ADVERTISEMENT

ರಾಮನಗರ: ತೆರೆದ ಶೆಡ್‌ನಲ್ಲಿ ಮಕ್ಕಳಿಗೆ ಪಾಠ

ಗೌಸಿಯಾ ಮೊಹಲ್ಲಾ ಉರ್ದು ಶಾಲೆಯ ದುಃಸ್ಥಿತಿ: ಒಂದು ಕಟ್ಟಡ ನೆಲಸಮ, ಬೀಳುವ ಹಂತದಲ್ಲಿ ಮತ್ತೊಂದು ಕಟ್ಟಡ

ಓದೇಶ ಸಕಲೇಶಪುರ
Published 19 ಜೂನ್ 2024, 4:07 IST
Last Updated 19 ಜೂನ್ 2024, 4:07 IST
ರಾಮನಗರದ ಗೌಸಿಯಾ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿರುವುದರಿಂದ, ಕಟ್ಟಡ ಎದುರು ನಿರ್ಮಿಸಿರವ ತೆರೆದ ಶೆಡ್‌ನಲ್ಲೇ, ಮಳೆ–ಗಾಳಿ ಲೆಕ್ಕಿಸದೆ ಶಿಕ್ಷಕಿಯರು ಮಕ್ಕಳು ಪಾಠ ಮಾಡುತ್ತಿದ್ದಾರೆ
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ರಾಮನಗರದ ಗೌಸಿಯಾ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿರುವುದರಿಂದ, ಕಟ್ಟಡ ಎದುರು ನಿರ್ಮಿಸಿರವ ತೆರೆದ ಶೆಡ್‌ನಲ್ಲೇ, ಮಳೆ–ಗಾಳಿ ಲೆಕ್ಕಿಸದೆ ಶಿಕ್ಷಕಿಯರು ಮಕ್ಕಳು ಪಾಠ ಮಾಡುತ್ತಿದ್ದಾರೆ ಪ್ರಜಾವಾಣಿ ಚಿತ್ರ: ಚಂದ್ರೇಗೌಡ   

ರಾಮನಗರ: ಮಳೆ ಬಂದರೆ ಚಾವಣಿಯಿಂದ ತೊಟ್ಟಿಕ್ಕುವ ನೀರು. ಬಿರುಕು ಬಿಟ್ಟಿರುವ ಗೋಡೆಗಳನ್ನು ಆವರಿಸಿರುವ ಪಾಚಿ. ಬಿರುಕು ಬಿಟ್ಟು ಅಲ್ಲಲ್ಲಿ ಕಿತ್ತು ಹೋಗಿರುವ ಗೋಡೆ. ಕಟ್ಟಡ ಯಾವಾಗ ಬೀಳುತ್ತದೊ ಎಂಬ ಆತಂಕದಲ್ಲೇ ದಿನದೂಡುತ್ತಿರುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳು. ವಿಧಿ ಇಲ್ಲದೆ ಕಟ್ಟಡದ ಎದುರು ತೆರೆದ ಶೆಡ್‌ನಲ್ಲಿ ಪಾಠ ಮಾಡುವ ಶಿಕ್ಷಕಿಯರು. ಮಳೆ–ಗಾಳಿ ಲೆಕ್ಕಿಸದೆ ನೆಲಕ್ಕೆ ಹಾಸಿದ ಹರಕಲು ಚಾಪೆ ಮತ್ತು ಮೂರ್ನಾಲ್ಕು ಬೆಂಚ್‌ಗಳ ಮೇಲೆ ಕುಳಿತು ಕಲಿಯುವ ಮಕ್ಕಳು.

ನಗರದ ಎನ್‌.ಎಂ. ಬ್ಲಾಕ್‌ನ ಗೌಸಿಯಾ ಮೊಹಲ್ಲಾದಲ್ಲಿರುವ ಸುಮಾರು 59 ವರ್ಷಗಳಷ್ಟು ಹಳೆಯದಾದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ ಇದು.

ರೈಲು ನಿಲ್ದಾಣದ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಈ ಶಾಲಾ ಕಟ್ಟಡವಿದ್ದು, ಪಕ್ಕದಲ್ಲಿ ರೈಲುಗಳು ಸಂಚರಿಸಿದಾಗಲೆಲ್ಲ ಕಟ್ಟಡವು ನಡುಗಿದಂತೆ ಭಾಸವಾಗುತ್ತದೆ. ಆದರೂ, ಜಾಗದ ಕೊರತೆಯಿಂದಾಗಿ ಬಿಸಿಯೂಟ ಕಾರ್ಯಕರ್ತೆಯರಿಬ್ಬರು ಜೀವ ಕೈಯಲ್ಲಿಡಿದುಕೊಂಡೇ ಕಟ್ಟಡದೊಳಗೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸುತ್ತಾರೆ.

