ಚನ್ನಪಟ್ಟಣ: ಸಂವಿಧಾನದ ಆಶಯ ಮರೆಯುತ್ತಿರುವ ಕಾರಣದಿಂದ ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ಚಟುವಟಿಕೆ ಹೆಚ್ಚಾಗುತ್ತಿದೆ ಎಂದು ಬೇವೂರು ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಆರ್.ಪಿ.ಮಂಜುನಾಥ್ ವಿಷಾದಿಸಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ವಿವಿಧತೆಯಲ್ಲಿ ಏಕತೆ ಹೊಂದಿ ಪ್ರಗತಿ ಸಾಧಿಸುತ್ತಾ ಇಡೀ ವಿಶ್ವವೇ ಭಾರತ ದೇಶದತ್ತ ನೋಡುತ್ತಿರುವುದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಶ್ರೇಷ್ಠ ಮತ್ತು ಸುಭದ್ರ ಸಂವಿಧಾನ ಕಾರಣ. ವಿದ್ಯಾರ್ಥಿಗಳು ಮತ್ತು ಯುವ ಸಮೂಹ ಜಾಗೃತರಾಗಿ ಸಂವಿಧಾನದ ಆಶಯ ಈಡೇರಿಕೆ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರೂ ಆದ ತಹಶೀಲ್ದಾರ್ ಎ.ಎಚ್.ಮಹೇಂದ್ರ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವದ ಸಂದೇಶ ನೀಡಿದರು.
ನಗರಸಭೆ ಉಪಾಧ್ಯಕ್ಷೆ ನಿಗಾರ್ ಬೇಗಂ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ನಾಗೇಶ್, ತಾ.ಪಂ ಇಒ ಶಿವಕುಮಾರ್, ಡಿವೈಎಸ್ಪಿ ಕೆ.ಸಿ.ಗಿರಿ, ಪುರ ಸರ್ಕಲ್ ಇನ್ ಸ್ಪೆಕ್ಟರ್ ಶೋಭಾ, ನಗರಸಭೆ ಪೌರಾಯುಕ್ತ ಪುಟ್ಟಸ್ವಾಮಿ, ಬಿ.ಇ.ಒ ಮರೀಗೌಡ, ಸಮಾಜ ಕಲ್ಯಾಣ ಅಧಿಕಾರಿ ಸರೋಜಮ್ಮ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಚನ್ನೇಗೌಡ, ನಗರಸಭೆ ಸದಸ್ಯರಾದ ವಾಸಿಲ್ ಆಲಿಖಾನ್, ಮತೀನ್ ಇತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಆರ್.ಮಂಜುನಾಥ್ (ಪತ್ರಕರ್ತ), ಮುಕುಂದ, ಕೋಟೆ ಸಿದ್ದರಾಮಯ್ಯ (ಸಮಾಜಸೇವೆ), ಸತೀಶ್ (ಕ್ರೀಡಾ ಶಿಕ್ಷಕ), ರಶ್ಮಿ (ಆಶಾ ಕಾರ್ಯಕರ್ತೆ), ನಿರ್ಮಲ (ಬಿಸಿಯೂಟ ಕಾರ್ಯಕರ್ತೆ), ರಾಮಕೃಷ್ಣ (ಪೊಲೀಸ್ ಇಲಾಖೆ), ಅಭಿಷೇಕ್ (ಕ್ರೀಡಾಪಟು), ಶಂಕರಮ್ಮ (ಪೌರ ಕಾರ್ಮಿಕರು), ಡಿ. ಮೇಘನಾ (ಕಲಾವಿದೆ) ಸುಕನ್ಯ, ಸೌಭಾಗ್ಯ, ಮರಿಸ್ವಾಮಿ (ಪರಿಸರ) ಅವರನ್ನು ಸನ್ಮಾನಿಸಲಾಯಿತು.
ವಿವಿಧ ಶಾಲೆಯ ಮಕ್ಕಳು ಆಕರ್ಷಕ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.