ADVERTISEMENT

ಶತಮಾನದ ಶಾಲೆಗೆ ನವೀಕರಣ ಭಾಗ್ಯ

ನೂತನ ಕಟ್ಟಡ ನಿರ್ಮಿಸಿ ಕೊಡಲಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ ಕಂಪನಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:12 IST
Last Updated 1 ಡಿಸೆಂಬರ್ 2019, 13:12 IST
ರಾಮನಗರದ ಶತಮಾನ ಕಂಡ ಜಿ.ಕೆ.ಬಿ.ಎಂ.ಎಸ್ ಶಾಲೆಯ ಕಟ್ಟಡ (ಸಂಗ್ರಹ ಚಿತ್ರ)
ರಾಮನಗರದ ಶತಮಾನ ಕಂಡ ಜಿ.ಕೆ.ಬಿ.ಎಂ.ಎಸ್ ಶಾಲೆಯ ಕಟ್ಟಡ (ಸಂಗ್ರಹ ಚಿತ್ರ)   

ರಾಮನಗರ: ಶತಮಾನ ಕಂಡಿರುವ ಇಲ್ಲಿನ ಜಿ.ಕೆ.ಬಿ.ಎಂ.ಎಸ್ (ಗವರ್ನಮೆಂಟ್ ಕನ್ನಡ ಬಾಯ್ಸ್ ಮಾಡೆಲ್ ಸ್ಕೂಲ್) ಶಾಲೆಯ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಲಾಗಿದ್ದು, ₹4.30 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಡಿ.2ರ ಸೋಮವಾರ ಭೂಮಿ ಪೂಜೆ ನೆರೆವೇರಲಿದೆ.

ಶಿಥಿಲವಾಗುತ್ತಿದ್ದ ಜಿ.ಕೆ.ಬಿ.ಎಂ.ಎಸ್ ಶಾಲಾ ಕಟ್ಟಡದ ದುರಸ್ತಿ ಸಾಧ್ಯವಿಲ್ಲದ್ದರಿಂದ ನೂತನ ಕಟ್ಟಡ ನಿರ್ಮಾಣ ಅನಿವಾರ್ಯವಾಗಿತ್ತು. ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ ಕಂಪನಿ ನೂತನ ಕಟ್ಟಡ ನಿರ್ಮಿಸಿಕೊಡಲು ಮುಂದಾಗಿರುವುದರಿಂದ ಇಡೀ ಕಟ್ಟಡ ನೆಲಸಮವಾಗಿದೆ. ಇಂಗ್ಲಿಷರ ಆಡಳಿತದ ಕುರುಹಾಗಿ ಇದ್ದ, ತಾಲ್ಲೂಕಿನ ಪ್ರಥಮ ಇಂಗ್ಲಿಷ್ ಶಾಲೆ ನಂತರ ತಾಲ್ಲೂಕಿನ ಪ್ರಥಮ ಕನ್ನಡ ಮಾಧ್ಯಮ ಶಾಲೆ ನಡೆಯುತ್ತಿದ್ದ ಕಟ್ಟಡ ಇದೀಗ ಇತಿಹಾಸದ ಪುಟಗಳನ್ನು ಸೇರಿದೆ.

ಇಂಗ್ಲಿಷರ ಆಳ್ವಿಕೆಯ ವೇಳೆ ಬ್ರಿಟಿಷ್ ಅಧಿಕಾರಿಗಳು ತಂಗಲು ಒಂದು ಕೊಠಡಿ ಮತ್ತು ಪ್ರಾರ್ಥನಾ ಮಂದಿರವನ್ನು ನಿರ್ಮಿಸಿಕೊಂಡಿದ್ದರು. 1893ರಲ್ಲಿ ಇದೇ ಕಟ್ಟಡದಲ್ಲಿ ದಿ ವೆಸ್ಲಿಯನ್ ನ ಮಿಷನ್ ಏಡೆಡ್ ಇಂಗ್ಲಿಷ್ ಸ್ಕೂಲ್ ಎಂಬ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಆರಂಭಿಸಲಾಗಿತ್ತು. 1924ರಲ್ಲಿ ಈ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ತರಗತಿಗಳು ಆರಂಭವಾಗಿ ವೆಸ್ಲಿಯನ್ ಮಿಡಲ್ ಸ್ಕೂಲ್ ಎಂಬ ಮರು ನಾಮಕರಣದೊಂದಿಗೆ ಮುಂದುವರೆಯಿತು.