ADVERTISEMENT

ಒಂದು ಕಟ್ಟಡ ನೆಲಸಮ: ‘ಸದ್ಯದ ಶಾಲಾ ಕಟ್ಟಡದಿಂದ ಕೂಗಳತೆ ದೂರದಲ್ಲಿ ಮತ್ತೊಂದು ಕಟ್ಟಡವಿತ್ತು. ಶಿಥಿಲಾವಸ್ಥೆ ತಲುಪಿದ್ದೂ ಬೇರೆ ಮಾರ್ಗವಿಲ್ಲದೆ ಅಲ್ಲೇ ತರಗತಿಗಳನ್ನು ನಡೆಸುತ್ತಿದ್ದೆವು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರು ಮುಂಜಾಗ್ರತಾ ಕ್ರಮವಾಗಿ ಕಟ್ಟಡ ನೆಲಸಮಗೊಳಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ನಾಲ್ಕು ತಿಂಗಳ ಹಿಂದೆ ಕಟ್ಟಡ ನೆಲಸಮಗೊಳಿಸಿ, ನಮ್ಮನ್ನು ಇಲ್ಲಿಗೆ ಸ್ಥಳಾಂತರಿಸಿದರು’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಫಕ್ರುಂದಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆದಷ್ಟು ಬೇಗ ಶಾಲಾ ಕಟ್ಟಡ ನಿರ್ಮಿಸಿ ಕೊಡುವುದಾಗಿ ಶಾಸಕರು ಭರವಸೆ ನೀಡಿದ್ದರು. ಇಲಾಖೆಯ ಮೇಲಧಿಕಾರಿಗಳು ಸಹ ಹೊಸ ಕಟ್ಟಡಕ್ಕೆ ಪ್ರಸ್ತಾವ ಕಳಿಸಿದ್ದಾರೆ. ಅಲ್ಲಿಯವರೆಗೆ ಪಕ್ಕದ ಹಳೆ ಕಟ್ಟಡದಲ್ಲಿ ತರಗತಿ ಮುಂದುವರಿಸಲು ಸೂಚಿಸಿದರು. ಈ ಕಟ್ಟಡವೂ ಶಿಥಿಲವಾಗಿರುವುದರಿಂದ ತಾತ್ಕಾಲಿಕವಾಗಿ ಹೊರಗೆ ತರಗತಿ ನಡೆಸುವಂತೆ ಶಾಲಾಭಿವೃದ್ಧಿ ಸಮಿತಿಯವರು ಹಾಗೂ ಸ್ಥಳೀಯರು ಇಲ್ಲೊಂದು ತೆರೆದ ಶೆಡ್ ನಿರ್ಮಿಸಿ ಕೊಟ್ಟಿದ್ದಾರೆ. ಶಾಲಾ ಕಟ್ಟಡದ ಬಳಿಯೇ ಅಂಗನವಾಡಿ ಇದೆ. ಮಳೆಯಿಂದಾಗಿ ತೀರಾ ತೊಂದರೆಯಾದರೆ ಅಂಗನವಾಡಿಯಲ್ಲಿ ಆಶ್ರಯ ಪಡೆಯುವಂತೆ ಸಲಹೆ ನೀಡಿದ್ದಾರೆ’ ಎಂದು ಹೇಳಿದರು. ಅವರ ಮಾತಿಗೆ ಸಹ ಶಿಕ್ಷಕಿ ಆರತಿ ಸಹ ದನಿಗೂಡಿಸಿದರು.

