ರಾಮನಗರ: ಮಕರ ಸಂಕ್ರಾಂತಿ ಹಬ್ಬದ ಮುನ್ನ ದಿನವಾದ ಶನಿವಾರ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಕಂಡು ಬಂದಿತು.
ಸಂಕ್ರಾಂತಿ ಹಬ್ಬ ಸುಗ್ಗಿಯ ಹಬ್ಬವೆಂದೇ ಪ್ರತೀತಿ. ಗ್ರಾಮೀಣ ಭಾಗಗಳಲ್ಲಿ ಬೆಳೆಗಳು ಕಟಾವು ಆದ ನಂತರ ಈ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಸಂಕ್ರಾಂತಿ ಹಬ್ಬದ ನಂತರ ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ. ನಾಳೆಗೆ ಧನುರ್ಮಾಸ ಕೊನೆಯಾಗಲಿದೆ. ಈ ಹಬ್ಬದಂದು ಹೆಣ್ಣು ಮಕ್ಕಳು ಸ್ನಾನ ಮಡಿಗಳಿಂದ ದೇವರನ್ನು ಪೂಜಿಸಿ ನಂತರ ಮನೆಮನೆಗಳಿಗೆ ತೆರಳಿ ಎಳ್ಳು-ಬೆಲ್ಲ, ಕಬ್ಬಿನ ಜಲ್ಲೆ ಹಂಚುವ ಪದ್ಧತಿ ಇಂದಿಗೂ ಇದೆ.
ಶನಿವಾರ ಮುಂಜಾನೆಯಿಂದಲೇ ಗ್ರಾಹಕರು ಎಪಿಎಂಸಿ ಮಾರುಕಟ್ಟೆ, ಹಳೇ ಬಸ್ ನಿಲ್ದಾಣ ಹಾಗೂ ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ಖರೀದಿಗೆಂದು ಬಂದಿದ್ದರು. ಬೆಳಿಗ್ಗೆ ಎಪಿಎಂಸಿ ಆವರಣದಲ್ಲಿ ಜನಸಂದಣಿ ಕಂಡುಬಂದಿತು. ಹಬ್ಬಕ್ಕೆ ಬೇಕಾದ ಕಬ್ಬಿನ ಜಲ್ಲೆ, ಕಡಲೆಕಾಯಿ, ಅವರೆಕಾಯಿ, ಗೆಣಸು, ಹೂ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಎಳ್ಳು, ಬೆಲ್ಲದ ವ್ಯಾಪಾರವೂ ನಡೆದಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಬ್ಬಿನ ದರದಲ್ಲಿ ಹೆಚ್ಚಿಗೆ ವ್ಯತ್ಯಾಸ ಇರಲಿಲ್ಲ. ಬೆಳಿಗ್ಗೆ ಎಪಿಎಂಸಿ ಆವರಣದಲ್ಲಿ ಜೋಡಿ ಜಲ್ಲೆಗೆ ₹50–60ರಂತೆ ಮಾರಾಟ ನಡೆದಿತ್ತು. ಸಂಜೆ ಹೊತ್ತಿಗೆ ನಗರದ ಹಳೇ ಬಸ್ ನಿಲ್ದಾಣ ವೃತ್ತದ ಆಸುಪಾಸು ಕಬ್ಬಿನ ಮಾರಾಟ ಜೋರಾಗಿದ್ದು, ಜೋಡಿಯೊಂದಕ್ಕೆ ₹80–100ರವರೆಗೂ ಮಾರಾಟ ನಡೆಯಿತು. ಕಡಲೆಕಾಯಿ ಪ್ರತಿ ಸೇರಿಗೆ ₹40, ಸಿಹಿಗೆಣಸು ಪ್ರತಿ ಕೆ.ಜಿ.ಗೆ ₹40ರ ದರದಲ್ಲಿ ಮಾರಾಟ ನಡೆಯಿತು.
ಹಬ್ಬದ ದಿನ ಹಸಿ ಅವರೆಕಾಯಿ ಬೆರೆಸಿದ ಗೊಜ್ಜು ಸೇವನೆ ಸಂಪ್ರದಾಯ. ಅದರಲ್ಲೂ ಮಾಗಡಿ ಭಾಗದಿಂದ ಬರುವ ಸೊನೆ ಅವರೆಯ ಸ್ವಾದವೇ ಬೇರೆ. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಸೊರೆ ಅವರೆ ಕಡಿಮೆ ಪ್ರಮಾಣದಲ್ಲಿ ಇತ್ತು. ಮೈಸೂರು ಭಾಗದ ಸಾಧಾರಣ ಅವರೆ ಪ್ರತಿ ಕೆ.ಜಿ.ಗೆ ₹80ರಂತೆ ಮಾರಾಟ ನಡೆಯಿತು.
ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ಸೇರಿದಂತೆ ವಿವಿಧ ಪದಾರ್ಥಗಳ ಬೆಲೆ ಹೆಚ್ಚಾಗಿರುವುದಕ್ಕೆ ಗ್ರಾಹಕರು ಗೊಣಗುತ್ತಲೇ ವ್ಯಾಪಾರ ಮುಂದುವರಿಸಿದ್ದರು. ಎಳ್ಳುಬೆಲ್ಲದ ರೆಡಿಮೇಡ್ ಪ್ಯಾಕೆಟ್‌ಗಳು ಮಾರಾಟಕ್ಕೆ ಲಭ್ಯವಿದ್ದು, ಕೆ.ಜಿ.ಗೆ ₹200–250ವರೆಗೂ ದರವಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.