ADVERTISEMENT

ಸಂವಿಧಾನ ಬದಲಾವಣೆಗೆ ಹುನ್ನಾರ: ಪರಿಷತ್‌ ಸದಸ್ಯ ಎಸ್‌.ರವಿ

ಹೋರಾಟಗಾರರ ತ್ಯಾಗ– ಬಲಿದಾನ ಸ್ಮರಿಸಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 7:48 IST
Last Updated 27 ಜನವರಿ 2024, 7:48 IST
ಕನಕಪುರ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವದಲ್ಲಿ ವಿವಿಧ ಕ್ರೀಡೆಗಳಲ್ಲಿ ಗೆಲುವು ಸಾಧಿಸಿದ್ದ ಕ್ರೀಡಾಪಟುಗಳನ್ನು ಸತ್ಕರಿಸಲಾಯಿತು
ಕನಕಪುರ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವದಲ್ಲಿ ವಿವಿಧ ಕ್ರೀಡೆಗಳಲ್ಲಿ ಗೆಲುವು ಸಾಧಿಸಿದ್ದ ಕ್ರೀಡಾಪಟುಗಳನ್ನು ಸತ್ಕರಿಸಲಾಯಿತು   

ಕನಕಪುರ: ದೇಶಕ್ಕೆ ಸ್ವಾತಂತ್ರ್ಯ ಸಿಗಲು ಅಸಂಖ್ಯಾತ ಹೋರಾಟಗಾರರ ತ್ಯಾಗ–ಬಲಿದಾನ ಕಾರಣವಾಗಿದ್ದು ಸ್ಮರಿಸಬೇಕಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ತಿಳಿಸಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಶುಕ್ರವಾರ ನಡೆದ 75ನೇ ವರ್ಷದ ಗಣರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

ತ್ಯಾಗ–ಬಲಿದಾನ ಮೂಲಕ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ವಿಮೋಚನೆಗೊಳಿಸಲು ಸಾವಿರಾರು ಜನರು ತಮ್ಮ ಜೀವನ ಮುಡುಪಾಗಿಟ್ಟು ಹೋರಾಟ ಮಾಡಿದ್ದಾರೆ. ಅದರ ಫಲವಾಗಿ ಸ್ವಾತಂತ್ರ‍್ಯವನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಿದರು.

ADVERTISEMENT

ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನೂರಾರು ಸಂಸ್ಥಾನಗಳು ಇದ್ದವು. ಕೆಲವು ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಇವರೆಲ್ಲರ ಅಧೀನದಲ್ಲಿದ್ದ ಸಂಸ್ಥಾನಗಳನ್ನು ಒಟ್ಟುಗೂಡಿಸಿದ ಕೀರ್ತಿ ನೆಹರೂ ಅವರಿಗೆ ಸಲ್ಲಬೇಕು ಎಂದರು.

ಸಂವಿಧಾನವನ್ನೇ ಬದಲಾವಣೆ ಮಾಡುವ ಪ್ರಯತ್ನ ನಡೆಯುತ್ತಿದೆ. ಪ್ರಜಾಸತ್ತಾತ್ಮಕ ಬೇರು ಗಟ್ಟಿಯಾಗಿರುವವರೆಗೂ ಆಶೋತ್ತರಕ್ಕೆ ಧಕ್ಕೆಯಾಗುವುದಿಲ್ಲ ಎಂದರು.

ತಹಶೀಲ್ದಾರ್ ಡಾ.ಸ್ಮಿತಾ ರಾಮು, ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಎಲ್ಲರಿಗೂ ಸಮಾನತೆ ತರುವ ಸಂವಿಧಾನ ರಚನೆ ಮಾಡುವುದು ಸವಾಲಾಗಿತ್ತು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬೇರೆ ಬೇರೆ ದೇಶಗಳ ಸಂವಿಧಾನ ಅಧ್ಯಯನ ಮಾಡಿ ದೇಶಕ್ಕೆ ಒಪ್ಪುವ ಬೃಹತ್ ಸಂವಿಧಾನವನ್ನು ರಚನೆ ಮಾಡಿದರು. ಸಂವಿಧಾನದಲ್ಲಿ ಸಮಾನತೆ, ಸಹೋದರತ್ವ ಸಾರವನ್ನು ಒಳಗೊಂಡಿದೆ. ಈ ದಿನವನ್ನು ಹಬ್ಬದಂತೆ ನಾವೆಲ್ಲರೂ ಸಂಭ್ರಮದಿಂದ ಆಚರಣೆ ಮಾಡಬೇಕಿದೆ ಎಂದರು.

ರಾಜ್ಯ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಹಲವು ಶಾಲೆ ಮಕ್ಕಳು ದೇಶಭಕ್ತಿ ಸಾರುವ ಗೀತೆಗಳಿಗೆ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

 ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿದ ತಹಶೀಲ್ದಾರ್‌ ಡಾ.ಸ್ಮಿತರಾಮ್‌ ವಿಧಾನಪರಿಷತ್‌ ಸದಸ್ಯ ಎಸ್‌.ರವಿ ಉಪಸ್ಥಿತರಿದ್ದರು

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್, ನಗರಸಭೆ ಪೌರಾಯುಕ್ತ ಮಹದೇವ್, ಇ.ಒ ಭೈರಪ್ಪ, ಬಿಇಒ ಜಿ.ಬಿ.ರಾಮಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್, ತಾಲ್ಲೂಕು ಅಧ್ಯಕ್ಷ ಶಿವಲಿಂಗೇಗೌಡ, ನಗರಸಭೆ ಸದಸ್ಯರಾದ ಮಕ್ಬುಲ್ ಪಾಷಾ, ಸೈಯದ್ ಸಾದಿಕ್, ರಾಮದುರ್ಗಯ್ಯ, ಮಾಲತಿ ಆನಂದ್ ಪೈ, ಕೆ.ಟಿ.ಕಿರಣ್, ಗುಂಡಣ್ಣ, ನಾಗರಾಜು, ಭಾರತ ಸೇವಾದಳದ ಖಜಾಂಚಿ ಆನಂದ್, ಟಿಪಿಸಿಎಂಎಸ್ ಅಧ್ಯಕ್ಷ ಚಂದ್ರಶೇಖರ್ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.