ರಾಮನಗರ: ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ತನ್ನ ಮೊಬೈಲ್‌ನಿಂದ ವಿಡಿಯೊ ಸೆರೆ ಹಿಡಿಯುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಕುಂಬಳಗೋಡು ಠಾಣೆ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ದೊಡ್ಡಬೆಲೆ ರಸ್ತೆಯಲ್ಲಿರುವ ಎಸಿಎಸ್ ಎಂಜಿನಿಯರ್ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ 7ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ ಚಿಕ್ಕಗೊಲ್ಲರಹಟ್ಟಿ ಕುಶಾಲ್, ಪೊಲೀಸರು ವಶಕ್ಕೆ ಪಡೆದ ವಿದ್ಯಾರ್ಥಿ.
ಬೆಳಿಗ್ಗೆ 10ಗಂಟೆ ಸುಮಾರಿಗೆ ಶೌಚಾಲಯಕ್ಕೆ ಬಂದಿರುವ ಕುಶಾಲ್, ಕೊಠಡಿಯೊಂದರಲ್ಲಿ ಇದ್ದುಕೊಂಡು ವಿದ್ಯಾರ್ಥಿನಿಯರ ವಿಡಿಯೊವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ. ಇದನ್ನು ಗಮನಿಸಿದ ವಿದ್ಯಾರ್ಥಿನಿಯೊಬ್ಬರು ಕಿರುಚಿಕೊಂಡು ಶೌಚಾಲಯದಿಂದ ಹೊರ ಬಂದಿದ್ದಾರೆ.
ಸ್ಥಳದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿಗೆ ವಿದ್ಯಾರ್ಥಿನಿ ವಿಷಯ ತಿಳಿಸಿದ್ದಾರೆ. ಆಗ, ವಿದ್ಯಾರ್ಥಿಗಳು ಶೌಚಾಲಯದ ಒಳ ಹೋಗಿ ಕೊಠಡಿ ಪರಿಶೀಲಿಸಿದಾಗ ಕುಶಾಲ್ ಅಲ್ಲಿದ್ದ. ಕೂಡಲೇ ಹೊರಗೆ ಎಳೆದುಕೊಂಡು ಬಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು ವಿದ್ಯಾರ್ಥಿ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾ ಹಲ್ಲೆ ನಡೆಸಲು ಮುಂದಾದರು. ಇದನ್ನು ಖಂಡಿಸಿ ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು ಎಂದು ಪೊಲೀಸರು ತಿಳಿಸಿದರು.
ಅಷ್ಟೊತ್ತಿಗಾಗಲೇ ಕಾಲೇಜು ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಕುಶಾಲ್‌ನನ್ನು ವಶಕ್ಕೆ ಪಡೆದು, ಪರಿಸ್ಥಿತಿ ತಿಳಿಗೊಳಿಸಿದರು. ಆರೋಪಿ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಗ್ಯಾಲರಿಯಲ್ಲಿ ಬೆಳಿಗ್ಗೆ 10.30ರಿಂದ 10.45ರ ಅವಧಿಯಲ್ಲಿ ಎರಡು ವಿಡಿಯೊಗಳು ಪತ್ತೆಯಾಗಿವೆ. ಒಂದು 14ನಿಮಿಷವಿದ್ದು, ಮತ್ತೊಂದು 59 ಸೆಕೆಂಡ್ ಇದೆ.
ಆರೋಪಿ ಹಿಂದೆಯೂ ಇದೇ ರೀತಿ ವಿಡಿಯೊಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆಯೇ ? ಬೇರೆಯವರ ಬಳಿ ಹಂಚಿಕೊಂಡಿದ್ದಾನೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಮೊಬೈಲ್‌ನಲ್ಲಿರುವ ಸಂಪೂರ್ಣ ದತ್ತಾಂಶ ರಿಕವರಿ ಮಾಡಲು ಸೈಬರ್ ವಿಭಾಗಕ್ಕೆ ಮೊಬೈಲ್ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.