‘ಶಾಲಾ ಕಟ್ಟಡದ ಬಳಿಯೇ ಅಂಗನವಾಡಿ ಇದೆ. ಮಳೆಯಿಂದಾಗಿ ತೀರಾ ತೊಂದರೆಯಾದರೆ ಅಂಗನವಾಡಿಯಲ್ಲಿ ಆಶ್ರಯ ಪಡೆಯುವಂತೆ ಸಲಹೆ ನೀಡಿದ್ದಾರೆ. ಇತ್ತೀಚೆಗೆ ಶಾಲಾವಧಿಯಲ್ಲಿ ಮಳೆ ಸುರಿದಾಗ ಮಕ್ಕಳು ನೆನೆಯದಂತೆ, ಅವರ ಕಲಿಕಾ ಸಾಮಗ್ರಿಗಳೊಂದಿಗೆ ಅಂಗನವಾಡಿಯೊಳಗೆ ಕೆಲ ಹೊತ್ತು ಆಶ್ರಯ ಪಡೆದೆವು’ ಎಂದು ಮಳೆ ಬಂದಾಗಿನ ಪರಿಸ್ಥಿತಿ ಬಿಚ್ಚಿಟ್ಟರು.

ಟ್ರೂಪ್‌ಲೈನ್, ಗೌಸಿಯಾ ಮೊಹಲ್ಲಾ ಸೇರಿದಂತೆ ಈ ಭಾಗದಲ್ಲಿ ಬಹುತೇಕ ಬಡ ಕೂಲಿ ಕಾರ್ಮಿಕರೇ ವಾಸಿಸುತ್ತಿದ್ದಾರೆ. ಆ ಪೈಕಿ ಮುಸ್ಲಿಮರ ಮಕ್ಕಳೇ ಈ ಉರ್ದು ಶಾಲೆಯಲ್ಲಿ ಹೆಚ್ಚಾಗಿದ್ದಾರೆ. ಮಕ್ಕಳು ಅಕ್ಷರ ಕಲಿತು ಬದುಕು ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ತಂದೆ–ತಾಯಂದಿರುವ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ. ಆದರೆ, ಶಿಥಿಲಾವಸ್ಥೆ ತಲುಪಿರುವ ಕಟ್ಟಡದಲ್ಲಿ ಸರಿಯಾದ ಕಲಿಕಾ ಸೌಲಭ್ಯಗಳಿಲ್ಲದೆ ಮಕ್ಕಳು ವಿದ್ಯಾಭ್ಯಾಸ ಮಾಡಬೇಕಾದ ಸ್ಥಿತಿ ಇದೆ.

ರಾಮನಗರದ ಗೌಸಿಯಾ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು ಒಳಭಾಗದ ಕೊಠಡಿ ಬಿರುಕು ಬಿಟ್ಟಿದೆ  ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಶಿಥಿಲಾವಸ್ಥೆ ತಲುಪಿರುವ ರಾಮನಗರದ ಗೌಸಿಯಾ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಹೊರನೋಟ ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಚಾಪೆ ಮೇಲೆ ಕುಳಿತು ಓದು–ಬರಹದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ನೆಲಸಮಗೊಂಡಿರುವ ರಾಮನಗರದ ಗೌಸಿಯಾ ಮೊಹಲ್ಲಾದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ಪ್ರಜಾವಾಣಿ ಚಿತ್ರ: ಚಂದ್ರೇಗೌಡ

ಶಿಥಿಲವಾಗಿದ್ದರಿಂದ ಶಾಲಾ ಕಟ್ಟಡ ಕೆಡವಲಾಯಿತು. ನಗರಸಭೆಯಿಂದ ಹೊಸ ಕಟ್ಟಡಕ್ಕೆ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಇಲಾಖೆ ವತಿಯಿಂದಲೂ ಹೊಸ ಕಟ್ಟಡ ನಿರ್ಮಾಣಕ್ಕೆ ₹50 ಲಕ್ಷದ ಪ್ರಸ್ತಾವ ಕಳಿಸಲಾಗಿದೆ. ಅನುಮೋದನೆ ಸಿಕ್ಕ ತಕ್ಷಣ ಕಟ್ಟಡ ಶುರುವಾಗಲಿದೆ

