ADVERTISEMENT

ರಾಮನಗರ | ಸರ್ಕಾರಿ ಶಾಲೆ ದುಃಸ್ಥಿತಿಗೆ ‘ಪ್ರಜಾವಾಣಿ’ ಭೂತಗನ್ನಡಿ

‘ಶಿಥಿಲ ಶಾಲೆ’ ಸರಣಿಗೆ ಓದುಗರಿಂದ ಮೆಚ್ಚುಗೆ; ಅಧಿಕಾರಿಗಳು, ಜನಪ್ರತಿನಿಧಿಗಳಿಂದ ದುರಸ್ತಿ ಭರವಸೆ

ಓದೇಶ ಸಕಲೇಶಪುರ
Published 20 ಜುಲೈ 2024, 4:48 IST
Last Updated 20 ಜುಲೈ 2024, 4:48 IST
ಶಿಥಿಲಾವಸ್ಥೆ ತಲುಪಿರುವ ಚನ್ನಪಟ್ಟಣ ತಾಲ್ಲೂಕಿನ ಮೆಂಗಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೊರನೋಟ
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಶಿಥಿಲಾವಸ್ಥೆ ತಲುಪಿರುವ ಚನ್ನಪಟ್ಟಣ ತಾಲ್ಲೂಕಿನ ಮೆಂಗಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೊರನೋಟ ಪ್ರಜಾವಾಣಿ ಚಿತ್ರ: ಚಂದ್ರೇಗೌಡ   

ರಾಮನಗರ: ಶಾಲೆಗಳು ಭವಿಷ್ಯದ ಪ್ರಜೆಗಳನ್ನು ರೂಪಿಸುವ ದೇವಾಲಯಗಳು. ಉತ್ತಮ ಸಮಾಜ ನಿರ್ಮಾಣದಲ್ಲಿ ಶಾಲೆಗಳ ಪಾತ್ರ ಮಹತ್ವವಾದುದು. ದೇವಾಲಯದ ಸ್ವರೂಪದ ಇಂತಹ ಸರ್ಕಾರಿ ಶಾಲೆಗಳ ಕುರಿತು ‘ಪ್ರಜಾವಾಣಿ’ಯು ಪ್ರಕಟಿಸಿದ ‘ಶಿಥಿಲ ಶಾಲೆ’ ವಿಶೇಷ ವರದಿ ಸರಣಿಯು, ಶಾಲೆಗಳ ಸ್ಥಿತಿಗೆ ಭೂತಗನ್ನಡಿ ಹಿಡಿದಿದೆ.

ಜಿಲ್ಲೆಯ 5 ತಾಲ್ಲೂಕುಗಳಲ್ಲಿರುವ ಶಿಥಿಲಾವಸ್ಥೆಯ ಕಟ್ಟಡಗಳ ದುಃಸ್ಥಿತಿಯನ್ನು ಸರಣಿಯು ಓದುಗರ ಮುಂದೆ ತೆರೆದಿಟ್ಟಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆತಂಕದಲ್ಲೇ ಶಾಲೆಗೆ ಬಂದು ಹೋಗಬೇಕಾದ ಸ್ಥಿತಿಯನ್ನು ಅನಾವರಣಗೊಳಿಸಿದ ಪತ್ರಿಕೆಯ ಪ್ರಯತ್ನಕ್ಕೆ, ಓದುಗರು ಹಾಗೂ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

25 ವರದಿ ಪ್ರಕಟ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು (ಜಿಎಎಚ್‌ಪಿಎಸ್), ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು (ಜಿಎಲ್‌ಪಿಎಸ್), ಸರ್ಕಾರಿ ಪ್ರೌಢಶಾಲೆಗಳು (ಜಿಎಚ್ಎಸ್) ಹಾಗೂ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳ (ಜಿಯುಎಚ್‌ಪಿಎಸ್) ಸ್ಥಿತಿ ಕುರಿತು, ಜೂನ್ 19ರಿಂದ ಶುರುವಾದ ಸರಣಿಯಡಿ 25 ವಿಶೇಷ ವರದಿಗಳು ಪ್ರಕಟವಾಗಿವೆ.

