ರಾಮನಗರ: ತಾಲ್ಲೂಕಿನ ಹಳ್ಳಿಮಾಳ ಗ್ರಾಮದ ವೃತ್ತದ ಅಂಗಳದಲ್ಲಿ ಭಾನುವಾರ ಬಣ್ಣಬಣ್ಣದ ರಂಗೋಲಿಗಳು ಎಲ್ಲರ ಆಕರ್ಷಣೆ ಆಗಿದ್ದವು. ಗ್ರಾಮೀಣ ಭಾಗದ ಮಹಿಳೆಯರು ನಾನಾ ಬಗೆಯ ಚಿತ್ತಾರಗಳ ಮೂಲಕ ಗಮನ ಸೆಳೆದರು.
ನಗರ ದೇವತೆಗಳ ಕರಗ ಮಹೋತ್ಸವ ಪ್ರಯುಕ್ತ ಹರಿಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಮಂಚೇಗೌಡ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಈ ರಂಗೋಲಿ ಸ್ಪರ್ಧೆಯಲ್ಲಿ ವಿವಿಧ ಗ್ರಾಮಗಳ ಮಹಿಳೆಯರು ರಂಗೋಲಿ ಬಿಡಿಸಿದರು. ವಿಜೇತರಿಗೆ ಬಹುಮಾನವನ್ನೂ ವಿತರಿಸಲಾಯಿತು.
ಕಾರ್ಯಕ್ರಮವನ್ನು ಶಾಸಕಿ ಅನಿತಾ ಕುಮಾರಸ್ವಾಮಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ‘ ಮನೆಯ ಮುಂದೆ ಹಾಗೂ ಮನೆಯಲ್ಲಿನ ದೇವರ ಗುಡಿಗಳ ಮುಂದೆ ರಂಗೋಲೆ ಬಿಡಿಸುವುದು ನಮ್ಮ ಹಿಂದೂ ಸಂಸ್ಕೃತಿಯ ಪದ್ಧತಿಯಾಗಿದೆ. ರಂಗೋಲೆ ಕಲೆಯನ್ನು ಇಂದಿನ ಯುವ ಜನತೆ ವಿವಿಧ ಆಕಾರಗಳಲ್ಲಿ ಬಿಡಿಸುವ ಹವ್ಯಾಸವನ್ನು ಕರಗತ ಮಾಡಿಕೊಂಡಿರುವುದನ್ನು ಕಂಡು ಮನಸ್ಸು ತುಂಬಿಬಂದಿದೆ’ ಎಂದು ಅವರು ಹೇಳಿದರು.
66 ಸ್ಪರ್ಧಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಈ ಕಲೆಯನ್ನು ನಮ್ಮ ಮುಂದಿನ ಯುವ ಪೀಳಿಗೆಗೆ ತಲುಪಿಸಿರುವ ದಿಸೆಯಲ್ಲಿ ಇಂತಹ ಪ್ರಯತ್ನಗಳು ಮೆಚ್ಚುಗೆಯ ಸಂಗತಿ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಈ ಇಂತಹ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಗ್ರಾಮೀಣ ಭಾಗದ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಬೇಕು. ಪ್ರತಿ ಜಿಲ್ಲೆಯಲ್ಲಿಯೂ ನಿರುದ್ಯೋಗಿ ಯುವತಿಯರಿಗೆ ಉದ್ಯೋಗ ದೊರಕಿಸಿಕೊಡಬೇಕು ಎಂದು ವಿಧಾನಸೌಧದಲ್ಲಿ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದರು.
ಹರಿಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಮಂಚೇಗೌಡ, ಮುಖಂಡ ಮಂಚೇಗೌಡ, ರಾಜಶೇಖರ್, ಬಿ. ಉಮೇಶ್, ಹರಿಸಂದ್ರ ಗ್ರಾ.ಪಂ. ಸದಸ್ಯರಾದ ರಾಮು, ತಿಬ್ಬೇಗೌಡನದೊಡ್ಡಿಯ ಪುಟ್ಟಲಕ್ಷ್ಮಮ್ಮ, ಹಳ್ಳಿಮಾಳದ ದ್ಯಾವಾಜಮ್ಮ, ವೆಂಕಟರಾಮು, ಹಳ್ಳಿಮಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೃಷ್ಣೇಗೌಡ, ನಾಗಯ್ಯ, ರವಿ ಹನುಮಂತೇಗೌಡನದೊಡ್ಡಿ ಗ್ರಾ.ಪಂ. ಮಾಜಿ ಸದಸ್ಯ ರಾಮು, ಮುಖಂಡರಾದ ಮೋಹನ್ ರಾಂ, ಶೋಭಾ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.