ADVERTISEMENT

ಪರಿಶಿಷ್ಟ ಜಾತಿ ಮಕ್ಕಳ ಪ್ರೋತ್ಸಾಹಧನಕ್ಕೂ ಕತ್ತರಿ!

ವಾರ್ಷಿಕ ₹6 ಲಕ್ಷ ಆದಾಯ ಮಿತಿ* ಹೊಸ ಷರತ್ತು ವಿಧಿಸಿದ ಸರ್ಕಾರ

ಓದೇಶ ಸಕಲೇಶಪುರ
Published 16 ಜುಲೈ 2024, 20:41 IST
Last Updated 16 ಜುಲೈ 2024, 20:41 IST
   

ರಾಮನಗರ: ಮೊದಲ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಎಸ್ಎಸ್‌ಎಲ್‌ಸಿ ತೇರ್ಗಡೆಯಾದ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ಯಾವುದೇ ಕಾರಣ ಇಲ್ಲದೆ ಏಕಾಏಕಿ ಸ್ಥಗಿತಗೊಳಿಸಿದೆ!

ಅಲ್ಲದೇ, ಪಿಯು, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ವೃತ್ತಿಪರ ಮತ್ತು ಉನ್ನತ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಕುಟುಂಬದ ವಾರ್ಷಿಕ ಆದಾಯ ಮಿತಿ ₹6 ಲಕ್ಷ ಮೀರಿರಬಾರದು ಎಂಬ ಷರತ್ತು ವಿಧಿಸಿದೆ. 2023–24ನೇ ಸಾಲಿನಿಂದ ಜಾರಿಗೆ ಬರುವಂತೆ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಇಲ್ಲಿಯವರೆಗೂ ಈ ನಿಯಮ ಜಾರಿಯಲ್ಲಿ ಇರಲಿಲ್ಲ.

ಶೋಷಿತ ಸಮುದಾಯಗಳ ಮಕ್ಕಳ ಶಿಕ್ಷಣ ಉತ್ತೇಜಿಸಲು ಸರ್ಕಾರವು ಮೊದಲ ಪ್ರಯತ್ನದಲ್ಲಿ ಎಸ್ಎಸ್‌ಎಲ್‌ಸಿ ಪ್ರಥಮ ದರ್ಜೆಯಲ್ಲಿ ಪಾಸ್‌ ಆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ತಂದಿತ್ತು. ಆದರೆ, ಇದೀಗ ಯಾವುದೇ ಮುನ್ಸೂಚನೆ ಅಥವಾ ಸಕಾರಣವಿಲ್ಲದೆ ಈ ಯೋಜನೆಯನ್ನು ಕೈಬಿಟ್ಟಿದೆ.

ADVERTISEMENT

‘ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ ಶೇ 60 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಎಸ್‌ಎಸ್‌ಎಲ್‌ಸಿ ಪಾಸ್‌ ಆದರೆ ₹7 ಸಾವಿರ ಹಾಗೂ ಶೇ75ಕ್ಕಿಂತ ಹೆಚ್ಚು ಅಂಕ ಗಳಿಸಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾದರೆ ₹15 ಸಾವಿರ ಪ್ರೋತ್ಸಾಹಧನ ನೀಡುತ್ತಿತ್ತು. ಆಗ ವಾರ್ಷಿಕ ಆದಾಯ ಮಿತಿ ಷರತ್ತು ಇರಲಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸ ಆದೇಶದ ಪ್ರಕಾರ ಎಸ್‌ಎಸ್ಎಲ್‌ಸಿ ಪ್ರಥಮ ದರ್ಜೆ ಉತ್ತೀರ್ಣಕ್ಕೆ ನೀಡುವ ಪ್ರೋತ್ಸಾಹಧನವನ್ನು ಸ್ಥಗಿತಗೊಳಿಸಿ ಅತ್ಯುನ್ನತ ದರ್ಜೆಯಲ್ಲಿ (ಶೇ75ಕ್ಕಿಂತ ಹೆಚ್ಚು ಅಂಕ) ಪಾಸ್‌ ಆದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹಧನ ಯೋಜನೆಯನ್ನು ಮಾತ್ರ ಮುಂದುವರೆಸಿದೆ. ಆದರೆ, ₹6 ಲಕ್ಷ ಆದಾಯ ಮಿತಿ ಷರತ್ತು ಹೇರಿದೆ’ ಎಂದರು.

