ರಾಮನಗರ: ಶಿವಾಜಿ ರಾವ್ ಎಂಬ ಹೆಸರು ರಾಮನಗರ ಜಿಲ್ಲೆಯ ಸಂಗೀತ ಪ್ರಿಯರಿಗೆ ಚಿರಪರಿಚಿತ. 74 ವರ್ಷದ ಅವರು ಇಲ್ಲಿನ ವಿರಳ ಸಂಗೀತ ಗುರುಗಳಲ್ಲಿ ಒಬ್ಬರು.
ಕರ್ನಾಟಕ ಸಂಗೀತ ಪ್ರಕಾರದಲ್ಲಿ ಪ್ರಾವೀಣ್ಯ ಪಡೆದಿರುವ ಇವರು ಹಾಡುಗಾರಿಕೆ ಮತ್ತು ಹಾರ್ಮೋನಿಯಂ ನುಡಿಸುವುದರಲ್ಲಿ ಪರಿಣತರು. ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನಧಾರೆ ಎರೆದಿರುವ ಇವರ ಬಳಿ ಇಂದಿಗೂ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಗೀತ ಅಭ್ಯಾಸ ನಡೆಸುತ್ತಾರೆ. ಶಿಷ್ಯವೃಂದದಲ್ಲಿ ಮಕ್ಕಳು, ವಿದ್ಯಾರ್ಥಿಗಳು, ವಯಸ್ಕರು ಮತ್ತು ಗೃಹಿಣಿಯರು ಇದ್ದಾರೆ. ಇವರಿಂದ ಸಂಗೀತ ವಿದ್ಯಾಭ್ಯಾಸ ಕಲಿತ ವಿದ್ಯಾರ್ಥಿಗಳು ನಾಡಿನ ಹಲವೆಡೆ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇನ್ನೂ ಕೆಲವರು ದೆಹಲಿ, ಬೆಂಗಳೂರು ಮುಂತಾದೆಡೆ ಸಂಗೀತ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಶಿವಾಜಿರಾವ್ 6ನೇ ತರಗತಿ ಓದುತ್ತಿದ್ದಾಗ ಶಾಲೆಯಲ್ಲಿ ಒಮ್ಮೆ ಎಲ್ಲರೆದುರು ‘ಅರಳೆ ರಾಸಿಗಳಂತೆ, ಹಾಲ್ಗಡಲ ಅಲೆಯಂತೆ, ಆಗಸದಿ ತೇಲುತಿದೆ ಮೋಡಾ...’ ಎಂದು ಮಧುರ ಕಂಠದಿಂದ ಹಾಡಿದರಂತೆ. ಇದನ್ನು ಗಮನಿಸಿದ ಅವರ ಗುರು ರುದ್ರಾರಾಧ್ಯ ಅವರಿಗೆ ಸಂಗೀತ ಕಲಿತು ಹೆಚ್ಚಿನ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರಂತೆ.
‘ಸಂಗೀತ ಕ್ಷೇತ್ರದ ಯಾವುದೇ ಹಿನ್ನೆಲೆ ಇರದ ನನ್ನನ್ನು ಸಂಗೀತದ ಆರಾಧಕನಾಗುವಂತೆ ಮಾಡುವಲ್ಲಿ ಆ ಗುರುಗಳ ಪ್ರೇರಣೆಯೇ ಮುಖ್ಯ ಕಾರಣ’ ಎಂದು ಶಿವಾಜಿರಾವ್ ಇಂದಿಗೂ ಸ್ಮರಿಸುತ್ತಾರೆ. ನನ್ನ ಸಂಗೀತದ ಸಾಧನೆಗೆ ಪತ್ನಿ ಕೆ. ಗಾಯಿತ್ರಿಬಾಯಿ ಪಾತ್ರವೂ ಅಪಾರವಾಗಿದೆ ಎಂದು ಅವರು ಹೇಳುತ್ತಾರೆ.
