ADVERTISEMENT

ಆರ್‌ಸಿಪಿಇ ಒಪ್ಪಂದ ವಿರೋಧಿಸಿ ರಾಮನಗರದಲ್ಲಿ ರೈತರ ಪ್ರತಿಭಟನೆ

ಕೇಂದ್ರ ಸರ್ಕಾರ ಸಹಿ ಹಾಕದಂತೆ ರೈತ ಸಂಘದ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 10:09 IST
Last Updated 1 ನವೆಂಬರ್ 2019, 10:09 IST

ರಾಮನಗರ: ರೈತರಿಗೆ ಮರಣ ಶಾಸನವಾಗಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ವ್ಯಾಪಾರ ಒಪ್ಪಂದ (ಆರ್‌ಸಿಪಿಇ)ಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಗುರುವಾರ ಪ್ರತಿಭಟನೆ ನಡೆಯಿತು.

‘ಬೃಹತ್‌ ಕೈಗಾರಿಕಾ ಆರ್ಥಿಕತೆ ಹೊಂದಿರುವ ಚೀನಾ, ಜಪಾನ್‌, ದಕ್ಷಿಣಾ ಕೊರಿಯಾ, ಆಸ್ಟ್ರೇಲಿಯಾದಂತಹ 15 ದೇಶಗಳೊಂದಿಗೆ ಆರ್‌ಸಿಇಪಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಆಮದು ಮೇಲೆ ಶೇಕಡಾ 80ರಿಂದ 95 ರಷ್ಟು ಸುಂಕ ತೆಗೆದು ಹಾಕುವ ನಿಬಂಧನೆ ಒಳಗೊಂಡಿದೆ. ಇದರಿಂಗಾಗಿ ದೇಶದ ಕೃಷಿ ಮತ್ತು ಹೈನು ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮಣಸ್ವಾಮಿ ಆರೋಪಿಸಿದರು.

ಕೇಂದ್ರ ಸರ್ಕಾರ ಆಗ್ನೇಯ ರಾಷ್ಟ್ರಗಳ ಒಕ್ಕೂಟ ಸದಸ್ಯ ರಾಷ್ಟ್ರಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸುಂಕ ರಹಿತವಾಗಿ ಒಪ್ಪಂದದ ಅನ್ವಯ ಕಡಿಮೆ ದರದಲ್ಲಿ ಆಮದು ಮಾಡಿಕೊಳ್ಳುವುದರಿಂದ ಹೈನುಗಾರಿಕೆ ಉದ್ಯಮ ನಾಶವಾಗಲಿದೆ. ಆದ್ದರಿಂದ ಹಾಲು ಆಮದು ನೀತಿಯನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಈ ಮುಕ್ತ ವ್ಯಾಪಾರ ಒಪ್ಪಂದ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯಗೊಳಿಸುತ್ತದೆ. ಒಪ್ಪಂದದ ಬಗ್ಗೆ ಕೇಂದ್ರ ಸರ್ಕಾರ ಸಮಗ್ರ ಅಧ್ಯಯನ ನಡೆಸದೇ ಸಹಿ ಹಾಕಲು ಮುಂದಾಗಿರುವುದು ದೇಶಕ್ಕೆ ಮಾರಕವಾಗಲಿದೆ. ದೇಶದಲ್ಲಿ ಪ್ರಕೃತಿ ಕುಪಿತಗೊಂಡು ಜನರ ಬದುಕು ಮುಳುಗುತ್ತಿದೆ. ಕೆಲ ಕಡೆ ಮಳೆ ಇಲ್ಲದೆ ಬೆಳೆ ಒಣಗುತ್ತಿದೆ. ದೇಶದ ಆರ್ಥಿಕತೆ, ಉದ್ಯೋಗಗಳು ಕುಸಿಯುತ್ತಿವೆ. ಹೀಗೆ ಕುಸಿಯುತ್ತಿರುವ ಭಾರತದ ಮೇಲೆ ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಜತೆಗೂಡಿ ಕುಸಿತವನ್ನು ಪಾತಾಳ ಕಾಣುವಂತೆ ಮಾಡುತ್ತಿದೆ ಎಂದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಬೈರೇಗೌಡ ಮಾತನಾಡಿ, ಈ ಒಪ್ಪಂದದಿಂದ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತದೆ. ರೈತರ ಆತ್ಮಹತ್ಯೆ ಹೆಚ್ಚಾಗುತ್ತದೆ. ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾದ ಹಾಲು ಬಂದು ದೇಶ ಸೇರಲಿದ್ದು, ಇಲ್ಲಿನ ಹೈನುಗಾರಿಕೆ ನೆಲ ಕಚ್ಚಲಿದೆ. ರೈತರು ಹೊರತಾಗಿ ಹಾಲು ಉತ್ಪಾದಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಇಂದು ಮಹಿಳೆಯರೇ ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಈ ಒಪ್ಪಂದದಿಂದ ರೈತ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಗೆ ಪೆಟ್ಟು ಬೀಳಲಿದೆ. ಇದರಿಂದಾಗಿ ಸೂಪರ್‌ ಮಾರ್ಕೆಟ್‌ಗಳು ಮತ್ತು ದೊಡ್ಡ ಕಂಪನಿಗಳು ಸ್ಥಳೀಯ ಮಾರುಕಟ್ಟೆಗಳನ್ನು ನಾಶ ಮಾಡಲಿವೆ. ಸಂಸತ್‌ನಲ್ಲಿ ಯಾವುದೇ ಚರ್ಚೆ ಮಾಡದೆ ಕೇಂದ್ರ ಸರ್ಕಾರ ಆರ್‌ಸಿಇಪಿಗೆ ಸಹಿ ಹಾಕಲು ಮುಂದಾಗಿರುವುದು ಸರಿಯಲ್ಲ. ನ. 4ರಂದು ಥಾಯ್ಲೆಂಡ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿದ್ದು, ಇದೊಂದು ತರಾತುರಿಯ ನಿರ್ಧಾರ. ಈ ಒಪ್ಪಂದಕ್ಕೆ ದೇಶದ ವಾತಾವರಣ ಪೂರಕವಾಗಿಲ್ಲ ಎಂದರು.
ರೈತರು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಾದ ಸಿ. ಚಲುವಯ್ಯ, ರಾಜೇಗೌಡ, ಶ್ರೀನಿವಾಸ್, ನಾಗಮ್ಮ, ರಮೇಶ್, ಅನಂತರಾಮ್ ಪ್ರಸಾದ್, ಗೋವಿಂದರಾಜು, ಕೃಷ್ಣಪ್ಪ, ಸೀಬೆಕಟ್ಟೆ ಕೃಷ್ಣಪ್ಪ, ನಿಂಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.