ರಾಮನಗರ: ಒಕ್ಕಲಿಗರಿಗೆ ಮೀಸಲಾತಿ ಬೇಕು ಎನ್ನುವುದು ಸಮುದಾಯದ ಜನರ ಬೇಡಿಕೆಯಾಗಿದ್ದು, ಇದರ ಹಿಂದೆ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುವ ಕುರಿತು ರಾಮನಗರದಲ್ಲಿ ಶನಿವಾರ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದರು. ಒಕ್ಕಲಿಗ ಸಮುದಾಯಕ್ಕೆ ಹಲವು ಸಮಸ್ಯೆಗಳಿವೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಂದಿ ಜಮೀನು ಕಳೆದುಕೊಂಡಿದ್ದಾರೆ. ಈ ಎಲ್ಲದನ್ನೂ ಗಮನಿಸಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ. ನಿರ್ಮಲಾನಂದ ಶ್ರೀಗಳು ಸಹ ಕಳೆದ ಒಂದೂವರೆ ವರ್ಷದಿಂದ ಈ ಬಗ್ಗೆ ಹೋರಾಟ ಮಾಡುತ್ತಿದ್ದಾರೆ ಎಂದರು.
ಮೀಸಲಾತಿ ಹೋರಾಟಕ್ಕೆ ಕೇಂದ್ರ ಸಚಿವ ನಾರಾಯಣಸ್ವಾಮಿ ವಿರೋಧ ಬಗ್ಗೆ ಪ್ರತಿಕ್ರಿಯೆ ನೀಡಿ , ಅದು ಅವರ ವೈಯಕ್ತಿಕ ಅಭಿಪ್ರಾಯ. ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಅವಕಾಶ ಇದ್ದು, ಮುಕ್ತ ಚರ್ಚೆಗಳ ಮೂಲಕವೇ ನಿರ್ಧಾರ ಆಗಲಿ ಎಂದರು.
ಹೋರಾಟದ ಕುರಿತು ಬಸವರಾಜ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಪಾಡಿಗೆ ಅವರು ಹೇಳಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ನಾವು ಯಾರನ್ನೂ ನಿಯಂತ್ರಣ ಮಾಡಲು ಆಗದು ಎಂದರು.
ಪಂಚರತ್ನ ಯಾತ್ರೆ ಹಾಗೂ ರಾಹುಲ್ ಗಾಂಧಿ ಯಾತ್ರೆ ತಡೆಯಲು ಬಿಜೆಪಿ ಕೋವಿಡ್ ನೆಪ ಹೇಳುತ್ತಿದೆ ಎಂಬ ಆರೋಪಗಳ ಬಗ್ಗೆ ಮಾತನಾಡಿ, ನಾವು ಸದ್ಯ ಯಾರನ್ನೂ ತಡೆದಿಲ್ಲ. ಯಾರು ಏನೇ ಮಾಡಿದರೂ ಜನರ ಪರವಾಗಿ ಮಾಡಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಸರ್ಕಾರ ಮಾರ್ಗಸೂಚಿ ಪ್ರಕಟಿಸಲಿದೆ ಎಂದರು.
ಅವಧಿಗೆ ಮುನ್ನ ಚುನಾವಣೆ ಬಗ್ಗೆ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ , ಚುನಾವಣೆ ನಿಗದಿ ಮಾಡುವುದು ಚುನಾವಣಾ ಆಯೋಗ. ಶಿವಕುಮಾರ್ ಹಿರಿಯ ರಾಜಕಾರಣಿ. ಅವರದ್ದು ಏನೇ ಅಹವಾಲು ಇದ್ದರೂ ಚುನಾವಣಾ ಆಯೋಗಕ್ಕೆ ದೂರು ನೀಡಲಿ. ಆದರೆ ಅವರೇ ಎಲೆಕ್ಷನ್ ಕಮಿಷನ್ ಆದರೆ ಕಷ್ಟ ಎಂದು ಟಾಂಗ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.