ADVERTISEMENT

ಸಂಕ್ರಾಂತಿ ‘ಕಿಚ್ಚು’ ಹೆಚ್ಚಿಸಿದ ರಾಸುಗಳು

ಜಾನಪದ ಲೋಕದಲ್ಲಿ ಹಬ್ಬದ ಸಂಭ್ರಮ: ಗಮನ ಸೆಳೆದ ಜೋಡೆತ್ತುಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 12:30 IST
Last Updated 15 ಜನವರಿ 2020, 12:30 IST
ಜಾನಪದ ಲೋಕದಲ್ಲಿ ಬುಧವಾರ ಸಂಕ್ರಾಂತಿ ಅಂಗವಾಗಿ ಜಾನುವಾರುಗಳಿಗೆ ಕಿಚ್ಚು ಹಾಯಿಸಲಾಯಿತು
ಜಾನಪದ ಲೋಕದಲ್ಲಿ ಬುಧವಾರ ಸಂಕ್ರಾಂತಿ ಅಂಗವಾಗಿ ಜಾನುವಾರುಗಳಿಗೆ ಕಿಚ್ಚು ಹಾಯಿಸಲಾಯಿತು   

ರಾಮನಗರ: ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಇಲ್ಲಿನ ಜಾನಪದ ಲೋಕದಲ್ಲಿ ಬುಧವಾರ ಆಯೋಜಿಸಿದ್ದ ಜೋಡಿ ಎತ್ತುಗಳ ಪ್ರದರ್ಶನ ಹಾಗೂ ಸ್ಪರ್ಧೆ ಪ್ರವಾಸಿಗರ ಕಣ್ಮನ ಸೆಳೆಯಿತು.

ಜಿಲ್ಲೆಯ ನಾನಾ ಭಾಗಗಳಿಂದ ಹಲವು ಜೋಡಿ ಎತ್ತುಗಳು ಸ್ಪರ್ಧೆ ಪಾಲ್ಗೊಂಡಿದ್ದವು. ರೈತರು ಎತ್ತುಗಳ ಮೈಯನ್ನು ಹೊಳೆಯುವಂತೆ ತಿಕ್ಕಿ ತೊಳೆದಿದ್ದರು. ಕೊಂಬಿಗೆ ಬಣ್ಣ, ಕೊಂಬು ಕಳಸ, ಹಣೆಗೆ ಬಾಸಿಂಗವನ್ನು ಕಟ್ಟಿದ್ದರು. ಎತ್ತುಗಳ ಕೊರಳಿಗೆ ದಂಡೆಗಂಟೆಗಳನ್ನು ಕಟ್ಟಿ, ಹೂಗಳಿಂದ ಸಿಂಗರಿಸಲಾಗಿತ್ತು.

ಸಂಕ್ರಾಂತಿ ರಜೆ ಇದ್ದ ಕಾರಣ ಜಾನಪದ ಲೋಕದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಎತ್ತುಗಳನ್ನು ನೋಡಿ ಪುಳಕಿತಗೊಂಡು ಅವುಗಳ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು. ಅಲಂಕೃತ ಎತ್ತುಗಳ ಕಣ್ಣಿನ ರೇಖೆ, ಹಣೆಯ ಲಕ್ಷಣ, ಮುಖದ ಕಳೆ, ಮೈ ಬಣ್ಣ, ಕಾಲಿನ ಚೆಂದ, ಕೊಂಬು, ಕೊರಳು, ಸುಳಿಸುತ್ತು ನೋಡಿ ಅವುಗಳ ಅಂದವನ್ನು ಅಳೆಯಲಾಯಿತು.

ADVERTISEMENT

ಸಂಕ್ರಾಂತಿ ಕಿಚ್ಚು: ಜಾನಪದ ಲೋಕದಲ್ಲಿ ನಡೆದ ರಾಸುಗಳ ಕಿಚ್ಚು ಹಾಯಿಸುವಿಕೆ ಜನರ ಮನಸೂರೆಗೊಂಡಿತು. ಸಂಕ್ರಾಂತಮ್ಮನಿಗೆ ಪೂಜೆ ಮಾಡಿ ಬೆಂಕಿಯನ್ನು ಹಾಕಲಾಯಿತು. ಅಲಂಕೃತಗೊಂಡಿದ್ದ ರಾಸುಗಳನ್ನು ರೈತರು ಬೆಂಕಿಯಲ್ಲಿ ಹಾರಿಸುವ ಮೂಲಕ ಕಿಚಾಯಿಸಿದರು.