ADVERTISEMENT

1931ರಲ್ಲಿ ವೆಸ್ಲಿಯನ್ ಮಿಷನ್ ಕನ್ನಡ ಸ್ಕೂಲ್ ಪರಿವರ್ತನೆಯಾಗಿದೆ. ಕಾಲ ಉರುಳಿದಂತೆ ಮೆಥೋಡಿಯನ್ ಮಿಷನ್ ಸೊಸೈಟಿ ಎಂಬ ಸಂಘಟನೆ ಈ ಶಾಲೆಯನ್ನು ನಿರ್ವಹಿಸಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆಲ್ಲ, ಪ್ರಾರ್ಥನಾ ಮಂದಿರದ ಸುತ್ತ ಇನ್ನಷ್ಟು ಕೊಠಡಿಗಳನ್ನು ನಿರ್ಮಿಸಿಕೊಳ್ಳಲಾಗಿತ್ತು. 1941ರಲ್ಲಿ ಸ್ಥಳೀಯ ಆಡಳಿತ ಈ ಶಾಲೆಯನ್ನು ವಹಿಸಿಕೊಂಡು ನಿರ್ವಹಿಸಲಾರಂಭಿಸಿದ ನಂತರ ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆ (ಜಿ.ಕೆ.ಬಿ.ಎಂ.ಎಸ್) ಎಂದು ಪುನರ್ ನಾಮಕರಣಗೊಂಡಿದೆ.

ಯೋಜನೆ ಕೈಬಿಟ್ಟಿದ್ದ ಟೊಯೊಟಾ: ಕಳೆದ ಮಾರ್ಚ್‌ನಲ್ಲಿ ನೂತನ ಕಟ್ಟಡ ನಿರ್ಮಿಸಿಕೊಡುವಂತೆ ಟೊಯೊಟಾಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಕ್ಕೆ ಆಸಕ್ತಿ ತೋರಿಸಿದ ಟೊಯೊಟಾ 2019 ಜುಲೈ ಒಳಗೆ ಕಟ್ಟಡ ನಿರ್ಮಿಸಿಕೊಡಲು ನಿರ್ಧರಿಸಿತ್ತು.

ಆದರೆ ಸರ್ಕಾರದ ಅನುಮತಿ ನಿಧಾನವಾಗಿದ್ದರಿಂದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ವಿಳಂಬವಾಗಿದೆ. 8ನೇ ನವೆಂಬರ್ 2019ರ ವೇಳೆಗೆ ಕಟ್ಟಡ ಕೆಡವಿ ಕೊಡುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೇಳಿತ್ತು. ಆದರೆ ಟೊಯೊಟಾ ಅಧಿಕಾರಿಗಳು ಇಲ್ಲಿಗೆ ಬಂದಾಗ ಕಟ್ಟಡ ಕೆಡವಿರಲಿಲ್ಲ. ನವೆಂಬರ್ 14ರ ವರೆಗೆ ಅವಕಾಶವನ್ನು ಜಿಲ್ಲಾ ಪಂಚಾಯಿತಿ ಸಿಇಒ, ಡಿಡಿಪಿಐ ಅಧಿಕಾರಿಗಳು ಕೋರಿದ್ದರು.

ಆದರೆ, ನವೆಂಬರ್ 19ರಂದು ಕೂಡ ಕಟ್ಟಡವನ್ನು ಕೆಡವಿರಲಿಲ್ಲ. ಹೀಗಾಗಿ ಅದೇ ದಿನ ಪತ್ರ ಬರೆದ ಟೊಯೊಟಾದ ಪ್ರಧಾನ ವ್ಯವಸ್ಥಾಪಕ ಕೆ.ವಿ.ರಾಜೇಂದ್ರ ಹೆಗ್ಡೆ ಮಾರ್ಚ್ 2020ರ ವೇಳೆಗೆ ಸಿ.ಎಸ್.ಆರ್.ನಿಧಿಯನ್ನು ಬಳಕೆ ಮಾಡಬೇಕಾಗಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಆದ್ದರಿಂದ ಸದರಿ ಕಟ್ಟಡ ನಿರ್ಮಾಣವನ್ನು ಕೈಬಿಡುತ್ತಿರುವುದಾಗಿ ತಿಳಿಸಿದ್ದರು. ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್ ಅವರು ಟೊಯೋಟಾ ಅಧಿಕಾರಿಗಳ ಮನವೊಲಿಸಿ ಇದೀಗ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಕೆಂಗಲ್‌ ಕಲಿತ ಶಾಲೆ
100ಕ್ಕೂ ಹೆಚ್ಚು ವರ್ಷಗಳ ಕಾಲ ಇದ್ದ ಕಟ್ಟಡ ಇದೀಗ ಇತಿಹಾಸದ ಪುಟ ಸೇರಿದೆ. ಹಳೆ ಕಾಲದ ಚರ್ಚ್ ಮಾದರಿಯಲ್ಲೇ ಗೋಚರಿಸುತ್ತಿದ್ದ ಈ ಕಟ್ಟಡದಲ್ಲಿ ನಡೆಯುತ್ತಿದ್ದ ಸರ್ಕಾರಿ ಶಾಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ಇಂಗ್ಲಿಷ್ ಮಾಧ್ಯಮದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿದ್ದ ಸಿ.ಡಿ.ನರಸಿಂಹಯ್ಯ, ಐ.ಎ.ಎಸ್ ಅಧಿಕಾರಿ ಬಿ.ಪಾರ್ಥ ಸಾರಥಿ, ಜಿ.ವಿ.ಕೆ.ರಾವ್ ಮತ್ತಿತರ ಖ್ಯಾತನಾಮರು ಈ ಶಾಲೆಯಲ್ಲಿ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ಪಡೆದಕೊಂಡಿದ್ದಾರೆ.

