ADVERTISEMENT

ಕೆಂಪಾಪುರ ರೈತರಿಗೆ ಶೀಘ್ರ ಪರಿಹಾರ: ಎಚ್.ಎಂ. ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 3:28 IST
Last Updated 25 ಜನವರಿ 2021, 3:28 IST
ಮಾಗಡಿ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಎಚ್‌.ಎಂ. ಕೃಷ್ಣಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಎಂ. ಧನಂಜಯ, ಕಾರ್ಯದರ್ಶಿ ಹುಳ್ಳೇನಹಳ್ಳಿ ಮಂಜುನಾಥ, ಶಶಿಧರ್‌ ಇದ್ದರು
ಮಾಗಡಿ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಎಚ್‌.ಎಂ. ಕೃಷ್ಣಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಎಂ. ಧನಂಜಯ, ಕಾರ್ಯದರ್ಶಿ ಹುಳ್ಳೇನಹಳ್ಳಿ ಮಂಜುನಾಥ, ಶಶಿಧರ್‌ ಇದ್ದರು   

ಮಾಗಡಿ: ಕೆಂಪಾಪುರದ ರೈತರಿಗೆ ಎರಡು ತಿಂಗಳಲ್ಲಿ ಪರಿಹಾರ ನೀಡಿ ಕೆಂಪೇಗೌಡರ ಸ್ಮಾರಕ ಅಭಿವೃದ್ಧಿಗೆ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಡಿಸಿಎಂ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ತಿಳಿಸಿದರು.

‘23 ವರ್ಷಗಳಿಂದ ಕೆಂಪೇಗೌಡರ ಹೆಸರಿನಲ್ಲಿ ಮಾಡಿದ್ದ ಜನೋಪಯೋಗಿ ಸೇವೆಯನ್ನು ಗುರುತಿಸಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನನ್ನನ್ನು ನಾಮಕರಣ ಮಾಡಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕೆಂಪೇಗೌಡರ ನಾಡು ಪುನರ್ ನಿರ್ಮಿಸಲು ನಾವೆಲ್ಲರೂ ಶಕ್ತಿಮೀರಿ ಶ್ರಮಿಸುತ್ತೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪಕ್ಷಾತೀತವಾಗಿ ಜನಪ್ರತಿನಿಧಿಗಳನ್ನು ಬಳಸಿಕೊಳ್ಳುತ್ತೇವೆ. ಸರ್ವ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ನಾಡು ಕಟ್ಟಿದ್ದ ಕೆಂಪೇಗೌಡರ ಆದರ್ಶಗಳನ್ನು ಅನುಷ್ಠಾನಗೊಳಿಸಿ, ಸ್ಮಾರಕಗಳ ಸಮಗ್ರ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದೇವೆ. ಸಮಸ್ಯೆಗಳ ನಡುವೆಯೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರವಾಸಿ ತಾಣ ಮಾಡುವ ಯೋಜನೆಗೆ ಸರ್ಕಾರ ಮತ್ತು ಸಚಿವ ಸಿ.ಪಿ. ಯೋಗೇಶ್ವರ್‌ ಬೆಂಬಲವಿದೆ’ ಎಂದರು.

ADVERTISEMENT

ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಎಂ. ಧನಂಜಯ ಮಾತನಾಡಿ, ‘ಬಿಜೆಪಿ ಅಂದರೆ ಅಭಿವೃದ್ಧಿ. ಕಾಂಗ್ರೆಸ್‌ ಸರ್ಕಾರ ಬಾಯಿ ಮಾತಿಗೆ ಸೀಮಿತವಾಗಿತ್ತು. ಬಿಬಿಎಂಪಿಯಿಂದ ₹ 500 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸುತ್ತೇವೆ. ಶ್ರೀರಂಗ ಏತ ನೀರಾವರಿ ಯೋಜನೆಯನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು’ ಎಂದರು.

ತಾಲ್ಲೂಕು ಬಿಜೆಪಿ ಕಾರ್ಯದರ್ಶಿ ಹಳ್ಳೇನಹಳ್ಳಿ ಮಂಜುನಾಥ್, ಮುಖಂಡರಾದ ಗೋಪಾಲಕೃಷ್ಣ, ದೊಡ್ಡಿಗೋಪಿ, ಹರ್ಷ, ಗಾಂಧಿ, ಶಶಿಧರ್ ಇದ್ದರು. ಎಚ್.ಎಂ. ಕೃಷ್ಣಮೂರ್ತಿ ಅವರನ್ನು ಬಿಜೆಪಿ ಮುಖಂಡರು ಸನ್ಮಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.