‘ಇಲಾಖೆ ಏಕಾಏಕಿ ಪ್ರೋತ್ಸಾಹಧನ ಯೋಜನೆ ನಿಲ್ಲಿಸಿರುವುದಕ್ಕೆ ಕಾರಣವೇನು? ಆ ಹಣ ಏನಾದರೂ ದುರುಪಯೋಗವಾಗುತ್ತಿತ್ತೇ? ಈ ಕುರಿತು ಸಮೀಕ್ಷೆ ನಡೆದಿದೆಯೇ? ಈ ಯಾವ ಪ್ರಶ್ನೆಗಳಿಗೂ ಅಧಿಕಾರಿಗಳ ಬಳಿ ಉತ್ತರವಿಲ್ಲ. ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳ ಬಗ್ಗೆ ಸರ್ಕಾರ ಹೊಂದಿರುವ ಕಾಳಜಿ ಎಂತಹದ್ದು ಎಂಬುದಕ್ಕೆ ಪ್ರೋತ್ಸಾಹಧನ ಸ್ಥಗಿತಗೊಳಿಸಿರುವುದು ಸಾಕ್ಷಿಯಾಗಿದೆ’ ಎಂದು ಶಿಕ್ಷಣ ತಜ್ಞ ಬಿ. ಶ್ರೀಪಾದ ಭಟ್ ಪ್ರತಿಕ್ರಿಯಿಸಿದ್ದಾರೆ.

ಬಿ. ಶ್ರೀಪಾದ ಭಟ್‌ ಶಿಕ್ಷಣ ತಜ್ಞ 
ಪ್ರಥಮ ದರ್ಜೆಯಲ್ಲಿ ಎಸ್‌ಎಸ್ಎಲ್‌ಸಿ ಪಾಸ್‌ ಆದವರಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ಹಿಂದಿನಂತೆ ನೀಡಬೇಕು. ಹೊಸದಾಗಿ ವಿಧಿಸಿರುವ ₹6 ಲಕ್ಷ ಆದಾಯ ಮಿತಿ ಷರತ್ತು ತೆಗೆಯಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು
– ಮಾವಳ್ಳಿ ಶಂಕರ್ ರಾಜ್ಯ ಪ್ರಧಾನ ಸಂಚಾಲಕ ಡಿಎಸ್‌ಎಸ್‌ (ಅಂಬೇಡ್ಕರ್ ವಾದ)

‘ಇದೇನಾ ದಲಿತರ ಸಬಲೀಕರಣ?’

ಪರಿಶಿಷ್ಟ ಸಮುದಾಯದ ಮಕ್ಕಳು ಮೊದಲ ದರ್ಜೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸು ಮಾಡುವುದು ಇಂದಿಗೂ ದೊಡ್ಡ ಸಾಧನೆಯೇ. ಅದರಲ್ಲೂ ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದಿ ಪ್ರಥಮ ದರ್ಜೆಯಲ್ಲಿ ಪಾಸು ಮಾಡುವುದು ಸಾಮಾನ್ಯ ಮಾತಲ್ಲ.  ಸರ್ಕಾರ ನೀಡುತ್ತಿದ್ದ ಅಲ್ಪಮೊತ್ತದ ಪ್ರೋತ್ಸಾಹಧನ ಬಡ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಆಸರೆ ಆಗುತ್ತಿತ್ತು. ಈಗ ಅದಕ್ಕೂ ಸರ್ಕಾರ ಕತ್ತರಿ ಹಾಕಿದ ಹಿಂದಿನ ಕಾರಣ ಮಾತ್ರ ನಿಗೂಢ. ಗ್ಯಾರಂಟಿ ಯೋಜನೆಗಳಿಗಾಗಿ ಪ್ರೋತ್ಸಾಹಧನಕ್ಕೆ ಕತ್ತರಿ ಬಿದ್ದಿದೆಯೇ? ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರ ದಲಿತರ ಸಬಲೀಕರಣ ಇದೇನಾ? –ಬಿ. ಶ್ರೀಪಾದ ಭಟ್ ಶಿಕ್ಷಣ ತಜ್ಞ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.