ರಾಮನಗರ: ಪೌರ ಕಾರ್ಮಿಕರನ್ನು ಇನ್ನು ಮುಂದೆ ಅವರಿಗೆ ನಿಗದಿಪಡಿಸಿದ ಕೆಲಸ ಬಿಟ್ಟು ‘ಅನ್ಯ ಕಾರ್ಯ’ಗಳಿಗೆ ನಿಯೋಜಿಸುವಂತಿಲ್ಲ. ಒಂದು ವೇಳೆ ನಿಯೋಜಿಸಿದರೆ ಅಂತಹ ಅಧಿಕಾರಿಗಳು ಕಠಿಣ ಕ್ರಮಕ್ಕೆ ಸಿಲುಕಲಿದ್ದಾರೆ.
ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಕಾರ್ಮಿಕರನ್ನು ಬೇರೆ ಕೆಲಸಗಳಿಗೆ ಬಳಸಿಕೊಂಡು ಶೋಷಿಸಲಾಗುತ್ತಿದೆ ಎಂಬ ದೂರು ವ್ಯಾಪಕವಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೌರಾಡಳಿತ ನಿರ್ದೇಶನಾಲಯವು ಈ ಸಂಬಂಧ ಜ.19ರಂದು ಸುತ್ತೋಲೆ ಹೊರಡಿಸಿದ್ದು, ಆದೇಶ ಮೀರಿದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ.
ಕಸ ಗುಡಿಸುವುದು, ತ್ಯಾಜ್ಯ ಸಂಗ್ರಹ, ವಿಲೇವಾರಿ, ಸಾರ್ವಜನಿಕ ಶೌಚಾಲಯ ಸ್ವಚ್ಛತೆ ಮೂಲಕ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು ಪೌರ ಕಾರ್ಮಿಕರ ಕೆಲಸ. ಈ ಎಲ್ಲಾ ಕೆಲಸಗಳ ಜೊತೆಗೆ ಹೆಚ್ಚುವರಿಯಾಗಿ ಬೇರೆ ಕೆಲಸಗಳಿಗೂ ತಮ್ಮನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಪೌರ ಕಾರ್ಮಿಕರು ಆರೋಪಿಸಿದ್ದರು.
‘ಮೇಲಧಿಕಾರಿಗಳ ಮನೆ ಚಾಕರಿ, ಬೇರೆ ಇಲಾಖೆಗಳ ಕಚೇರಿ, ಶೌಚಾಲಯ ಸ್ವಚ್ಛತೆ ಸೇರಿದಂತೆ ಇತರ ಕೆಲಸಗಳಿಗೆ ಪೌರ ಕಾರ್ಮಿಕರನ್ನು ಜೀತದಾಳುಗಳಂತೆ ಬಳಸಿಕೊಳ್ಳುವುದು ಹಲವೆಡೆ ನಡೆಯುತ್ತಿದೆ. ಈ ಕುರಿತು ಸಂಘಕ್ಕೆ ದೂರು ಬರುತ್ತಲೇ ಇವೆ’ ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಾಯಂ ಕಾರ್ಮಿಕರನ್ನು ಈ ರೀತಿ ಬಳಸಿಕೊಳ್ಳುವುದು ಕಡಿಮೆ. ಆದರೆ, ನೇರಪಾವತಿ ಮತ್ತು ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರು ಇಂತಹ ಶೋಷಣೆಗೆ ಒಳಗಾಗುತ್ತಿದ್ದಾರೆ. ಪ್ರಶ್ನಿಸಿದರೆ ಕೆಲಸಕ್ಕೆ ಕುತ್ತು ಬರುತ್ತದೆಂಬ ಭಯದಿಂದ ಮರು ಮಾತನಾಡದೆ ಅವರು ಎಲ್ಲವನ್ನೂ ಸಹಿಸಿಕೊಂಡು ಬರುತ್ತಿದ್ದಾರೆ’ ಎಂದರು.
