ಬಿಡದಿ: ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ -275ರ ಶೇಷಗಿರಿಹಳ್ಳಿ - ಐನೋರಪಾಳ್ಯದ ನಡುವೆ ಅಂಡರ್ ಪಾಸ್ (ಕೆಳರಸ್ತೆ) ನಿರ್ಮಿಸುವಂತೆ ಒತ್ತಾಯಿಸಿ ಸುತ್ತಮುತ್ತಲ ಗ್ರಾಮಸ್ಥರು ಶನಿವಾರ ಹೆದ್ದಾರಿ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು.
ಶೇಷಗಿರಿಹಳ್ಳಿ, ಮಂಚನಾಯ್ಕನಹಳ್ಳಿ, ಐನೋರಪಾಳ್ಯ, ದ್ಯಾವಲಿಂಗಯ್ಯನಪಾಳ್ಯ, ಮುತ್ತರಾಯನಗುಡಿಪಾಳ್ಯ, ಶೇಷಗಿರಿಹಳ್ಳಿ ಕಾಲೊನಿ ಹಾಗೂ ಗಿರಿಯಪ್ಪನದೊಡ್ಡಿ ಗ್ರಾಮಸ್ಥರು ಕಾಮಗಾರಿಗೆ ಅಡ್ಡಿಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಎರಡು ಕಡೆ ಬ್ಯಾರಿಕೆಡ್ ನಿರ್ಮಾಣ ಮಾಡುತ್ತಿದ್ದು, ರಸ್ತೆ ಒಂದು ಕಡೆಯಿಂದ ಇನ್ನೊಂದು ಕಡೆ ಸಂಚಾರ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ರಸ್ತೆ ದಾಟಬೇಕಾದರೆ ವಂಡರ್ ಲಾ ಮತ್ತು ಹೆಜ್ಜಾಲದಿಂದ ಬರಬೇಕಾಗಿದೆ. ಇವೆರಡರ ಮಧ್ಯೆ ಮೂರು ಕಿ.ಮೀ ಅಂತರವಿದೆ. ಶೇಷಗಿರಿಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಮಾಧ್ಯಮಿಕ ಮತ್ತು ಪ್ರೌಢಶಾಲೆ ಇದ್ದು, 500 ಬಡಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಈ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿ ಪಕ್ಕದಲ್ಲೇ ಮುತ್ತರಾಯಸ್ವಾಮಿ ಪುರಾಣ ಪ್ರಸಿದ್ಧ ದೇವಸ್ಥಾನವಿದೆ. ಈ ದೇಗುಲಕ್ಕೆ ರಾಜ್ಯದ ಹಲವು ಕಡೆಗಳಿಂದ ಭಕ್ತರು ಪ್ರತಿದಿನ ಬಂದು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಭಕ್ತರು ದೇವಸ್ಥಾನಕ್ಕೆ ಬರಲು ದೂರ ಕ್ರಮಿಸಬೇಕಾಗುತ್ತದೆ ಎಂದರು.
ಇಲ್ಲಿನ ದಲೈಲಾಮಾ ಅವರ ಅಂತರರಾಷ್ಟ್ರೀಯ ವಿಶ್ವವಿದ್ಯಾಲದ ವಿದ್ಯಾರ್ಥಿಗಳಿಗೂ ತೊಂದರೆ ಆಗಲಿದೆ. ಅಲ್ಲದೆ ಹೆಜ್ಜಾಲದ ರೈಲ್ವೆ ನಿಲ್ದಾಣಕ್ಕೂ ಹೋಗಲು ಎರಡು ಕಿ.ಮೀ ದೂರ ಸಂಚಾರ ಮಾಡಬೇಕಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ನರಸಿಂಹಯ್ಯ, ಕೆಪಿಸಿಸಿ ಸದಸ್ಯ ಚಿಕ್ಕಬ್ಯಾಟಪ್ಪ, ಪಿಎಲ್ ಡಿ ಬ್ಯಾಂಕ್ ನರಸಿಂಹಯ್ಯ, ಗ್ರಾ.ಪಂ. ಮಾಜಿ ಸದಸ್ಯ ವೆಂಕಟಪ್ಪ, ಸುನಂದಾ ವೆಂಕಟೇಶ್ , ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸತೀಶ್, ವಕೀಲ ನೀಲಕಂಠ, ಮುಖಂಡ ಶೇಷಪ್ಪ, ರಂಗಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.