ADVERTISEMENT

ಶಾಲೆಗಳ ಶೋಚನೀಯ ಸ್ಥಿತಿಯನ್ನು ಬಿಡಿಬಿಡಿಯಾಗಿ ಬಿಚ್ಚಿಡುವ ಜೊತೆಗೆ, ಪ್ರತಿ ತಾಲ್ಲೂಕಿನಲ್ಲಿ ಇಂತಹ ಶಾಲೆಗಳು ಎಷ್ಟಿವೆ? ದುರಸ್ತಿ ಯಾಕೆ ಆಗಿಲ್ಲ? ಪೋಷಕರು ಹೇಳುವುದೇನು? ಶಿಥಿಲ ಕಟ್ಟಡದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳೇನು? ಶಿಕ್ಷಣ ಇಲಾಖೆ ಅಧಿಕಾರಿಗಳು ಏನು ಹೇಳುತ್ತಾರೆ...? ಹೀಗೆ ವಿವಿಧ ಆಯಾಮಗಳಲ್ಲಿ ವರದಿ ಬೆಳಕು ಚೆಲ್ಲಿದೆ.

181 ಶಾಲೆ ಶಿಥಿಲ: ಜಿಲ್ಲೆಯಲ್ಲಿರುವ 1,279 ಶಾಲೆಗಳ ಪೈಕಿ 181 ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಇದರಲ್ಲಿ ಸುಮಾರು 437ಕ್ಕೂ ಹೆಚ್ಚು ಕೊಠಡಿಗಳು ದುರಸ್ತಿಯಾಗಬೇಕಿವೆ. ಕನಕಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶಿಥಿಲ ಶಾಲಾ ಕಟ್ಟಡಗಳಿವೆ. ಇಲ್ಲಿ 75 ಕಟ್ಟಡಗಳ 144 ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಎರಡನೇ ಸ್ಥಾನದಲ್ಲಿರುವ ಚನ್ನಪಟ್ಟಣದಲ್ಲಿ 56 ಶಾಲೆಗಳ 261 ಕೊಠಡಿಗಳು ಶಿಥಿಲವಾಗಿವೆ. ಮಾಗಡಿಯಲ್ಲಿ 26 ಶಾಲೆಗಳ 32 ಕೊಠಡಿಗಳು ತರಗತಿ ನಡೆಸುವಷ್ಟು ಸುಸ್ಥಿತಿಯಲ್ಲಿಲ್ಲ. ಕಡೆಯದಾಗಿ ರಾಮನಗರದಲ್ಲಿ 24 ಶಾಲೆಗಳು ಶಿಥಿಲಗೊಂಡಿವೆ.

ಶಾಲೆ ಸ್ಥಳಾಂತರ: ರಾಮನಗರದ ಗೌಸಿಯಾ ಮೊಹಲ್ಲಾದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ದುಃಸ್ಥಿತಿ ಕುರಿತು, ಜೂನ್ 19ರಂದು ಪ್ರಕಟವಾಗಿದ್ದ ಸರಣಿಯ ‘ತೆರೆದ ಶೆಡ್‌ನಲ್ಲೇ ಶಾಲಾ ಮಕ್ಕಳಿಗೆ ಪಾಠ’ ವಿಶೇಷ ವರದಿಯು ಮಾರನೇಯ ದಿನವೇ ಫಲಶ್ರುತಿಯಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ಅವರು ಶಾಲೆಗೆ ಭೇಟಿ ನೀಡಿ, ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಶಾಲೆಯನ್ನು ತಾತ್ಕಾಲಿಕವಾಗಿ ಸಮೀಪದ ಮೌಲಾನ ಆಜಾದ್ ಇಂಗ್ಲಿಷ್ ಮಾಧ್ಯಮ ಶಾಲೆಗೆ ಸ್ಥಳಾಂತರ ಮಾಡಿಸಿದ್ದಾರೆ.