‘ಕಾರ್ಮಿಕರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ಸಂಘ ದನಿ ಎತ್ತುತ್ತಲೇ ಬಂದಿದೆ. ಹಲವು ಸಭೆ, ಸಮಾರಂಭಗಳಲ್ಲಿ ಪೌರಾಡಳಿತ ಸಚಿವ, ನಿರ್ದೇಶಕ ಹಾಗೂ ನಗರಾಭಿವೃದ್ಧಿ ಕಾರ್ಯದರ್ಶಿ ಗಮನಕ್ಕೂ ಸಮಸ್ಯೆ ತಂದಿದ್ದೇವೆ. ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದೇವೆ. ಆದರೂ ತೆರೆಮರೆಯಲ್ಲಿ ಕಾರ್ಮಿಕರ ಮೇಲೆ ಶೋಷಣೆ ನಡೆಯುತ್ತಲೇ ಇತ್ತು’ ಎಂದು ಅವರು ಹೇಳಿದರು.
ಪೌರ ಕಾರ್ಮಿಕರನ್ನು ಬೇರೆ ಕೆಲಸಕ್ಕೆ ನಿಯೋಜಿಸುತ್ತಿರುವ ಬಗ್ಗೆ ಸಂಘ– ಸಂಘಟನೆಗಳು ದೂರುತ್ತಲೇ ಇದ್ದವು. ಹಾಗಾಗಿ ಸುತ್ತೋಲೆ ಹೊರಡಿಸಲಾಗಿದೆ. ನಿಯಮ ಮೀರಿ ನಿಯೋಜಿಸಿದಾಗ ಕಾರ್ಮಿಕರು ದೂರು ಕೊಡಬೇಕು.–ಪ್ರಭುಲಿಂಗ ಕವಳಿಕಟ್ಟಿ, ನಿರ್ದೇಶಕ ಪೌರಾಡಳಿತ ನಿರ್ದೇಶನಾಲಯ
ಪೌರ ಕಾರ್ಮಿಕರನ್ನು ಅನ್ಯ ಕಾರ್ಯಕ್ಕೆ ಬಳಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೌರಾಡಳಿತ ನಿರ್ದೇಶನಾಲಯ ಹೊರಡಿಸಿರುವ ಸುತ್ತೋಲೆ ಕಾರ್ಮಿಕರ ಶೋಷಣೆಗೆ ಮುಕ್ತಿ ನೀಡಲಿದೆ ಎಂಬ ಆಶಾಭಾವನೆ ಮೂಡಿಸಿದೆ. ಇದು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು.–ಆರ್. ನಾಗರಾಜು, ಉಪಾಧ್ಯಕ್ಷ ರಾಜ್ಯ ಪೌರ ನೌಕರರ ಸಂಘ
ದೂರು ಬಂದರೆ ಕ್ರಮ
ಪೌರ ಕಾರ್ಮಿಕರಿಗೆ ನಿಗದಿಪಡಿಸಿದ ಕರ್ತವ್ಯ ಹೊರತುಪಡಿಸಿ ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳುವುದು ನಿಯಮಬಾಹಿರ. ನಿಯಮ ಮೀರಿ ಸ್ಥಳೀಯ ಸ್ಥಂಸ್ಥೆಗಳ ಅಧಿಕಾರಿಗಳು ಪೌರ ಕಾರ್ಮಿಕರನ್ನು ಬೇರೆ ಕೆಲಸ ಮಾಡಲು ನಿಯೋಜನೆ ಮಾಡಿದ ಕುರಿತು ದೂರು ಬಂದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. ದೂರು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿ ಸಿಬ್ಬಂದಿ ಹಾಗೂ ಕೆಲಸ ಮಾಡಿಸಿಕೊಂಡವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆ ಹೊರಡಿಸಲಾಗಿದೆ. ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ಸುತ್ತೋಲೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.