ಚನ್ನಪಟ್ಟಣ: ಪ್ರಸ್ತತ ಬಮೂಲ್‌ಗೆ ₹67ಕೋಟಿ ನಷ್ಟವಾಗುತ್ತಿದೆ. ಈ ನಷ್ಟ ಕಡಿಮೆ ಮಾಡುವ ಉದ್ದೇಶದಿಂದ ಹಾಲಿನ ದರ ಲೀಟರ್‌ಗೆ ₹2 ಕಡಿತ ಮಾಡಲಾಗಿದೆ ಎಂದು ಬಮೂಲ್ ವ್ಯವಸ್ಥಾಪಕ ಡಾ.ಶ್ರೀಧರ್ ತಿಳಿಸಿದರು.
ತಾಲ್ಲೂಕಿನ ಬೈರಾಪಟ್ಟಣದ ಬಳಿ ಇರುವ ಬಮೂಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ಬುಧವಾರ ರೈತರೊಂದಿಗೆ ಸಂವಾದದಲ್ಲಿ ಕುಂದು-ಕೊರತೆ ಆಲಿಸಿ ಮಾತನಾಡಿದರು. ಬೆಂಗಳೂರು ಹಾಲು ಒಕ್ಕೂಟಕ್ಕೆ ಲಾಭವಾದಾಗ ರೈತರಿಂದ ಪಡೆಯುವ ಹಾಲಿನ ದರ ಹೆಚ್ಚಿಸಲಾಗುತ್ತದೆ. ಹಾಗೆಯೇ ನಷ್ಟವಾದಾಗ ಹಾಲಿನ ದರ ಕಡಿತಗೊಳಿಸಲಾಗುತ್ತದೆ. ಸದ್ಯದ ಆರ್ಥಿಕ ಪರಿಸ್ಥಿತಿ ಅವಲೋಕಿಸಿ ಹಾಲಿನ ದರ ಕಡಿತ ಮಾಡಲಾಗಿದೆ ಎಂದು ತಿಳಿಸಿದರು.
ಒಕ್ಕೂಟಕ್ಕೆ ಬರುವ ಲಾಭದ ಹಣವನ್ನು ರೈತರ ಅಭ್ಯುದಯಕ್ಕೆ ವಿನಿಯೋಗಿಸಲಾಗುವುದು. ರಾಸುಗಳಿಗೆ ವಿಮೆ, ಬಮೂಲ್ ಕಲ್ಯಾಣ ಟ್ರಸ್ಟ್ ಮೂಲಕ ಸೌಲಭ್ಯ, ರಿಯಾಯಿತಿ ದರದಲ್ಲಿ ಚಾಪ್ ಕಟ್ಟರ್ ಸೇರಿದಂತೆ ಇನ್ನಿತರ ಸಲಕರಣೆಗಳ ವಿತರಣೆ, ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವು ಕಾರ್ಯಕ್ರಮ ಮೂಲಕ ಲಾಭದ ಹಣವನ್ನು ರೈತರ ಶ್ರೇಯೋಭಿವೃದ್ಧಿಗೆ ವಿನಿಯೋಗಿಸಲಾಗುವುದು. ಒಕ್ಕೂಟ ಎಂದಿಗೂ ರೈತರ ಪರವಾಗಿಯೇ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಪ್ರಸ್ತುತ ಸನ್ನಿವೇಶದಲ್ಲಿ ಹಸು ಸಾಕಿ, ಹೈನೋದ್ಯಮ ನಡೆಸುವುದು ಎಷ್ಟು ಕಷ್ಟ ಎಂಬುದು ಅಧಿಕಾರಿಗಳಿಗೆ ಅರಿವಿಲ್ಲ. ಹಾಲಿನ ದರ ಕಡಿತದಿಂದ ಮೊದಲೇ ಬಡತನದಲ್ಲಿ ಕಷ್ಟಪಡುತ್ತಿರುವ ರೈತರ ಸಂಕಷ್ಟ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಬಮೂಲ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರನ್ನು ಇಲ್ಲಿಗೆ ಕರೆಸಿ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.
ಸಭೆಯಲ್ಲಿ ಬಮೂಲ್ ಉಪವ್ಯವಸ್ಥಾಪಕ ಹೇಮಂತ್, ವಿಸ್ತೀರ್ಣಾಧಿಕಾರಿ ಹೊನ್ನಪ್ಪ ಪೂಜಾರ್, ಕೃಷಿ ಅಧಿಕಾರಿ ಜಿತೇಂದ್ರ, ರೈತ ಮುಖಂಡ ಸಿ.ಪುಟ್ಟಸ್ವಾಮಿ, ರೈತ ಸಂಘದ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.