ಚನ್ನಪಟ್ಟಣ: ನಗರದ ತಟ್ಟೆಕೆರೆ ಬಳಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಶ್ರೀಗಂಧದ ತುಂಡುಗಳನ್ನು ಸೋಮವಾರ ವಶಪಡಿಸಿಕೊಂಡಿರುವ ಪೊಲೀಸರು, ಕಾರು ಚಾಲಕ ಮಹತಾಬ್ ಖಾನ್ (40) ಎಂಬಾತನನ್ನು ಬಂಧಿಸಿದ್ದಾರೆ.
ಪಟ್ಟನದ ಟಿಪ್ಪುನಗರದ ನಿವಾಸಿಯಾದ ಈತ ಕಲಾನಗರದ ನಿವಾಸಿ ಮುನೀರ್ ಎಂಬುವರ ಮನೆಯಲ್ಲಿ ಶ್ರೀಗಂಧದ ತುಂಡುಗಳನ್ನು ಖರೀದಿ ಮಾಡಿ, ಕಾರಿನಲ್ಲಿ ಸಾಗಿಸುವಾಗ ಪೊಲೀಸರು ದಾಳಿ ನಡೆಸಿದ್ದಾರೆ. ವೇಗವಾಗಿ ಕಾರು ಚಾಲನೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಚಾಲಕನ ನಡೆಯಿಂದ ಅನುಮಾನಗೊಂಡ ಪೊಲೀಸರು, ಕಾರನ್ನು ಹಿಂಬಾಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಕಾರು ಪರಿಶೀಲನೆ ಮಾಡಿದಾಗ ಪ್ಲಾಸ್ಟಿಕ್ ಚೀಲದಲ್ಲಿ 10 ಗಂಧದ ತುಂಡುಗಳು ಪತ್ತೆಯಾಗಿವೆ. ವಶಪಡಿಸಿಕೊಂಡಿರುವ ತುಂಡುಗಳು 15 ಕೆ.ಜಿ ತೂಕವಿದ್ದು, ಇದರ ಬೆಲೆ ₹1.20 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶ್ರೀಗಂಧದ ತುಂಡುಗಳನ್ನು ಮಾರಾಟ ಮಾಡಿದ ಮತ್ತೊಬ್ಬ ಆರೋಪಿ ಮುನೀರ್ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂರ್ವ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಪಿ. ಆಕಾಶ್, ಸಿಬ್ಬಂದಿ ಹಿರೇಮನಿ, ಕಾಶಿನಾಥ್, ಮಂಜುನಾಥ ಸುಣ್ಣಗಾರ, ಕಾರ್ತಿಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.