ADVERTISEMENT

ಬೆಂಗಳೂರು ಗ್ರಾಮಾಂತರ: ಕಣದಲ್ಲಿ ಮೂವರು ಸುರೇಶ್, ಐವರು ಮಂಜುನಾಥ್

ಓದೇಶ ಸಕಲೇಶಪುರ
Published 5 ಏಪ್ರಿಲ್ 2024, 0:11 IST
Last Updated 5 ಏಪ್ರಿಲ್ 2024, 0:11 IST
ಡಿ.ಕೆ. ಸುರೇಶ್, ಕಾಂಗ್ರೆಸ್ ಅಭ್ಯರ್ಥಿ
ಡಿ.ಕೆ. ಸುರೇಶ್, ಕಾಂಗ್ರೆಸ್ ಅಭ್ಯರ್ಥಿ   

ರಾಮನಗರ: ದಿನದಿಂದ ದಿನಕ್ಕೆ ರಂಗೇರುತ್ತಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಹೆಸರಿನ ಮೂವರು ಹಾಗೂ ಮಂಜುನಾಥ್ ಹೆಸರಿನ ಐವರು ಕಣದಲ್ಲಿದ್ದಾರೆ! ಇನಿಷಿಯಲ್‌ ಮತ್ತು ಪದನಾಮದಲ್ಲಿ ಮಾತ್ರ ಅಲ್ಪಸ್ವಲ್ಪ ಬದಲಾವಣೆ ಇದ್ದು, ಉಳಿದಂತೆ ಹೆಸರು ಒಂದೇ ರಿತಿ ಇದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಅದೇ ಹೆಸರಿನಲ್ಲಿ ಕರುನಾಡು ಪಾರ್ಟಿಯಿಂದ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರಿನ ಸುರೇಶ್ ಎಸ್. ಹಾಗೂ ಪಕ್ಷೇತರರಾಗಿ ಕನಕಪುರ ತಾಲ್ಲೂಕಿನ ಮರಳೆ ಗ್ರಾಮದ ಸುರೇಶ್ ಎಂ.ಎನ್ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ–ಜೆಡಿಎಸ್ ಮೈತ್ರಿಕೂಟದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ. ಸಿ.ಎನ್. ಮಂಜುನಾಥ್ ಗುರುವಾರ ನಾಮಪತ್ರ ಸಲ್ಲಿಸಿದರೆ,  ಅದೇ ಹೆಸರಿನ ಇತರ ನಾಲ್ವರು ಉಮೇದುವಾರಿಕೆ ಸಲ್ಲಿಸಿರುವುದು ವಿಶೇಷವಾಗಿದೆ.

ADVERTISEMENT

ಬಹುಜನ್ ಭಾರತ್ ಪಾರ್ಟಿಯಿಂದ ಮಂಜುನಾಥ ಸಿ.ಎನ್. ಬುಧವಾರ ನಾಮಪತ್ರ ಸಲ್ಲಿಸಿದ್ದರು. ಪಕ್ಷೇತರರಾಗಿ ಮಂಜುನಾಥ್ ಸಿ., ಮಂಜುನಾಥ್ ಎನ್. ಹಾಗೂ ಮಂಜುನಾಥ್ ಕೆ. ಎಂಬುವರು ಗುರುವಾರ ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. 

ಈ ಪೈಕಿ ಮಂಜುನಾಥ್ ಸಿ.ಎನ್ ಅವರು ಡಾ. ಮಂಜುನಾಥ್ ಅವರ ಸ್ವಂತ ಊರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನವರು. ಪಕ್ಷೇತರರಾದ ಮಂಜುನಾಥ್ ಸಿ. ಬೆಂಗಳೂರಿನ ಮೂಡಲಪಾಳ್ಯದವರಾದರೆ, ಮಂಜುನಾಥ್ ಎನ್. ರಾಜಾಜಿನಗರ ಹಾಗೂ ಮಂಜುನಾಥ್ ಕೆ. ಪಾಪರೆಡ್ಡಿಪಾಳ್ಯದವರು.

ಬಿಜೆಪಿಯ ಡಾ. ಮಂಜುನಾಥ್ ಮತ್ತು ಕಾಂಗ್ರೆಸ್‌ನ ಡಿ.ಕೆ. ಸುರೇಶ್ ಅವರ ಹೆಸರಿನ ಕುರಿತು ಮತದಾರರಲ್ಲಿ ಗೊಂದಲ ಮೂಡಿಸಿ, ಎದುರಾಳಿಗಳ ವಿರುದ್ಧ ಲಾಭ ಪಡೆಯುವುದಕ್ಕಾಗಿ ಒಂದೇ ರೀತಿಯ ಹೆಸರಿನವರನ್ನು ಕರೆತಂದು ನಾಮಪತ್ರ ಸಲ್ಲಿಸಲಾಗಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಸುರೇಶ್ ಎಂ.ಎನ್ ಪಕ್ಷೇತರ
ಸುರೇಶ್ ಎಸ್ ಕರುನಾಡು ಪಾರ್ಟಿ
ಡಾ. ಸಿ.ಎನ್. ಮಂಜುನಾಥ್ ಬಿಜೆಪಿ ಅಭ್ಯರ್ಥಿ
ಮಂಜುನಾಥ್ ಸಿ.ಎನ್ ಬಹುಜನ್ ಭಾರತ್ ಪಾರ್ಟಿ
ಮಂಜುನಾಥ್ ಸಿ ಪಕ್ಷೇತರ
ಮಂಜುನಾಥ್ ಕೆ ಪಕ್ಷೇತರ
ಮಂಜುನಾಥ್ ಎನ್ ಪಕ್ಷೇತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.