿರುವ ಮಳೆ ಒಟ್ಟಿನಲ್ಲಿ ರೈತರಿಗೆ ಸಮಾಧಾನ ತಂದಿದೆ. ಒಣಗಿದ್ದ ರಾಗಿ ಬೆಳೆ ಹಸಿರಿನಿಂದ ಕಂಗೊಳಿಸುತ್ತಿದೆ. ರೇಷ್ಮೆ, ತೆಂಗು, ಮಾವು ಸೇರಿದಂತೆ ಇತರ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಮಳೆಯಿಂದಾಗಿ ಚೇತರಿಸಿಕೊಂಡಿವೆ.

ಆರೆಂಜ್ ಅಲರ್ಟ್: ಮಳೆಯಿಂದಾಗಿ ಜಿಲ್ಲೆಯಲ್ಲಿ ಹರಿಯುವ ಅರ್ಕಾವತಿ, ಕಣ್ವ ಸೇರಿದಂತೆ ವಿವಿಧ ನದಿಗಳಲ್ಲಿ ನೀರಿನ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ನೀರಿಲ್ಲದೆ ಕಳೆಗುಂದಿದ್ದ ಕೆರೆ–ಕಟ್ಟೆಗಳಿಗೆ ಕಳೆ ಬಂದಿದೆ. ರಾಮನಗರ ಜಿಲ್ಲೆ ಸೇರಿದಂತೆ ಪಕ್ಕದ ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಸೇರಿದಂತೆ ಕೆಲ ಜಿಲ್ಲೆಯಗಳಲ್ಲಿ ಅ. 18ರವರೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ.

ADVERTISEMENT

ಪರದಾಟ: ಮಳೆಯಿಂದಾಗಿ ರಾಮನಗರದ ಹದಗೆಟ್ಟ ರಸ್ತೆಗಳಲ್ಲಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು. ಕೆಲವರು ರಸ್ತೆ ಬದಿಯ ಕಟ್ಟಡಗಳ ಬಳಿ ನಿಂತು ಆಶ್ರಯ ಪಡೆದರೆ, ಉಳಿದವರು ನೆನೆದುಕೊಂಡೇ ಮಳೆಯನ್ನು ಆನಂದಿಸಿಕೊಂಡು ನಡೆದುಕೊಂಡು ಹೋದರು. ಮಳೆ ಇಲ್ಲದೆ ಮೂಲೆ ಸೇರಿದ್ದ ಛತ್ರಿಗಳನ್ನಿಡಿದು ಓಡಾಡುತ್ತಿದ್ದ ಜನರು ಅಲ್ಲಲ್ಲಿ ಕಂಡುಬಂದರು.

‘ಈ ಸಲವೂ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಮಳೆ ಸುರಿದಿಲ್ಲ. ಹಾಗಾಗಿ, ಕೆರೆ–ಕಟ್ಟೆಗಳು ಒಣಗಿವೆ. ನದಿಗಳು ಸಹ ಹೇಳಿಕೊಳ್ಳುವಷ್ಟು ಮೈದುಂಬಿಲ್ಲ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಿರೀಕ್ಷಿತ ಮಳೆ ಸುರಿಯಲಿಲ್ಲ. ಬಿಸಿಲ ಬೇಗೆಗೆ ರಾಗಿ ಪೈರುಗಳು ಒಣಗಿದ್ದವು. ಕಡೆಗೂ ಮಳೆರಾಯ ರೈತರ ಕೂಗು ಕೇಳಿಸಿಕೊಂಡಿದ್ದಾನೆ ಎನ್ನಿಸುತ್ತದೆ. ಇಂದು ಸುರಿದ ಮಳೆಯು ರಾಗಿ ಸೇರಿದಂತೆ ವಿವಿಧ ಬೆಳೆಗಳಿಗೆ ವರವಾಗಿದೆ’ಎಂದು ಪಾಲಾಬೋವಿದೊಡ್ಡಿಯ ರೈತ ಆದೀಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮಳೆಯಿಂದಾಗಿ ಜಿಲ್ಲೆಯಲ್ಲಿ ಯಾವುದೇ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ.

Cut-off box - ಮಂಚನಾಯಕನಹಳ್ಳಿಯಲ್ಲಿ ಹೆಚ್ಚು ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯನ್ನು ಗಮನಿಸಿದಾಗ ರಾಮನಗರ ತಾಲ್ಲೂಕಿನ ಮಂಚನಾಯಕನಹಳ್ಳಿಯಲ್ಲಿ ಹೆಚ್ಚು 30 ಮಿ.ಮೀ. ಮಳೆಯಾಗಿದೆ. ನಂತರ ಮಾಗಡಿಯ ಅಜ್ಜನಹಳ್ಳಿಯಲ್ಲಿ 29.5 ಮಿ.ಮೀ. ರಾಮನಗರದ ಕೆಂಚನಕುಪ್ಪೆಯಲ್ಲಿ 28.5 ಮಿ.ಮೀ. ಮಾಗಡಿಯ ಬಾಚೇನಹಟ್ಟಿಯಲ್ಲಿ 23.5 ಮಿ.ಮೀ. ಮತ್ತಿಕೆರೆಯಲ್ಲಿ 23.5 ಮಿ.ಮೀ. ಮಾಡಬಾಳಿನಲ್ಲಿ 23 ಮಿ.ಮೀ. ಕನಕಪುರ ತಾಲ್ಲೂಕಿನ ಬನವಾಸಿಯಲ್ಲಿ 22.5 ಮಿ.ಮೀ. ಹಾರೋಹಳ್ಳಿಯ ಕಗ್ಗಲಹಳ್ಳಿಯಲ್ಲಿ 18 ಮಿ.ಮೀ. ದ್ಯಾವಸಂದ್ರದಲ್ಲಿ 17 ಮಿ.ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.