ಉಳಿದ ತಾಲ್ಲೂಕುಗಳ ಶಾಲೆ ಕುರಿತ ವರದಿ ಗಮನಿಸಿ ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿ ಸದಸ್ಯರು, ಶಿಕ್ಷಕರು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಕಟ್ಟಡದ ದುರಸ್ತಿಗೆ ಭರವಸೆ ನೀಡಿದ್ದಾರೆ. ವರದಿಯಾಗಿರುವ ಬಹುತೇಕ ಶಾಲೆಗಳ ದುರಸ್ತಿಗೆ ಕ್ರಿಯಾಯೋಜನೆ ತಯಾರಿಸಿ ಮೇಲಧಿಕಾರಿಗೆ ಕಳಿಸಿ ಕೊಟ್ಟಿದ್ದಾರೆ.

ಎಚ್‌.ಸಿ. ಬಾಲಕೃಷ್ಣ ಮಾಗಡಿ ಶಾಸಕ
ಎಚ್‌.ಎ. ಇಕ್ಬಾಲ್ ಹುಸೇನ್ ರಾಮನಗರ ಶಾಸಕ
ಡಾ. ಸಿ.ಎನ್. ಮಂಜುನಾಥ್ ಸಂಸದ
– ಉಮೇಶ್ ಜಿ. ಗಂಗವಾಡಿ ರಾಜ್ಯಾಧ್ಯಕ್ಷ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ
ಯಶವಂತ್ ವಿ. ಗುರುಕರ್ ಜಿಲ್ಲಾಧಿಕಾರಿ
ದಿಗ್ವಿಜಯ್ ಬೋಡ್ಕೆ ಸಿಇಒ ರಾಮನಗರ ಜಿಲ್ಲಾ ಪಂಚಾಯಿತಿ
ವಿ.ಸಿ. ಬಸವರಾಜೇಗೌಡ ಉಪ ನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ ರಾಮನಗರ

ಅಂಕಿಅಂಶ1,279ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳು731ಕಿರಿಯ ಪ್ರಾಥಮಿಕ ಶಾಲೆಗಳು441ಹಿರಿಯ ಪ್ರಾಥಮಿಕ ಶಾಲೆಗಳು107ಪ್ರೌಢಶಾಲೆಗಳು ಪಟ್ಟಿ...ಶಿಥಿಲಾವಸ್ಥೆ ಶಾಲೆ–ಕೊಠಡಿ ವಿವರತಾಲ್ಲೂಕು;ಶಾಲೆ;ದುರಸ್ತಿ ಕ್ರಿಯಾಯೋಜನೆ ಮೊತ್ತರಾಮನಗರ;24;–;₹54.24 ಲಕ್ಷಚನ್ನಪಟ್ಟಣ;56;261;₹2.57 ಕೋಟಿಮಾಗಡಿ;26;32;₹2.68 ಕೋಟಿಕನಕಪುರ;75;144;₹40.47 ಲಕ್ಷ (8 ಶಾಲೆ ದುರಸ್ತಿಗೆ) ಪಟ್ಟಿ...ತಾಲ್ಲೂಕುವಾರು ಸರ್ಕಾರಿ ಶಾಲೆಗಳುತಾಲ್ಲೂಕು;ಶಾಲೆ;ವಿದ್ಯಾರ್ಥಿಗಳುರಾಮನಗರ;270;41,238ಚನ್ನಪಟ್ಟಣ;240;28,327ಮಾಗಡಿ;349;23,364ಕನಕಪುರ;420;37,428ಒಟ್ಟು;1,30,357

Quote - ರಾಮನಗರ ಮತ್ತು ಹಾರೋಹಳ್ಳಿ ತಾಲ್ಲೂಕಿನ ಕೆಲ ಶಿಥಿಲ ಶಾಲೆಗಳ ದುರಸ್ತಿ ಕೆಲಸಕ್ಕೆ ಇತ್ತೀಚೆಗೆ ಚಾಲನೆ ಕೊಟ್ಟಿದ್ದೇನೆ. ಇನ್ನೂ ಕೆಲ ಶಾಲೆಗಳ ದುರಸ್ತಿಗೆ ವರ್ಕ್‌ ಆರ್ಡರ್ ನೀಡಲಾಗಿದೆ. ಉಳಿದ ಶಾಲೆಗಳ ದುರಸ್ತಿಯನ್ನು ಸಹ ಕೈಗೆತ್ತಿಕೊಳ್ಳಲಾಗುವುದು – ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕ ರಾಮನಗರ

