ಮಾಗಡಿ: ರಾಜ್ಯದಲ್ಲಿ ಭ್ರೂಣ ಹತ್ಯೆ ಸುಳಿವು ನೀಡಿದವರಿಗೆ ₹1 ಲಕ್ಷ ನಗದು ಬಹುಮಾನ ನೀಡಲಾಗುತ್ತಿದೆ. ಅವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಯೋಜನಾ ನಿರ್ದೇಶಕ ಡಾ.ಜಿ.ಎನ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ಬುಧವಾರ ಜಿಲ್ಲಾ ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದಡಿ(ಎನ್‌ಒಎಚ್‌ಪಿ) ಆಯೋಜಿಸಿದ್ದ ಉಚಿತ ದಂತಪಂಕ್ತಿ ಜೋಡಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಹೆಣ್ಣು ಭ್ರೂಣಹತ್ಯೆ ಮಾಡುತ್ತಿರುವವರು ವೈದ್ಯರಲ್ಲ. ಅರೆವೈದ್ಯಕೀಯ ಮಾಡಿರುವ ನಕಲಿ ವೈದ್ಯರು. ಮಾಗಡಿಯಲ್ಲೂ ಎರಡು ಹೆಣ್ಣುಭ್ರೂಣ ಹತ್ಯೆ ಪ್ರಕರಣ ಬೆಳೆಕಿಗೆ ಬಂದಿವೆ. ಹೆಣ್ಣುಮಕ್ಕಳ ಸಂತಾನ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಹೆಣ್ಣುಭ್ರೂಣ ಹತ್ಯೆ ವೈದ್ಯಕೀಯ ಲೋಕ ತಲೆತಗ್ಗಿಸುವಂತೆ ಮಾಡಿದೆ ಎಂದು ಬೇಸರಿಸಿದರು.
‘ರಾಜ್ಯದ ಎಲ್ಲಾ ವೈದ್ಯರು ಭ್ರೂಣ ಹತ್ಯೆ ತಡಗಟ್ಟಲು ಪಣತೊಟ್ಟಿದ್ದೇವೆ. ಖಾಸಗಿ ವೈದ್ಯರು ಹಣ ಮಾಡುವ ಹಪಾಹಪಿತನದಿಂದ ಮತ್ತು ಖಾಸಗಿ ಡಯಾಗ್ನಸ್ಟಿಕ್ ಕೇಂದ್ರಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ. ಭ್ರೂಣ ಹತ್ಯೆ ಮಾಡುವುದು ಮಹಾಪಾಪದ ಕೆಲಸ ಎಂಬುದನ್ನು ಮನುಷ್ಯರಾದವವರು ಮನವರಿಕೆ ಮಾಡಿಕೊಳ್ಳಬೇಕು. ಹೆಣ್ಣು ಭ್ರೂಣ ಹತ್ಯೆಯಲ್ಲಿ ತೊಡಗಿದವರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.
52 ಮಂದಿಗೆ ದಂತಪಕ್ತಿ ಜೋಡಣೆ: ಎನ್‌ಒಎಚ್‌ಪಿ ನೋಡೆಲ್ ಅಧಿಕಾರಿ, ವೈದ್ಯಾಧಿಕಾರಿ ಡಾ.ಮಂಜುಳಾ ನೇತೃತ್ವದಲ್ಲಿ ಉಚಿತ ದಂತಪಂಕ್ತಿ ಜೋಡಣೆ ಶಿಬಿರ ನಡೆಯಿತು. ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಎಲ್. ಪ್ರಭಾಕರ್ ಕಾರ್ಯಕ್ರಮ ಉದ್ಘಾಟಿಸಿದರು. 52 ಜನರಿಗೆ ಉಚಿತ ದಂತಪಂಕ್ತಿ ಜೋಡೆಣೆ ಮಾಡಲಾಯಿತು.
ದಂತ ಆರೋಗ್ಯಾಧಿಕಾರಿ ಡಾ. ವಿಶ್ವನಾಥ್‌ಬಣಗಾರ್, ಜಿಲ್ಲಾ ಆಶ್ಪತ್ರೆಯ ಡಾ.ಗಿರಿಶ್, ರಾಜರಾಜೇಶ್ವರಿ ದಂತ ಮಹಾ ವಿದ್ಯಾಲಯದ ಡಾ. ಶ್ವೇತ, ಡಾ.ರವಿಕುಮಾರ್, ರೊಟೇರಿಯನ್‌ಗಳಾದ ಎಚ್.ಶಂಕರ್, ಮೋಹನ್, ಮಂಜುನಾಥ್ ಬೆಟಗೇರಿ, ಆರ್.ನಾಗೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.