ಶಾಲೆಯ ಕಟ್ಟಡ ಶಿಥಿಲವಾಗಿತ್ತು. ನೂತನ ಕಟ್ಟಡ ನಿರ್ಮಾಣ ಅನಿವಾರ್ಯವಾಗಿತ್ತು. ಈ ಬಗ್ಗೆ ಸಾರ್ವಜನಿಕರು ಸಹ ಸರ್ಕಾರದ ಗಮನ ಸೆಳೆದಿದ್ದರು. ನಂತರ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ ಕಂಪನಿ ತನ್ನ 2019-20ನೇ ಸಾಲಿನ ಸಿ.ಎಸ್.ಆರ್. ನಿಧಿಯಡಿಯಲ್ಲಿ ನೂತನ ಶಾಲಾ ಕಟ್ಟಡವನ್ನು ನಿರ್ಮಿಸಿಕೊಡಲು ಒಪ್ಪಿಗೆ ಸೂಚಿಸಿದೆ.

ನೂತನ ಕಟ್ಟಡದಲ್ಲಿ ಏನಿರಲಿದೆ
2019-20ರ ಸಿಎಸ್.ಆರ್. ಕಾರ್ಯಕ್ರಮದಡಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ ಕಂಪನಿ ಎರಡು ಮಹಡಿಗಳ ಕಟ್ಟಡವನ್ನು ನಿರ್ಮಿಸುತ್ತಿದೆ. 6,222 ಚದರಡಿಯ ಕೆಳ ಅಂತಸ್ತು ಮತ್ತು 4,776 ಚದರಡಿಯ ಮೊದಲ ಅಂತಸ್ತಿನ ಕಟ್ಟಡ ನಿರ್ಮಿಸಲು ಮುಂದಾಗಿದೆ.

ಒಂದೊಂದು ಕೊಠಡಿಯಲ್ಲೂ ಸುಮಾರು 50-60 ವಿದ್ಯಾರ್ಥಿಗಳು ಕೂರಬಹುದಾದ 8 ಬೋಧನಾ ಕೊಠಡಿಗಳು, ಮುಖ್ಯಶಿಕ್ಷಕರ, ಶಿಕ್ಷಕರ ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ, ಗಣಕ ಯಂತ್ರಗಳ ಕೊಠಡಿ, ಕ್ರೀಡಾ ಕೊಠಡಿ, ಅಡುಗೆ ಮನೆ, ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣವಾಗಲಿದೆ. ಶಾಲೆಯ ಮುಂಭಾಗ ಆಟದ ಮೈದಾನವೂ ಲಭ್ಯವಾಗಲಿದೆ.

*
ಟೊಯೊಟಾ ಸಂಸ್ಥೆ,ಕಟ್ಟಡವಲ್ಲದೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಡೆಸ್ಕ್‌ಗಳು, ಕಂಪ್ಯೂಟರ್‌ಗಳು, ಕ್ರೀಡಾ ಸಾಮಗ್ರಿ ಸೇರಿ ಎಲ್ಲ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡುತ್ತಿದೆ.
-ಎಚ್. ಶ್ರೀನಿವಾಸ್, ಶಾಲೆಯ ಮುಖ್ಯಶಿಕ್ಷಕ

*
ಕಟ್ಟಡ ಶಿಥಿಲವಾಗಿದ್ದರಿಂದ ಅನಿವಾರ್ಯವಾಗಿ ತೆರವುಗೊಳಿಸಲಾಗಿದೆ. ಇದೇ ಸ್ಥಳದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ ಕಂಪನಿ ಸಿ.ಎಸ್.ಆರ್ ನಿಧಿಯಲ್ಲಿ ನೂತನ ಕಟ್ಟಡ ನಿರ್ಮಿಸಿಕೊಡುತ್ತಿದೆ. ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ.
-ಗಾಣಕಲ್ ನಟರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.