ಬೆಂಕಿಯಲ್ಲಿ ರಾಸುಗಳು ಹಾರುವುದನ್ನು ಕಂಡ ಪ್ರವಾಸಿಗರು ಹರ್ಷಚಿತ್ತರಾಗಿ ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿಯುತ್ತಿದ್ದರು. ಸಿಳ್ಳೆ, ಚಪ್ಪಾಳೆ ಹಾಕುವ ಮೂಲಕ ಕಿಚ್ಚು ಹಾಯಿಸುವವರನ್ನು ಹುರಿದಂಬಿಸಿದರು.
ಈ ಬಾರಿ ಐದು ವಿಭಾಗಗಳಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಯೊಂದು ವರ್ಗದ ಸ್ಪರ್ಧೆಗೂ ಕ್ರಮವಾಗಿ ಪ್ರಥಮ ಬಹುಮಾನ ₨3 ಸಾವಿರ, ದ್ವಿತೀಯ ಬಹುಮಾನ ₨2 ಸಾವಿರ ಹಾಗೂ ತೃತೀಯ ಬಹುಮಾನ ₨1 ಸಾವಿರ, ಪ್ರೋತ್ಸಾಹಧನವಾಗಿ ₨500 ವಿತರಿಸಲಾಯಿತು.

ಚಿಕ್ಕಲಿಂಗಮ್ಮ ಮತ್ತು ಹೋರಿ ಕೆಂಪೇಗೌಡ ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿರುವ ಪ್ರೊ. ದೊಡ್ಡಸ್ವಾಮಿ ಮಾತನಾಡಿ ‘ಪಾಶ್ಚಾತ್ಯ ಸಂಸ್ಕೃತಿಯಿಂದ ಹಳ್ಳಿಗಳು ಪಟ್ಟಣ ಪ್ರದೇಶಗಳಾಗಿ ರೂಪುಗೊಳ್ಳುತ್ತಿವೆ. ವೈಜ್ಞಾನಿಕ ಸಲಕರಣೆಗಳು ಬಳಕೆಗೆ ಬಂದ ಮೇಲೆ ಗೋವುಗಳ ಸಂತತಿ ಕ್ಷೀಣಿಸುತ್ತಿದೆ. ನಾಗರಿಕತೆ ಹೆಚ್ಚಾದಂತೆ ನಮ್ಮ ಸಂಸ್ಕೃತಿ ನಾಶವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿ ‘ವ್ಯವಸಾಯ ಯಾಂತ್ರೀಕೃತಗೊಳ್ಳುತ್ತಿರುವುದರಿಂದ ಜಾನುವಾರುಗಳ ಪಾತ್ರ ಕಡಿಮೆಯಾಗುತ್ತಿದೆ. ದೇಸಿಯ ತಳಿಗಳಾದ ಹಳ್ಳಿಕಾರ್, ಅಮೃತ್ ಮಹಲ್ ಮತ್ತಿತರ ತಳಿಗಳು ಕ್ಷೀಣಿಸುತ್ತಿವೆ. ಎಲ್ಲೆಡೆ ಮಿಶ್ರ ತಳಿಗಳು ಹೆಚ್ಚಾಗುತ್ತಿವೆ. ಮುಂದಿನ ದಿನಗಳಲ್ಲಿ ಜಾನಪದ ಲೋಕದಲ್ಲಿ ದೇಸಿ ತಳಿಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು’ ಎಂದರು.

ಹಸು ಎಂದರೆ ಹಾಲು ಕೊಡುವ ಯಂತ್ರವಲ್ಲ. ರೈತರು ಮತ್ತು ರಾಸುಗಳ ನಡುವ ಅವಿನಾಭಾವ ಸಂಬಂಧವಿದೆ. ಸುಗ್ಗಿಯ ಕಾಲದಲ್ಲಿ ರಾಸುಗಳಿಗೆ ಪ್ರಮುಖವಾದ ಸ್ಥಾನವನ್ನು ನೀಡುವ ಮೂಲಕ ಪೂಜಿಸಲಾಗುತ್ತಿದೆ. ಸಂಕ್ರಾಂತಿ ಎಂದರೆ ಹೊಸತನವನ್ನು ಕಂಡುಕೊಳ್ಳುವುದು. ಮನುಷ್ಯನು ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ನೆಮ್ಮದಿಯಿಂದ ಜೀವನ ನಡೆಸಿದಾಗ ಮಾತ್ರ ಹಬ್ಬದ ಆಚರಣೆಗಳು ಸಾರ್ಥಕವಾಗುತ್ತವೆ ಎಂದು ತಿಳಿಸಿದರು.