ಶಿವಾಜಿ ರಾವ್ ಸಂಗೀತ ವಿದ್ವಾಂಸರಾದ ನಾಗಭೂಷಣಶಾಸ್ತ್ರಿ, ಹೊನ್ನಪ್ಪ ಭಾಗವತ ಅವರ ಗುರುಗಳಾದ ಸಮುನ್ ಮೂರ್ತಿ ಭಾಗವತ, ಎಸ್.ವಿ. ಅನಂತು, ನಾಟಕದ ಮೇಷ್ಟ್ರು ಕೃಷ್ಣಪ್ಪ, ಡೋಲು ನರಸಿಂಹಯ್ಯ ಅವರಿಂದ ಸಂಗೀತಾಭ್ಯಾಸ ಮಾಡಿದ್ದಾರೆ.
1976ರಲ್ಲಿ ಇವರು ರಾಮನಗರದಲ್ಲಿ ‘ಸಪ್ತ ಸ್ವರ ಸಂಗೀತ ವಿದ್ಯಾಲಯ’ ಪ್ರಾರಂಭಿಸಿದರು. ಪ್ರತಿ ವರ್ಷ 15 ರಿಂದ 18 ವಿದ್ಯಾರ್ಥಿಗಳು ರಾಜ್ಯ ಪ್ರೌಢಶಿಕ್ಷಣ ಮಂಡಳಿ ನಡೆಸುವ ಸಂಗೀತ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗುತ್ತಿದ್ದಾರೆ. ಸಪ್ತಸ್ವರ ಸಂಗೀತ ವಿದ್ಯಾಲಯ ಚಾರಿಟಬಲ್ ಟ್ರಸ್ಟ್ ನ ಮೂಲಕ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಮತ್ತು ಪ್ರೋತ್ಸಾಹಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅವರು ನಡೆಸುತ್ತಿದ್ದಾರೆ. ಪ್ರತಿ ವರ್ಷ ತ್ಯಾಗರಾಜರ, ಪುರಂದರದಾಸರ, ಕನಕದಾಸರ ಆರಾಧನೆ, ದಸರಾ ಕಾಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಸಂಗೀತವನ್ನು ಕಲಿಸುವುದರ ಜತೆಗೆ ಶಿವಾಜಿರಾವ್ ಅವರು ಸಂಗೀತ ಕ್ಷೇತ್ರವನ್ನು ಕುರಿತು ಬರೆದಿರುವ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಮತ್ತು ಸ್ಮರಣ ಸಂಚಿಕೆಗಳಲ್ಲಿ ಪ್ರಕಟಗೊಂಡಿವೆ. ಶಾಲಾಕಾಲೇಜುಗಳಲ್ಲಿ ಸಂಗೀತ ಕ್ಷೇತ್ರದ ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
‘ನನ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಸಂಗೀತ ಪರೀಕ್ಷೆಗಳಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾದರೆ ಅದೇ ನನಗೆ ಬಹುಮಾನ ಕೊಟ್ಟಂತೆ ಆಗುತ್ತದೆ’ ಎನ್ನುವ ಶಿವಾಜಿರಾವ್ ‘ಸಂಗೀತ ಕಲಿಯಲು ಮಕ್ಕಳು ತೋರಿಸುತ್ತಿರುವ ಉತ್ಸಾಹ ಇಂದು ಹೆಚ್ಚಾಗಿದೆ’ ಎನ್ನುತ್ತಾರೆ. ಹಲವು ವಿದ್ಯಾರ್ಥಿಗಳಿಗೆ ಅವರು ಉಚಿತವಾಗಿ ಸಂಗೀತ ಕಲಿಸಿಕೊಡುತ್ತಿದ್ದಾರೆ.
