ಚನ್ನಪಟ್ಟಣ (ರಾಮನಗರ): ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಸರ್ಕಾರದ ನೀರಾವರಿ ಯೋಜನೆಗೆ ನೀಲನಕ್ಷೆ ರೂಪಿಸಿ, ಅದರ ಸಾಕಾರಕ್ಕೆ ತೆರೆಮರೆಯಲ್ಲಿ ಶ್ರಮಿಸಿದ್ದ ನಿವೃತ್ತ ಎಂಜಿನಿಯರ್ ತಾಲ್ಲೂಕಿನ ಅಗ್ರಹಾರ ವಳಗೆರಹಳ್ಳಿಯ ವೆಂಕಟೇಗೌಡ (63) ಅವರು ಕಜಕಿಸ್ತಾನದಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
ಕುಟುಂಬದೊಂದಿಗೆ ಕಜಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದ ಅವರು, ಪ್ರವಾಸ ಮುಗಿಸಿ ಹಿಂದಿರುವಾಗ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಸೇವೆ ಆರಂಭಿಸಿದ ವೆಂಕಟೇಗೌಡರು, ನಂತರ ಯು.ಕೆ.ಪಿ ನಾಲಾ–1ರ ಮುಖ್ಯ ಎಂಜಿನಿಯರ್ ಆಗಿಯೂ ಸೇವೆ ಸಲ್ಲಿಸಿದ್ದರು. ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಅಧೀಕ್ಷಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಕಾವೇರಿ ನೀರಾವರಿ ನಿಗಮದಲ್ಲಿದ್ದಾಗ ಬರಗಾಲ ಪೀಡಿತ ಚನ್ನಪಟ್ಟಣ ತಾಲ್ಲೂಕಿನ ಜೊತೆಗೆ ಜಿಲ್ಲೆಯ ನೀರಾವರಿ ಕನಸಿನ ವೈ.ಜಿ. ಗುಡ್ಡ, ಮಂಚನಬೆಲೆ, ಕಣ್ವ ಯೋಜನೆಗೆ ನೀಲನಕ್ಷೆ ರೂಪಿಸುವ ಜೊತೆಗೆ, ಸತ್ತೆಗಾಲದಿಂದ ರಾಮನಗರ ಜಿಲ್ಲೆಗೆ ನೀರು ತರುವ ಯೋಜನೆಗೂ ಶ್ರಮಿಸಿದರು. ಒಬ್ಬ ಸರ್ಕಾರಿ ಅಧಿಕಾರಿಯಾಗಿ ರೈತರ ಬದುಕು ಹಸನು ಮಾಡುವ ಯೋಜನೆಗಳಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ನಿವೃತ್ತಿ ನಂತರವೂ ನೀರಾವರಿ ಯೋಜನೆಗಳಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.
ಅಂತ್ಯಕ್ರಿಯೆ ನ. 24ರಂದು ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.