ತೀರ್ಪುಗಾರರಾದ ಮಾದೇಶ್, ನಿಂಗೇಗೌಡ, ನಂಜುಂಡೇಗೌಡ, ಡಾ. ಹರೀಶ್, ಡಾ. ಅನಿಲ್ ಕುಮಾರ್, ಜಾನಪದ ಲೋಕದ ಮುಖ್ಯ ಆಡಳಿತಾಧಿಕಾರಿ ಸಿ.ಎನ್. ರುದ್ರಪ್ಪ, ಆಡಳಿತಾಧಿಕಾರಿ ಡಾ. ಕುರುವ ಬಸವರಾಜ್, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ ಇದ್ದರು.


ಬಾಕ್ಸ್‌–1
ಬಹುಮಾನ ವಿಜೇತರು
ಹಲ್ಲು ಆಗದೆ ಇರುವ ಜೋಡೆತ್ತುಗಳ ಸ್ಪರ್ಧೆಯಲ್ಲಿ ಮಹದೇವ್ ಪ್ರಥಮ, ಚಿಕ್ಕತಮ್ಮಯ್ಯ ದ್ವಿತೀಯ, ಬೈರೇಗೌಡ ತೃತೀಯ ಬಹುಮಾನ ಪಡೆದರು. ಎರಡು ಹಲ್ಲಿನ ಜೋಡೆತ್ತುಗಳ ಸ್ಪರ್ಧೆಯಲ್ಲಿ ರಾಜೇಶ್ ಪ್ರಥಮ ಬಹುಮಾನ, ಮೂರುಜೋಡಿ ಹಲ್ಲಿನ ಜೋಡೆತ್ತುಗಳ ಸ್ಪರ್ಧೆಯಲ್ಲಿ ರಾಜು ಪ್ರಥಮ, ನಾಗೇಂದ್ರ ದ್ವಿತೀಯ ಬಹುಮಾನ. ನಾಲ್ಕು ಹಲ್ಲಿನ ಜೋಡೆತ್ತುಗಳ ಸ್ಪರ್ಧೆಯಲ್ಲಿ ರಾಮಣ್ಣ ಪ್ರಥಮ ಬಹುಮಾನ, ಬಾಯಿಗೂಡಿದ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜೋಡೆತ್ತುಗಳ ಸ್ಪರ್ಧೆಯಲ್ಲಿ ಲೋಕೇಶ್ ಪ್ರಥಮ, ಭರತ್ ದ್ವಿತೀಯ ಬಹುಮಾನ ಹಾಗೂ ಈರಣ್ಣ, ಚನ್ನೇಗೌಡರಿಗೆ ಪ್ರೋತ್ಸಾಹಧನ ಬಹುಮಾನ ನೀಡಲಾಯಿತು.


ಬಾಕ್ಸ್‌–2
ಹಳ್ಳಿಗಳಲ್ಲೂ ಸಂಭ್ರಮ
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ರಾಸುಗಳನ್ನು ತೊಳೆದು, ಸಿಂಗರಿಸಿ ಕಿಚ್ಚು ಹಾಯಿಸಿ ಖುಷಿ ಪಟ್ಟರು. ಬಗೆಬಗೆಯ ಬಣ್ಣ, ಹೊಸ ದಾರ, ಕುಚ್ಚು ಮೊದಲಾದವುಗಳಿಂದ ಜಾನುವಾರುಗಳು ಅಲಂಕೃತಗೊಂಡಿದ್ದವು. ಮಹಿಳೆಯರು, ಮಕ್ಕಳು ಮನೆಮನೆಗೆ ತೆರಳಿ ಎಳ್ಳು–ಬೆಲ್ಲ ಹಂಚಿಕೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.