Quote - ತಾಲ್ಲೂಕಿನಲ್ಲಿರುವ ಶಿಥಿಲ ಶಾಲೆಗಳ ಕುರಿತು ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದ್ದೇನೆ. ಅಧಿವೇಶನ ಮುಗಿಯುತ್ತಿದ್ದಂತೆ ವರದಿ ಪರಿಶೀಲಿಸಿ ಸಿಎಸ್‌ಆರ್‌ ಸೇರಿದಂತೆ ಇತರ ಅನುದಾನದಡಿ ದುರಸ್ತಿ ಕೆಲಸಕ್ಕೆ ಚಾಲನೆ ನೀಡಲಾಗುವುದು – ಎಚ್.ಸಿ. ಬಾಲಕೃಷ್ಣ ಶಾಸಕ ಮಾಗಡಿ

Quote - ಶಿಕ್ಷಣ ನಮ್ಮ ಬದುಕಿನ ಆಧಾರಸ್ತಂಭ. ಈ ಕ್ಷೇತ್ರ ಅನುದಾನ ಮತ್ತು ಮಾನವ ಸಂಪನ್ಮೂಲದ ಕೊರತೆ ಎದುರಿಸುತ್ತಲೇ ಇದೆ. ಶಾಲಾ ಕಟ್ಟಡ ದುರಸ್ತಿ ಮತ್ತು ಹೊಸ ಕಟ್ಟಡವನ್ನು ಆದ್ಯತೆ ಮೇರೆಗೆ ಕೈಗೊಳ್ಳುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವೆ – ಡಾ. ಸಿ.ಎನ್. ಮಂಜುನಾಥ್ ಸಂಸದ

Quote - ಸರ್ಕಾರಿ ಶಾಲಾ ಕಟ್ಟಡಗಳ ಅವ್ಯವಸ್ಥೆ ಕುರಿತು ‘ಪ್ರಜಾವಾಣಿ’ ಬೆಳಕು ಚೆಲ್ಲಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಿಥಿಲ ಶಾಲೆ ದುರಸ್ತಿ ಮತ್ತು ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು – ಉಮೇಶ್ ಜಿ. ಗಂಗವಾಡಿ ರಾಜ್ಯಾಧ್ಯಕ್ಷ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ

Cut-off box - ‘ಶಾಲೆ ಸಬಲೀಕರಣಕ್ಕೆ ಬೇಕಿದೆ ಪ್ರಾಧಿಕಾರ’ ‘ಮೂಲಸೌಕರ್ಯಗಳಿಲ್ಲದೆ ಬಳಲುತ್ತಿರುವ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು. ಇದರ ಮೂಲಕ ಶಾಲೆಗಳ ಮೂಲಸೌಕರ್ಯ ಮತ್ತು ಶಿಕ್ಷಣದ ಗುಣಮಟ್ಟದ ಮೇಲೆ ನಿಗಾ ವಹಿಸಿ ಸುಧಾರಣೆ ತರಬೇಕು. ಮೂಲಸೌಕರ್ಯ ಕೊರತೆಯೇ ಶಾಲೆಗಳ ಬಗ್ಗೆ ಪಾಲಕರಿಗೆ ಅಪನಂಬಿಕೆ ಬರಲು ಕಾರಣ. ಶಾಲೆಗಳಲ್ಲಿ ದಾಖಲಾತಿ ಕುಸಿತಕ್ಕೆ ಇದು ಸಹ ಕಾರಣ. ಶಾಲೆಗಳಲ್ಲಿ ಕಲಿಕೆಗೆ ಪೂರಕವಾಗಿ 9 ಮೂಲಸೌಕರ್ಯಗಳಿರಬೇಕು. ಆದರೆ ರಾಜ್ಯದಲ್ಲಿ 100 ಶಾಲೆಗಳ ಪೈಕಿ 23 ಶಾಲೆಗಳಲ್ಲಿ ಮಾತ್ರ ಅಂತಹ ಸೌಕರ್ಯಗಳಿವೆ. ಉಳಿದ 73 ಶಾಲೆಗಳು ವಂಚಿತವಾಗಿವೆ. ಹಾಗಾಗಿ ಸರ್ಕಾರಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಬಾಗಿಲು ಮುಚ್ಚುತ್ತಿವೆ’ ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ‘ಪ್ರಜಾವಾಣಿ’ಯೊಂದಿಗೆ ಆತಂಕ ವ್ಯಕ್ತಪಡಿಸಿದರು.