ಇವರು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ಇವರ ಸಂಗೀತ ಪ್ರೌಢಿಮೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ಸಾಂಸ್ಕೃತಿಕ ಲೋಕದ ರಾಯಭಾರಿ
50 ವರ್ಷಗಳಿಂದ ನಿರಂತರವಾಗಿ ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಶಿವಾಜಿರಾವ್ ಅವರು 1977ರಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಿತಿಯನ್ನು ಸ್ಥಾಪಿಸಿ, ಅದರ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಕಾರ್ಯದರ್ಶಿಯಾಗಿ, ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ವಿವಿಧ ಕಾರ್ಯಕ್ರಮಗಳು ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಿರಿಯ ಸಂಶೋಧಕ ಡಾ.ಎಂ.ಜಿ. ನಾಗರಾಜ್ ಅವರೊಂದಿಗೆ ಶಾಸನಗಳ ಅಧ್ಯಯನದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
‘ಕಾವ್ಯ ಕಾರಂಜಿ’ ಯುವ ಕವಿಗಳ ಕವನ ಸಂಕಲನ, ಡಾ.ಎಸ್. ಎಲ್. ತಿಮ್ಮಯ್ಯ ಅವರ ‘ವೈದ್ಯಾಭಿನಂದನ ಅಭಿನಂದನಾ ಗ್ರಂಥ’, ಸಾಹಿತಿ ಪ್ರೊ.ಎಂ. ಶಿವನಂಜಯ್ಯ ಅವರ ‘ಶಿವಗೌರವ’ ಅಭಿನಂದನಾ ಗ್ರಂಥ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಸಮ್ಮೇಳನದ ‘ಗಿರಿಸಂಪದ’ ಸ್ಮರಣ ಸಂಚಿಕೆಯ ಸಂಪಾದಕಾಗಿದ್ದಾರೆ. ಈಗಲೂ ಲೇಖನಗಳನ್ನು ಬರೆಯುವ ಹವ್ಯಾಸವನ್ನು ಹೊಂದಿರುವ ಇವರು, ಕವಿಗೋಷ್ಠಿಗಳಲ್ಲೂ ಭಾಗವಹಿಸಿ ಕವಿತೆಯನ್ನು ವಾಚಿಸುತ್ತಾರೆ.
ಪಠ್ಯೇತರ ಚಟುವಟಿಕೆ ಬೇಕು
‘ಇಂದಿನ ಪೋಷಕರಲ್ಲಿ ಮಕ್ಕಳ ಅಂಕ ಗಳಿಕೆಯೇ ಮುಖ್ಯವಾಗುತ್ತಿದೆ. ಇದರಿಂದ ಮಕ್ಕಳಿಗೆ ಮಾನಸಿಕ ಸ್ಥಿಮಿತ ಇಲ್ಲದಂತಾಗಿದೆ. ಯಾವ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳುವುದಿಲ್ಲವೋ ಅವರಿಗೆ ಮಾನಸಿಕ ಸ್ಥೈರ್ಯ ಕಡಿಮೆ’ ಎನ್ನುತ್ತಾರೆ ಶಿವಾಜಿ ರಾವ್.
‘ಸಂಗೀತ ಎನ್ನುವುದು ಕಾಲ, ದೇಶ, ಭಾಷೆ ಮೊದಲಾದ ಪರಿಮಿತಿಯನ್ನು ಮೀರಿದ ಕಲೆಯಾಗಿದೆ. ಪ್ರತಿಯೊಬ್ಬ ಮನುಷ್ಯನ ಮಾನಸಿಕ ಶಕ್ತಿಯನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಕಲೆಯನ್ನು ಪೋಷಕರು ಎಲ್ಲಾ ಮಕ್ಕಳಿಗೂ ಕಲಿಸಬೇಕು. ಶಾಲೆಗಳಲ್ಲೂ ಕಲಿಸಬೇಕು’ ಎಂದು ತಿಳಿಸಿದರು.
*ಸಂಗೀತ ಎನ್ನುವುದು ಮನುಷ್ಯ ಜೀವನ ಕ್ರಮ. ಅದರಿಂದ ಶಾಂತಿ ನೆಮ್ಮದಿ ದೊರೆಯುತ್ತದೆ. ಶ್ರುತಿ, ಲಯ, ತಾಳ ಇದ್ದರೆ ಮಾತ್ರ ಅದು ಸಂಗೀತ
-ಶಿವಾಜಿ ರಾವ್, ಸಂಗೀತ ವಿದ್ವಾನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.