– ಪಿ. ಸೋಮಲಿಂಗಯ್ಯ ಕ್ಷೇತ್ರ, ಶಿಕ್ಷಣಾಧಿಕಾರಿ ರಾಮನಗರ

ಮಕ್ಕಳ ದಾಖಲಾತಿ ಕುಸಿತ

ಶಾಲಾ ಕಟ್ಟಡದ ದುಃಸ್ಥಿತಿಯಿಂದಾಗಿ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿಯೂ ಕುಸಿತವಾಗಿದೆ. ಶಿಥಿಲಗೊಂಡ ಕಟ್ಟಡ ಗಮನಿಸಿದ ಕೆಲ ಮಕ್ಕಳ ತಂದೆ–ತಾಯಂದಿರು ಕಟ್ಟಡದಿಂದ ತಮ್ಮ ಮಕ್ಕಳ ಜೀವಕ್ಕೆ ಏನಾದರು ಅಪಾಯ ಸಂಭವಿಸಿತು ಎಂಬ ಭಯದಿಂದ ಶಾಲೆ ಬದಲಿಸಿದ್ದಾರೆ. ಒಂದರಿಂದ 5ನೇ ತರಗತಿವರೆಗಿನ ಈ ಶಾಲೆಯಲ್ಲಿ ಕಳೆದ ವರ್ಷ 47 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷ 29ಕ್ಕೆ ಕುಸಿದಿದೆ. 1ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ 2ನೇ ತರಗತಿಯಲ್ಲಿ 6 ಮಕ್ಕಳು 3ನೇ ತರಗತಿಯಲ್ಲಿ 6 4ನೇ ತಗತಿಯಲ್ಲಿ 10 ಹಾಗೂ 5ನೇ ತರಗತಿಯಲ್ಲಿ 6 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಗೆ 3 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಒಬ್ಬರು ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಸದ್ಯ ಇಬ್ಬರು ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಿದ್ದು ಒಬ್ಬರು ಶಿಕ್ಷಕರ ಕೊರತೆ ಇದೆ. ಪಕ್ಕದ ಮನೆ ಶೌಚಾಲಯ ಬಳಕೆ ಸದ್ಯ ಇರುವ ಹಳೆ ಶಾಲಾ ಕಟ್ಟಡದಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಹಾಗಾಗಿ ಪಕ್ಕದ ಮನೆಯವರಿಗೆ ಮನವಿ ಮಾಡಿಕೊಂಡು ಅವರ ಮನೆಯ ಶೌಚಾಲಯವನ್ನೇ ವಿದ್ಯಾರ್ಥಿಗಳು ಮತ್ತು ನಾವೂ ಬಳಸುತ್ತಿದ್ದೇವೆ. ಹೊಸ ಶಾಲಾ ಕಟ್ಟಡ ನಿರ್ಮಾಣವಾದರೆ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಎಂದು ಶಾಲೆಯ ಶಿಕ್ಷಕಿಯರು ಹೇಳಿದರು.

‘ಹೊಸ ಕಟ್ಟಡ ಶುರು ಮಾಡದಿದ್ದರೆ ಹೋರಾಟ’

‘ದಶಕದಿಂದಲೂ ಶಾಲೆಯ ಸ್ಥಿತಿ ಹೀಗೆಯೇ ರೀತಿ ಇದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಇಕ್ಬಾಲ್ ಹುಸೇನ್ ಅವರು ಸ್ಥಳಕ್ಕೆ ಭೇಟಿ ನೀಡಿ ಅನಾಹುತ ಸಂಭವಿಸುವುದಕ್ಕೆ ಮುಂಚೆ ಕಟ್ಟಡ ಕೆಡವಲು ಸೂಚಿಸಿದರು. ಕಟ್ಟಡ ನೆಲಸಮವಾಯಿತು. ಆದರೆ ತಕ್ಷಣ ಹೊಸ ಕಟ್ಟಡ ನಿರ್ಮಾಣ ಶುರುವಾಗಲಿಲ್ಲ. ಪರ್ಯಾಯ ವ್ಯವಸ್ಥೆ ಮಾಡದೆ ಶಾಸಕರು ಮತ್ತು ಬಿಇಒ ನಿರ್ಧಾರ ಕೈಗೊಂಡಿದ್ದರಿಂದ ಮಕ್ಕಳು ಶೆಡ್‌ನಲ್ಲಿ ಪಾಠ ಕೇಳಬೇಕಾದ ಸ್ಥಿತಿ ಬಂದಿದೆ. ಆದಷ್ಟು ಬೇಗ ಐದು ಕೊಠಡಿ ಮತ್ತು ಶೌಚಾಲಯದ ಹೊಸ ಕಟ್ಟಡ ನಿರ್ಮಾಣವಾಗಬೇಕು. ಇಲ್ಲದಿದ್ದರೆ ಸ್ಥಳೀಯರ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಶಾಲಾಭಿವೃದ್ಧಿ ಮೇಲ್ವಿಚಾರಣೆ ಸಮಿತಿ ಸದಸ್ಯ ಹಬೀಬುಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.