ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರಕ್ಕೆ ಉಪ ಚುನಾವಣೆಗೆ ದಿನಾಂಕ ಘೋಷಣೆಯಾದ ನಂತರ ರಾಜಕೀಯ ಚಟುವಟಿಕೆಗಳು ರಾಜಧಾನಿ ಬೆಂಗಳೂರಿಗೆ ಸ್ಥಳಾಂತರವಾಗಿದ್ದು ಚನ್ನಪಟ್ಟಣದಲ್ಲಿ ಉಹಾಪೋಹಗಳ ಕಾರುಬಾರು ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲಕಾರಿ ರಾಜಕೀಯ ಚರ್ಚೆಗಳು ನಡೆಯುತ್ತಿವೆ.
ಉಪ ಚುನಾವಣೆ ದಿನಾಂಕ ಘೋಷಣೆ ಮೊದಲು ಕ್ಷೇತ್ರದಲ್ಲೆ ಸುತ್ತಾಡುತ್ತಿದ್ದ ಮೂರು ಪಕ್ಷಗಳ ನಾಯಕರು ದಿನಾಂಕ ಘೋಷಣೆಯಾದ ನಂತರ ರಾಜಧಾನಿಯಲ್ಲಿ ಬೀಡುಬಿಟ್ಟು ಅಭ್ಯರ್ಥಿ ಆಯ್ಕೆಯ ಕಸರತ್ತು ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಯುತ್ತಿದ್ದರೆ ಚನ್ನಪಟ್ಟಣದಲ್ಲಿ ವದಂತಿಗಳು ಹರಿದಾಡುತ್ತಿವೆ. ವದಂತಿಗಳು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಈ ಮೂರು ಪಕ್ಷಗಳನ್ನೂ ಬಿಟ್ಟಿಲ್ಲ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಚಾರದಲ್ಲಿ ಹೆಚ್ಚು ಉಹಾಪೋಹ ಹಬ್ಬಿದೆ. ಡಿ.ಕೆ.ಸಹೋದರಲ್ಲಿ ಒಬ್ಬರು ಕಣಕ್ಕಿಳಿಯುತ್ತಾರೆ. ಡಿ.ಕೆ. ಸುರೇಶ್ ಅವರನ್ನು ಕಣಕ್ಕಿಳಿಸಲಾಗುತ್ತಿದೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ.ಅವರನ್ನು ಹೊರತುಪಡಿಸಿದರೆ ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಅಧ್ಯಕ್ಷ ರಘುನಂದನ್ ರಾಮಣ್ಣ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಗಂಗಾಧರ್, ಮಾಜಿ ಶಾಸಕ ಎಂ.ಸಿ. ಅಶ್ವಥ್, ಕನಕಪುರದ ದುಂತೂರು ವಿಶ್ವನಾಥ್ ಹೆಸರು ಓಡಾಡುತ್ತಿವೆ.
ಮೈತ್ರಿ ಟಿಕೆಟ್ ಸಿಗದಿದ್ದರೆ ಸಿ.ಪಿ. ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಟಿಕೆಟ್‌ನಿಂದ ಕಣಕ್ಕಿಳಿಯುತ್ತಾರೆ ಎಂಬ ಗಾಳಿಸುದ್ದಿ ಬಲವಾಗಿ ಕೇಳಿ ಬರುತ್ತಿದೆ.
ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರವನ್ನು ತಮ್ಮಲ್ಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸುತ್ತಾರೆ ಎನ್ನುವ ವಾದ ಪ್ರಬಲವಾಗಿದೆ. ಇದರೊಂದಿಗೆ ಅನಿತಾ ಕುಮಾರಸ್ವಾಮಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು, ಉದ್ಯಮಿ ಪಂಚಮಿ ಪ್ರಸನ್ನ ಹೆಸರು ಹರಿದಾಡುತ್ತಿವೆ.
ಮೈತ್ರಿ ಟಿಕೆಟ್ ಆಕಾಂಕ್ಷಿಯಾಗಿರುವ ಸಿ.ಪಿ. ಯೋಗೇಶ್ವರ್ ಟಿಕೆಟ್ ವಂಚಿತವಾದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಇಲ್ಲವಾದರೆ, ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷದಿಂದಲೂ ಕಣಕ್ಕಿಳಿಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.
ಯೋಗೇಶ್ವರ್ ಅವರು ಜೆಡಿಎಸ್‌ಗೆ ಟಿಕೆಟ್ ತ್ಯಾಗ ಮಾಡಿದರೆ ಕೇಂದ್ರದಲ್ಲಿ ಅವರಿಗೆ ಸಚಿವ ಸ್ಥಾನಕ್ಕೆ ಸರಿಸಮಾನವಾದ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಸಿಗುವ ಭರವಸೆ ಸಿಕ್ಕಿದೆಯಂತೆ. ಹಾಗಾಗಿ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರದಿಂದ ಅವರು ಹಿಂದೆ ಸರಿದಿದ್ದಾರಂತೆ ಎನ್ನುವ ಸುದ್ದಿ ಕ್ಷೇತ್ರದಲ್ಲಿ ದಟ್ಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.