ರಾಮನಗರ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ (ಒನ್ ವೇಯಲ್ಲಿ) ಶಾಲಾ ಮಕ್ಕಳಿದ್ದ ಬಸ್ ಚಲಾಯಿಸಿದ ಬಸ್ ಚಾಲಕ ಶ್ರೀನಿವಾಸ್ ಎಂಬಾತನನ್ನು ಕುಂಬಳಗೋಡು ಠಾಣೆ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.
ಕಗ್ಗಲಿಪುರ ಬಳಿ ಇರುವ ಕ್ರೈಸ್ಟ್ ಶಾಲೆಯ ಬಸ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ್, ಕುಂಬಳಗೋಡು ಸಮೀಪ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ 12 ಮಕ್ಕಳಿದ್ದ ಬಸ್ ಅನ್ನು ಬೆಳಿಗ್ಗೆ ಒನ್‌ವೇಯಲ್ಲಿ ಅತ್ಯಂತ ವೇಗವಾಗಿ ಬಸ್ ಚಲಾಯಿಸಿಕೊಂಡು ಹೋಗಿದ್ದ.
ಇದನ್ನು ಗಮನಿಸಿದ್ದ ಕಾರು ಚಾಲಕರೊಬ್ಬರು ಬಸ್ ಸಂಚರಿಸುತ್ತಿರುವ ವಿಡಿಯೊವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿದ್ದರು. ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ಅವರಿಗೂ ಟ್ಯಾಗ್ ಮಾಡಿದ್ದರು. ಇದನ್ನು ಗಮನಿಸಿದ್ದ ಎಡಿಜಿಪಿ, ಚಾಲಕನ ವಿರುದ್ಧ ಸೂಕ್ತ ಕ್ರಮಕ್ಕೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ್ದರು.
ಅದರ ಬೆನ್ನಲ್ಲೇ, ಬಸ್ ನೋಂದಣಿ ಸಂಖ್ಯೆ ಆಧರಿಸಿ ಚಾಲಕನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿರುವ ಕುಂಬಳಗೋಡು ಪೊಲೀಸರು, ಆತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದ ಶ್ರೀನಿವಾಸನನ್ನು ಶಾಲಾ ಆಡಳಿತ ಮಂಡಳಿ ಎರಡು ತಿಂಗಳ ಹಿಂದೆಯೇ ಕೆಲಸದಿಂದ ತೆಗೆದು ಹಾಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕನನ್ನು ತಕ್ಷಣ ಪತ್ತೆಹಚ್ಚಿ ವಶಕ್ಕೆ ಪಡೆದು, ಎಫ್‌ಐಆರ್ ದಾಖಲಿಸಿದ ರಾಮನಗರ ಜಿಲ್ಲಾ ಪೊಲೀಸರ ಕ್ರಮಕ್ಕೆ ಎಡಿಜಿಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.