Cut-off box - ‘ದುರಸ್ತಿಗೆ ಕ್ರಮ ವಹಿಸುವೆ’ ‘ಶಿಥಿಲ ಶಾಲೆಗಳ ಕುರಿತು ಪ್ರಜಾವಾಣಿಯಲ್ಲಿ ಬಂದಿರುವ ಸರಣಿ ವರದಿಗಳನ್ನು ಗಮನಿಸಿರುವೆ. ಜಿಲ್ಲೆಯಾದ್ಯಂತ ಶಿಥಿಲ ಹಾಗೂ ಹಳೆಯ ಕಟ್ಟಡಗಳ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆಯಿಂದ ತರಿಸಿಕೊಂಡು ಪರಿಶೀಲನೆ ನಡೆಸಿ ದುರಸ್ತಿಗೆ ಕ್ರಮ ಕೈಗೊಳ್ಳುವೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯೋಜನೆಯಡಿ ಜಿಲ್ಲೆಯಲ್ಲಿ 20 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸದ್ಯ ಶಿಥಿಲವಾಗಿರುವ ಕೆಲ ಶಾಲೆಗಳು ಮುಂದೆ ಪಬ್ಲಿಕ್ ಶಾಲೆಗಳ ವ್ಯಾಪ್ತಿಗೆ ಬರಲಿವೆ’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹೇಳಿದರು. ‘ಪೇಪರ್ ಕಟ್ಟಿಂಗ್ ಸಮೇತ ವರದಿ ಸಲ್ಲಿಕೆ’ ‘ಪ್ರಜಾವಾಣಿಯಲ್ಲಿ ಪ್ರಕಟವಾದ ಶಾಲಾ ಕಟ್ಟಡದ ವರದಿಗಳ ಪೇಪರ್ ಕಟ್ಟಿಂಗ್ ಸಂಗ್ರಹಿಸಿದ್ದೇನೆ. ಎಲ್ಲಾ ಬ್ಲಾಕ್‌ಗಳ ಶಾಲೆಗಳ ಪಟ್ಟಿ ತರಿಸಿಕೊಂಡು ಅವುಗಳ ದುರಸ್ತಿ ಕಾರ್ಯವನ್ನು ಜಿಲ್ಲಾ ಖನಿಜ ಅನುದಾನದಲ್ಲಿ (ಡಿಎಂಎಫ್‌) ಕೈಗೆತ್ತಿಕೊಳ್ಳಲು ಅನುಮೋದನೆ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ವರದಿ ಕಳಿಸಿದ್ದೇನೆ. ಅವರು ಸಹ ಸಮ್ಮತಿಸಿದ್ದು ಹಂತಹಂತವಾಗಿ ಶಾಲೆಗಳ ದುರಸ್ತಿ ಶುರುವಾಗಲಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿ.ಸಿ. ಬಸವರಾಜೇಗೌಡ ತಿಳಿಸಿದರು. ‘ಜಿ.ಪಂ ತಾ.ಪಂ ನರೇಗಾ ಅನುದಾನಡಿ ಅಭಿವೃದ್ಧಿ’ ‘ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಹಾಗೂ ನರೇಗಾ ಅನುದಾನದಡಿ ಜಿಲ್ಲೆಯ ಶಿಥಿಲ ಶಾಲೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ದುರಸ್ತಿ ಮಾಡಲಾಗುವುದು. ತೀರಾ ಹಳೆಯ ಶಾಲೆಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲಾಗುವುದು. ಜೊತೆಗೆ ಇತರ ಮೂಲಸೌಕರ್ಯಗಳಾದ ಶೌಚಾಲಯ ಅಡುಗೆ ಮನೆ ಆಟದ ಮನೆ ಕಾಂಪೌಂಡ್‌ ನಿರ್ಮಾಣ ಕುರಿತು ವಾರದೊಳಗೆ ಕ್ರಿಯಾಯೋಜನೆ ತಯಾರಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.